ಮಂಡ್ಯ : ಮದ್ದೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಭವನಕ್ಕೆ ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ಮುಖಂಡರು ತನು, ಮನ, ಧನ ನೆರವು ನೀಡಬೇಕೆಂದು ಶಾಸಕ ಕೆ.ಎಂ.ಉದಯ್ ಕರೆ ನೀಡಿದರು.
ಕದಲೂರು ಗ್ರಾಮದ ಶಾಸಕರ ನಿವಾಸದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ ಅವರೊಂದಿಗೆ ತೆರಳಿದ ಸುರೇಶ್ ಕಂಠಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಭವನಕ್ಕೆ 1 ಲಕ್ಷ ರೂ ದೇಣಿಗೆಯನ್ನು ಶಾಸಕ ಕೆ.ಎಂ.ಉದಯ್ ಅವರಿಗೆ ಹಸ್ತಾಂತರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಹಲವಾರು ವರ್ಷಗಳಿಂದ ಕಾಂಗ್ರೆಸ್ ಕಛೇರಿಗೆ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಇತ್ತು. ಹೀಗಾಗಿ ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ರಾಜ್ಯಾದ್ಯಂತ ಕಾಂಗ್ರೆಸ್ ಭವನಗಳನ್ನು ನಿರ್ಮಾಣ ಮಾಡಬೇಕೆಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕರೆ ನೀಡಿದ್ದಾರೆ. ಹೀಗಾಗಿ ಪ್ರವಾಸಿ ಮಂದಿರದ ಬಳಿಯ ನನ್ನ ಸ್ವಂತ ನಿವೇಶನವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನೋಂದಣಿ ಮಾಡಿಸಿದ್ದು, ಮಾಜಿ ಸಂಸದರಾದ ಡಿ.ಕೆ.ಸುರೇಶ್ ಅವರು ಕೂಡ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಕಾಮಗಾರಿಯೂ ಸಹ ಭರದಿಂದ ಸಾಗುತ್ತಿದ್ದು, ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಂಡು ಆ ಕಛೇರಿಯಿಂದಲೇ ಪಕ್ಷದ ಎಲ್ಲಾ ಸಭೆ, ಸಮಾರಂಭ ಹಾಗೂ ಚುನಾವಣಾ ಪ್ರಕ್ರಿಯೆಗಳು ನಡೆಯಲಿವೆ ಎಂದರು.
ನಿಮ್ಮೆಲ್ಲರ ಸಹಕಾರದಿಂದ ಭವ್ಯವಾದ ಕಾಂಗ್ರೆಸ್ ಭವನ ನಿರ್ಮಾಣ ಮಾಡುತ್ತಿದ್ದೇವೆ. ರಾಜಕಾರಣದಲ್ಲಿ ಯಾರೂ ಶಾಶ್ವತ ಅಲ್ಲ. ಕಾಲ ಚಕ್ರ ತಿರುಗಿದಂತೆ ನಡೆಯುತ್ತಿರುತ್ತದೆ. ನಮ್ಮ ಗುರುತುಗಳನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕು. ಈ ನಿಟ್ಟಿನಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ವಂತಿಕೆ ನೀಡಬೇಕು. ಇಲ್ಲಿ ನಿರ್ಮಾಣವಾಗುವ ಭವನ ಕೇವಲ ಕಾಂಗ್ರೆಸ್ ಭವನ ಅಲ್ಲ. ಕಾರ್ಯಕರ್ತರಿಗೆ ದೇವಸ್ಥಾನ. ಪ್ರಜಾಪ್ರಭುತ್ವವನ್ನು ಉಳಿಸುವ ಸೌಧವಾಗಲಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದೇ ರೀತಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ಶಕ್ತಿಯನುಸಾರ ದೇಣಿಗೆ ನೀಡಬೇಕೆಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಮಾತನಾಡಿ, ಕಾಂಗ್ರೆಸ್ ಭವನ ನಿರ್ಮಾಣದಿಂದ ಪಕ್ಷದ ಸಂಘಟನೆಗೆ ಉಪಕಾರಿಯಾಗಲಿದ್ದು, ಕಾರ್ಯಕರ್ತರಿಗೂ ಅನುಕೂಲವಾಗಲಿದೆ. ಹೀಗಾಗಿ
ರಾಜ್ಯಾದ್ಯಂತ ಕಾಂಗ್ರೆಸ್ ಭವನಗಳ ನಿರ್ಮಾಣಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕರೆ ನೀಡಿದ್ದಾರೆ. ಈಗಾಗಲೇ ನಗರದಲ್ಲಿ ಕಾಂಗ್ರೆಸ್ ಭವನಕ್ಕೆ ಶಾಸಕರಾದ ಉದಯ್ ಅವರು ತಮ್ಮ ಸ್ವಂತ ನಿವೇಶನವನ್ನು ನೀಡಿದ್ದಾರೆ. ಮಾಜಿ ಸಂಸದರಾದ ಡಿ.ಕೆ.ಸುರೇಶ್ ಅವರು ಚಾಲನೆ ಕೂಡ ನೀಡಿದ್ದು, ಕಾಮಗಾರಿಯೂ ಸಹ ಭರದಿಂದ ಸಾಗುತ್ತಿದೆ. ಹೀಗಾಗಿ ಕಟ್ಟಡವು ಆದಷ್ಟು ಬೇಗ ನಿರ್ಮಾಣವಾಗಲಿ ಎಂಬ ಉದ್ದೇಶದಿಂದ ವೈಯಕ್ತಿಕವಾಗಿ ಶಾಸಕರಿಗೆ 1 ಲಕ್ಷ ರೂ. ದೇಣಿಗೆ ನೀಡಲಾಗುತ್ತಿದೆ ಎಂದರು.
ವರದಿ : ಗಿರೀಶ್ ರಾಜ್, ಮಂಡ್ಯ
ಡಿ.31ರೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡಿ: ಇಲ್ಲದಿದ್ರೆ PAN ನಿಷ್ಕ್ರಿಯ!








