ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಮಾಜಿ ಸಚಿವ ಎಸ್. ಸುರೇಶ್ ಅವರ ಈ ಕಾರ್ಯ ಭಾರೀ ಜನಮೆಚ್ಚುಗೆಗೆ ಪಾತ್ರವಾಗಿದ್ದು, ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.
ಬೆಳಗ್ಗೆ ಸುಮಾರು 6:30 ಗಂಟೆ, ಚಿಕಿತ್ಸೆಗಾಗಿ ತೆರಳುತ್ತಿದ್ದ ವೇಳೆ ಚುಮುಚುಮು ಚಳಿ. ಆ ವಾತಾವರಣದಲ್ಲಿ ನಗುನಗುತ, ಹಿಂದೆ ಕ್ಯಾರಿಯರ್ ನಲ್ಲಿ ಒಂದಷ್ಟು ನ್ಯೂಸ್ ಪೇಪರ್ ಗಳನ್ನು ಕಟ್ಟಿಕೊಂಡು ಸೈಕಲ್ ತುಳಿಯುತ್ತಿದ್ದ ಈ ಪೋರ ನನ್ನ ಕಣ್ಣಿಗೆ ಬಿದ್ದ. ಈ ಬಾಲಕನ ಹೆಸರು #ಪುರುಷೋತ್ತಮ. ಶಿವನಗರದ ಸಿದ್ದಗಂಗಾ ಶಾಲೆಯಲ್ಲಿ #ಒಂಬತ್ತನೇ ಕ್ಲಾಸ್ ಓದುತ್ತಿದ್ದಾನೆ. ( ಇಂದು ಅಯೋಧ್ಯೆಯಲ್ಲಿ ಪುರುಷೋತ್ತಮ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ದಿನ ಸಹ) ರಾಜಾಜಿನಗರದ ಇಂದಿರಾ ನಗರದಲ್ಲಿ ತಾಯಿ ಮತ್ತು ಇವನು ಇಬ್ಬರೇ ಇರುವುದು. ತಾಯಿ ಮನೆ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಮನೆಯ ಅಗತ್ಯತೆ ಗೊತ್ತಿರುವ ಬಾಲಕ ಪುರುಷೋತ್ತಮ್ ತನ್ನ ತಾಯಿಗೆ ಸಹಾಯ ಮಾಡಬೇಕೆಂದು ಪ್ರತಿದಿನ ಬೆಳಗ್ಗೆ ಸುಮಾರು 90 ಮನೆಗಳಿಗೆ ವೃತ್ತ ಪತ್ರಿಕೆಗಳನ್ನು (Newapapers) ತಲುಪಿಸುತ್ತಾನೆ. ತಿಂಗಳಿಗೆ ಅಂದಾಜು ₹ 800 – 900 ದುಡಿದು, ಅಷ್ಟೂ ಹಣವನ್ನು ತಾಯಿಗೆ ಕೊಡುತ್ತಾನೆ.
