ಬೆಂಗಳೂರು: ಬಳ್ಳಾರಿಯಲ್ಲಿ ನಡೆದಿರುವ ಗುಂಡಿನ ದಾಳಿ, ಗಲಭೆ ಪ್ರಕರಣದ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಬಳ್ಳಾರಿ ಘಟನೆಯನ್ನು ಟಿವಿಯಲ್ಲಿ ನೋಡಿದ್ದೇನೆ. ಗುಂಪು ಘರ್ಷಣೆ ಆಗಿದೆ. ಶಾಸಕರು, ಇನ್ನೂ ಯಾರು ಯಾರು ಭಾಗಿ ಆಗಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದರು.
ಗಲಭೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಗುಂಡು ಹೊಡೆದವರು ಯಾರು ಎಂದು ಗೊತ್ತಿಲ್ಲ. ಜನಾರ್ದನ ರೆಡ್ಡಿ ಅವರು ಮನೆಯಲ್ಲಿ ಇದ್ದಿದ್ದರೆ ಅಪಾಯ ಆಗ್ತಿತ್ತು ಎನ್ನುವ ಸುದ್ದಿ ನೋಡಿದೆ. ಎಲ್ಲಾ ವರದಿ ಬಂದ ಮೇಲೆ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಈಗಾಗಲೇ ನಾಲ್ಕು FIR ಗಳು ಆಗಿವೆಯಂತೆ. ಖಾಸಗಿ ವ್ಯಕ್ತಿ ಹೊರಗಡೆಯಿಂದ ಗುಂಡು ಹೊಡೆದಿದ್ದು ಎಂದು ಸುದ್ದಿ ನೋಡಿದೆ. ನಿಖರವಾಗಿ ಹೀಗೆ ಎಂದು ಹೇಳಲು ನನಗೆ ಕಷ್ಟ. ಶ್ರೀರಾಮುಲು ಅವರು ಜನಾರ್ಧನ ರೆಡ್ಡಿ ಅವರಿಗೆ ಗೆ ರಕ್ಷಣೆ ಕೊಡಬೇಕು ಎಂದು ಹೇಳಿದ್ದನ್ನು ಕೇಳಿದ್ದೇನೆ ಎಂದರು ಮಾಜಿ ಪ್ರಧಾನಿಗಳು.
ಕುಮಾರಸ್ವಾಮಿ ಕ್ರಮ ಕೈಗೊಂಡಿದ್ದರು:
ಗನ್ ಸಂಸ್ಕೃತಿ ರಾಜ್ಯಕ್ಕೂ ಬಂತು ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ; ಈ ಬಗ್ಗೆ ನಾನೇನು ಹೇಳಲ್ಲ. ಕುಮಾರಸ್ವಾಮಿ ಎರಡು ಸಲ ಸಿಎಂ ಆಗಿ ಸಾಕಷ್ಟು ಕ್ರಮ ತಗೊಂಡಿದ್ದಾರೆ. ವಿಪಕ್ಷನಾಯಕನಾಗಿಯೂ ಹೋರಾಟ ಮಾಡಿದ್ದಾರೆ. ಬಳ್ಳಾರಿ ಘಟನೆ ಬಗ್ಗೆ ನಾನು ಏನೂ ಮಾತಾಡಲ್ಲ. ಗೃಹ ಸಚಿವರು ಸಮಯಕ್ಕೆ ಸರಿಯಾಗಿ ಕ್ರಮ ತಗೋತಾರೆ. ಅವಕಾಶ ಕೊಟ್ರೆ ಸಿಎಂ ಆಗ್ತಿನಿ ಎಂದು ಪರಮೇಶ್ವರ್ ಅವರು ಹೇಳಿದ್ದಾರೆ. ಆ ಕಡೆ ಜಾಸ್ತಿ ಗಮನ ಕೊಡ್ತಿದಾರೆ ಎಂದು ದೇವೇಗೌಡರು ಹೇಳಿದರು.
ಡಿಕೆಶಿ ಹೇಳಿಕೆ ಬಗ್ಗೆ ಮೆಚ್ಚುಗೆ:
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನೈಸ್ ರೋಡ್ ವಿಚಾರದ ಬಗ್ಗೆ ಕಠಿಣವಾಗಿ ಮಾತಾಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ, ಅವರದ್ದು ಅತಿಯಾಗಿದೆ ಎಂದು ಡಿಎಂಸಿ ಹೇಳಿದ್ದಾರೆ. ಡಿಕೆಶಿ ಹಾಗೆ ಹೇಳಿದ್ದು ತುಂಬಾ ಸಂತೋಷ. ಅವರು ಕ್ರಮ ಕೈಗೊಂಡರೆ ಬಹಳ ಸಂತೋಷ ಎಂದು ದೇವೇಗೌಡರು ಹೇಳಿದರು.
ನಾವು ದೇವೇಗೌಡರ ಮೇಲೆ ಯಾವುದೇ ರಿಟ್ ಹಾಕಿಲ್ಲಾ ಎಂದು ಅಶೋಕ್ ಖೇಣಿ ಹೇಳ್ತಾರೆ. ಜನವರಿ 21ರಂದು ಸುಪ್ರೀಂ ಕೋರ್ಟ್ ನಲ್ಲಿ ನೈಸ್ ಕೇಸ್ ಇದೆ. ಮುಖ್ಯ ಕಾರ್ಯದರ್ಶಿ ಅವರನ್ನು ಪಾರ್ಟಿ ಮಾಡಿಲ್ಲಾ. ಬಾಬಾ ಕಲ್ಯಾಣಿ ಅರ್ಜಿದಾರರಾಗಿದ್ದಾರೆ. ರಾಜ್ಯ ಸರ್ಕಾರ ಏನು ಕ್ರಮ ತೆಗೆದುಕೊಳ್ಳುತ್ತೆ ಎಂದು ನೋಡೋಣ. ಡಿಸಿಎಂ ತುಂಬಾ ಕಠಿಣವಾಗಿ ಹೇಳಿದ್ದಾರೆ. ಅವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ ಎಂದರು ಮಾಜಿ ಪ್ರಧಾನಿಗಳು.
2024ರಲ್ಲಿ ನಾನು ಸಿಎಂಗೆ ಪತ್ರ ಬರೆದಿದ್ದೇನೆ. ಎಷ್ಟು ಎಕರೆ ಯಾವ ಯಾವ ಜಾಗದಲ್ಲಿ ಭೂಮಿ ತೆಗೆದುಕೊಂಡಿದ್ದಾರೆ? ಇದರ ಮೇಲೆ ಕ್ರಮ ಕೈಗೊಳ್ಳಿ ಎಂದು ಪತ್ರ ಬರೆದಿದ್ದೇನೆ. ಖೇಣಿ ಮೇಲೆ ಏನು ಕ್ರಮ ತೆಗೆದುಕೊಳ್ತಾರೆ ಎಂಬುದನ್ನು ನೋಡೋಣ. ಅವರು ಕ್ರಮ ತೆಗೆದುಕೊಂಡರೆ ತುಂಬಾ ಸಂತೋಷ ಎಂದು ಮಾಜಿ ಪ್ರಧಾನಿಗಳು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ನಿಮ್ಮ ‘ಮೊಬೈಲ್’ ಕಳೆದು ಹೋದಾಗ ತಪ್ಪದೇ ಹೀಗೆ ಮಾಡಿ, ಸಿಗೋದು ಗ್ಯಾರಂಟಿ








