ಬೆಂಗಳೂರು : ಖ್ಯಾತ ಪ್ರವಚನಕಾರರು, ನಡೆದಾಡುವ ದೇವರಂದೆ ಇಡೀ ವಿಶ್ವದಾದ್ಯಂತ ಪ್ರಖ್ಯಾತಿಗೆ ಕಾರಣರಾದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ ತಿಳಿದುಬಂದಿದೆ.
ಇಂದು ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಲು ಮಾಜಿ ಸಿಎಂ ಸಿದ್ದರಾಮಯ್ಯ ವಿಶೇಷ ವಿಮಾನ ಮೂಲಕ ತೆರಳಲಿದ್ದಾರೆ. ಸಿದ್ದೇಶ್ವರ ಶ್ರೀಗಳ ಆಶ್ರಮಕ್ಕೆ ತೆರಳಿ ಆರೋಗ್ಯ ವಿಚಾರಿಸಲಿದ್ದಾರೆ. ಅವರಿಗೆ ಆರೋಗ್ಯದ ಬಗ್ಗೆ ಧೈರ್ಯ ತುಂಬಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ಒಂದು ವಾರಕ್ಕಿಂತಲೂ ಹೆಚ್ಚು ದಿನದಿಂದ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿರುವ ಸ್ವಾಮೀಜಿಗಳ ದರ್ಶನಕ್ಕಾಗಿ ನಿತ್ಯ ಸಾವಿರಾರು ಭಕ್ತರು, ಜನಪ್ರತಿನಿಧಿಗಳು, ಸಚಿವರು, ಶಾಸಕರುಗಳು ಆಶ್ರಮಕ್ಕೆ ಭೇಟಿ ನೀಡುತ್ತಿದ್ದಾರೆ.
ಶ್ರೀಗಳ ಅನಾರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಬಿಎಲ್ಡಿಇ ಸಂಸ್ಥೆಯ ಬಿ. ಎಂ ಪಾಟೀಲ್ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ ವೈದ್ಯರ ತಂಡ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದೆ. ಯುರೋಲಾಜಿಸ್ಟ್ ಡಾ. ಎಸ್.ಬಿ. ಪಾಟೀಲ್, ಬಿ.ಎಂ ಪಾಟೀಲ್ ಮೆಡಿಕಲ್ ಕಾಲೇಜ್ ಪ್ರಾಂಶುಪಾಲರಾದ ಡಾ. ಅರವಿಂದ ಪಾಟೀಲ್, ಡಾ. ಮಲ್ಲಣ್ಣ ಮೂಲಿಮನಿ ಎಂಡಿ ಅವರ ನೇತೃತ್ವದಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ನಡುವೆ ಶ್ರೀಗಳ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಳವಳ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಗಳ ದರ್ಶನಕ್ಕೆ ಸಿಎಂ ಬೊಮ್ಮಾಯಿ ಅವರು ಬೆಂಗಳೂರಿನಿಂದ ವಿಜಯಪುರಕ್ಕೆ ಭೇಟಿ ನೀಡಿದ್ದು, ಶ್ರೀಗಳ ದರ್ಶನ ಪಡೆದುಕೊಂಡಿದ್ದಾರೆ.