ಈ ಸ್ವಾಭಿಮಾನಿ ಬಾಲಕನ ಭುಜ ಹಿಡಿದು ಮಾತನಾಡಿಸಿ, ಕೈ ಕುಲುಕುತ್ತಾ ಅವನ ಮನೆಯ ವಿವರಗಳನ್ನೆಲ್ಲ ಕೇಳಿ, ಹೇಗೆ ಓದುತ್ತಿದ್ದಾನೆ ಎಂಬುದನ್ನು ವಿಚಾರಿಸಿ ಶುಭ ಕೋರಿದೆ. ತಕ್ಷಣ ಅದೇ ಇಂದಿರಾನಗರದಲ್ಲಿಯೇ ವಾಸ ಮಾಡುವ ನಮ್ಮ ಯುವ ಮೋರ್ಚಾ ಕಾರ್ಯಕರ್ತ ಗೌತಮ ರನ್ನು ಕರೆದು ಪುರುಷೋತ್ತಮ್ ಮನೆ ಹುಡುಕಿ ಅವರ ಮನೆಗೆ ಹೋಗಿ ಅವರ ಮನೆಯ ಅವಶ್ಯಕತೆಗಳನ್ನು ತಿಳಿದುಕೊಂಡು ಬನ್ನಿ. ನಾವು ಯಾವುದಾದರೂ ರೂಪದಲ್ಲಿ ಇವನ ಶಿಕ್ಷಣ ಕ್ಕೆ ನೆರವು ನೀಡುವ ಎಂದು ತಿಳಿಸಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮಾಜಿ ಸಚಿವ ಎಸ್. ಸುರೇಶ್ ಕುಮಾರ್, ರಾಜಾಜಿನಗರ ಕ್ಷೇತ್ರದ ಶಿವನಗರದಲ್ಲಿನ ಸಿದ್ಧಗಂಗಾ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕ ಮನೆಯ ಕಷ್ಟವನ್ನು ಅರಿತು ಪ್ರತಿದಿನ ಬೆಳಗ್ಗೆ ಸುಮಾರು 80 ಮನೆಗಳಿಗೆ ವೃತ್ತ ಪತ್ರಿಕೆಗಳನ್ನು ಹಂಚಿ ಅದರಿಂದ ಬರುವ ಹಣವನ್ನು ತಾಯಿಗೆ ಕೊಡುವ ವಿಚಾರ ತಿಳಿಸಿದ್ದೆ.
ನಂತರ ಅವರು ವಾಸ ಮಾಡುತ್ತಿರುವ ಇಂದಿರಾನಗರದ ನಮ್ಮ ಬಿಜೆಪಿ ಯುವ ಮೋರ್ಚಾ ಮುಖಂಡ ಶ್ರೀ ಗೌತಮ್ ಅವರನ್ನು ಅವರ ಮನೆಗೆ ಭೇಟಿ ಮಾಡಿ ಅವರ ಮನೆಯ ಪರಿಸ್ಥಿತಿ ಅರಿತು ನಾವು ಏನು ಮಾಡಬಹುದು ಎಂದು ನನಗೆ ವರದಿ ಕೊಡಬೇಕೆಂದು ತಿಳಿಸಿದೆ. ಗೌತಮ್ ಅವರು ಪುರುಷೋತ್ತಮ ಅವರ ಮನೆಗೆ ಭೇಟಿ ನೀಡಿ ನನಗೆ ನೀಡಿರುವ ಒಂದು ವರದಿ:
“ಸರ್.
ನಿಮ್ಮ ಸೂಚನೆಯ ಮೇರೆಗೆ ಬೆಳಗ್ಗೆ ನೀವು ಭೇಟಿಯಾದ ಪುರುಷೋತ್ತಮ್ ಅವರ ಇಂದಿರಾನಗರದಲ್ಲಿನ ಮನೆಗೆ ಭೇಟಿ ನೀಡಿದೆವು. ಭೇಟಿ ನೀಡಿದ ಸಮಯದಲ್ಲಿ ಅವರ ತಾಯಿ ಅವರು ಮನೆಯಲ್ಲಿದ್ದರು. ಪುರುಷೋತ್ತಮ್ ಅವರ ತಂದೆ ನಾಲ್ಕು ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದು ತಾಯಿ ಮನೆ ಕೆಲಸ ಮಾಡುವ ಮೂಲಕ ಏಳೆಂಟು ಸಾವಿರ ದುಡಿಯುವ ಮುಖಾಂತರ ತಮ್ಮ ಮಗನೊಂದಿಗೆ ತುಂಬು ಬಡತನದ ಜೀವನ ಸಾಗಿಸುತ್ತಿದ್ದಾರೆ. ನಾವು ಭೇಟಿ ನೀಡಿ ಸುರೇಶ್ ಕುಮಾರ್ ಸರ್ ಅವರು ನಿಮ್ಮನ್ನು ಭೇಟಿ ನೀಡಲು ಹೇಳಿದ್ದು, ನಿಮ್ಮ ಮಗನ ಶಿಕ್ಷಣಕ್ಕೆ ಅನುಕೂಲವಾಗುವ ಎಲ್ಲ ವ್ಯವಸ್ಥೆಗಳನ್ನು ಮಾಡುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದೆವು.
ಹಾಗೂ ಅವರ ಮನೆಯ ಪರಿಸ್ಥಿತಿಯನ್ನು ಕೇಳಿ ತಿಳಿದು, ಆ ಬಾಲಕನ ತಾಯಿಗೆ ವಿಧವಾ ವೇತನ ಅವಶ್ಯಕತೆ ಇದ್ದು ಅದಕ್ಕೆ ಬೇಕಾದ ದಾಖಲೆಗಳನ್ನು ನೀಡುವಂತೆ ತಿಳಿಸಿ ಶಾಸಕರು ಆದಷ್ಟು ಬೇಗ ನಿಮಗೆ ಪಿಂಚಣಿ ಬರುವ ವ್ಯವಸ್ಥೆ ಮಾಡುತ್ತಾರೆ ಎಂದು ತಿಳಿಸಿದೆವು. ಆ ಬಾಲಕನು ಶಿವನಗರದ ಸಿದ್ಧಗಂಗಾ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು, “National Means Cum-Merit Scholarship Scheme” ಪರೀಕ್ಷೆಯಲ್ಲಿ ಜಿಲ್ಲೆಗೇ #ಮೊದಲನೇ_ಅಂಕ ತೆಗೆದು ಉತ್ತೀರ್ಣನಾಗಿದ್ದು ಅವನಿಗೆ ಪ್ರತಿ ತಿಂಗಳು 1000 ರೂಪಾಯಿ ಕೇಂದ್ರ ಸರ್ಕಾರದಿಂದ ಸಹಾಯಧನ ಬರುತ್ತಿದೆ ಎಂದು ಅವರ ಅಮ್ಮ ಹರ್ಷದಿಂದ ವ್ಯಕ್ತಪಡಿಸಿದರು.
ಹಾಗೂ ಅವರಿಬ್ಬರಿಗೂ ನಿಮ್ಮ ಫೇಸ್ಬುಕ್ ಪೋಸ್ಟನ್ನು ತೋರಿಸಿದಾಗ ಆ ತಾಯಿಯು ಸಂತೋಷದಿಂದ ಮಗನನ್ನು ಅಪ್ಪಿಕೊಂಡು ಮುತ್ತಿಟ್ಟರು. ಹಾಗೂ ಅವರಿಗೆ ನಿಮ್ಮ ಮೇಲಿನ ಅಭಿಮಾನ ಅಪಾರವಾಗಿತ್ತು. ಆ ಬಾಲಕ ನಮ್ಮ ಶಾಲೆಗೆ ಸಾರ್ ಯಾವಾಗಲೂ ಬರ್ತಾ ಇರ್ತಾರೆ ಅಣ್ಣ ತುಂಬಾ ಒಳ್ಳೆವ್ರು ಅಂತ ಖುಷಿಯಿಂದ ಹೇಳಿಕೊಂಡ. ನಾವು ಅವರೊಂದಿಗೆ ಸಲ್ಪ ಸಮಯ ಮಾತನಾಡಿ ನಮ್ಮ ಶಾಸಕರು ಹಾಗೂ ನಾವೆಲ್ಲರೂ ನಿಮ್ಮೊಂದಿಗೆ ಇರುತ್ತೇವೆ ಮುಂದಿನ ವರ್ಷ ನಮ್ಮ ಶಾಸಕರ ನೇತೃತ್ವದಲ್ಲಿ ನಡೆಯುವ ವಿಕಾಸನ 10ನೇ ತರಗತಿಯವರಿಗೆ ಉಚಿತ ತರಬೇತಿ ಕೇಂದ್ರಕ್ಕೆ ನಿಮ್ಮ ಮಗನನ್ನು ದಾಖಲಿಸಿ ಹಾಗೂ ನಿಮ್ಮ ಮಗನ ಶಿಕ್ಷಣದ ಎಲ್ಲ ಜವಾದ್ಭಾರಿಯನ್ನು ನಮ್ಮ ಶಾಸಕರು ನೋಡಿಕೊಳ್ಳುವರು, ನಿಮ್ಮ ಶಾಲೆಯ ಶುಲ್ಕ, ಪುಸ್ತಕಗಳು, ಇತರೆ ವ್ಯವಸ್ಥೆ ಮಾಡುತ್ತಾರೆ. ಮಗನನ್ನು ಚೆನ್ನಾಗಿ ಓದಿಸಿ, ಧೈರ್ಯದಿಂದಿರಿ ಎಂದು ತಿಳಿಸಿದೆವು. ನಂತರ ಅವರಿಗೆ ತಕ್ಷಣದ ಅವಶ್ಯಕತೆ ಏನಾದರೂ ಇದೆಯೇ ಎಂದು ಕೇಳಿದಾಗ ಆ ಮಗು ಅಣ್ಣ ಜಾಮಿಟ್ರಿ ಬಾಕ್ಸ್ ಕೊಡ್ಸಿ ಎಂದು ಕೇಳಿದ. ಅವನಿಗೆ ಏನು ಬೇಕೆಂದು ಕೇಳಿ ಅದನ್ನು ಪೂರೈಸಿ ಎಂಬ ನಿಮ್ಮ ಸೂಚನೆ ಮೇರೆಗೆ ಅವನನ್ನು ನನ್ನೊಂದಿಗೆ ಅಂಗಡಿಗೆ ಕರೆತಂದು ಜಾಮೆಟ್ರಿ ಬಾಕ್ಸ್ ಒಂದೆರಡು ಪೆನ್ಸಿಲ್, ಪೆನ್, ಪುಸ್ತಕ ಕೊಡಿಸಿ, ತಿನ್ನಲು ಏನಾದರೂ ಬೇಕಾ ಅಂತ ಕೇಳಿದಾಗ ಅವನು ತುಂಬಾ ಮುಗ್ದತೆಯಿಂದ ಮನೆಗೆ ತಗೊಂಡು ಹೋಗ್ತೀನಿ ಅಣ್ಣ, ಅಮ್ಮನೂ ಇರ್ತಾರೆ ಅಂದ,
ಅವನಿಗೆ ಬಿಸ್ಕತ್ತು ಹಾಗೂ ಐಸ್ ಕ್ರೀಮ್ ಕೊಡಿಸಿ ಅವನನ್ನು ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ನನ್ನ ನಂಬರ್ ನೀಡಿ ಯಾವುದೇ ಅವಶ್ಯಕತೆ ಇದ್ದರೂ ಸಂಪರ್ಕಿಸಿ ಎಂದು ತಿಳಿಸಿ ಬಂದೆವು ಸರ್. ನಿಮ್ಮ ಈ ಕಾರ್ಯದಿಂದ ಆ ಕುಟುಂಬಕ್ಕೆ ಅವರ ಭವಿಷ್ಯದ ಭರವಸೆ ಬಂದಿತು ಅನಿಸಿತು ಸರ್” ನಾನು ಹೇಳಿದಂತೆ ಪುರುಷೋತ್ತಮ್ ಮನೆಗೆ ಭೇಟಿ ನೀಡಿ ಅವರಿಗೆ ಎಲ್ಲಾ ರೀತಿಯ ಭರವಸೆ ಕೊಟ್ಟು ಬಂದ ನಮ್ಮ ಕಾರ್ಯಕರ್ತ ಗೌತಮ್ ರಿಗೆ ಧನ್ಯವಾದಗಳು. ಕುಟುಂಬಕ್ಕೆ ಗೌತಮ್ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
https://www.facebook.com/share/p/19kskNyDJn/?mibextid=oFDknk