ಶಿವಮೊಗ್ಗ: 2022 ರ ಜುಲೈ 15 ರಂದು ನಡೆದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ 63ನೇ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಏಕರೂಪ್ ಕೌರ್, ಸಂಸ್ಥೆಯ ಷೇರುದಾರರನ್ನು ಉದ್ದೇಶಿಸಿ ಮಾತನಾಡಿ, 2021-22ರ ಹಣಕಾಸು ವರ್ಷದ ಕಾರ್ಯಾಚರಣೆಯ ಹಾಗೂ ಪರಿಶೋಧಿಸಲ್ಪಟ್ಟ ಲೆಕ್ಕಪತ್ರಗಳ ಪ್ರಮುಖ ಅಂಶಗಳನ್ನು ಕೆಳಕಂಡಂತೆ ಹಂಚಿಕೊಂಡಿದ್ದಾರೆ.
ಸಂಸ್ಥೆಯು ಪ್ರಸಕ್ತ 2021-22ನೇ ಸಾಲಿನ ಆರ್ಥಿಕ ಸ್ಥಿತಿಯನ್ನು ಕ್ರೋಡಿಕರಿಸಲಾಗಿದ್ದು, ತೆರಿಗೆ ಪೂರ್ವ ರೂ.107.33 ಕೋಟಿಗಳ ದಾಖಲೆ ಲಾಭ ಗಳಿಸಿದೆ ಹಾಗೂ ರೂ.66.61 ಕೋಟಿಗಳ ನಿವ್ವಳ ಲಾಭವನ್ನು ಗಳಿಸಿದೆ. ಸಂಸ್ಥೆಯು 2021-22ರ ಹಣಕಾಸು ವರ್ಷದಲ್ಲಿ ವಿವಿಧ ಸಾಲ ಯೋಜನೆಗಳ ಮೂಲಕ 493.25 ಕೋಟಿ ರೂ.ಗಳ ಸಾಲ ಮಂಜೂರಾತಿ ಮಾಡಿದ್ದು, ಇದರಲ್ಲಿ ರೂ.432.72 ಕೋಟಿಗಳ ಮೊತ್ತದ ಮಂಜೂರಾತಿಯು ಸೂಕ್ಷ್ಮ ಮತ್ತು ಸಣ್ಣ ಗಾತ್ರದ ಕೈಗಾರಿಕಾ ಘಟಕಗಳಿಗೆ ಒಳಗೊಂಡಿರುತ್ತದೆ. 2022ರ ಮಾರ್ಚ್ ಅಂತ್ಯದವರೆಗೆ 1,75,123 ಉದ್ಯಮಗಳಿಗೆ 18,779.63 ಕೋಟಿ ರೂ.ಗಳ ಸಂಚಿತ ಸಾಲ ಮಂಜೂರಾತಿ ಮಾಡಲಾಗಿದೆ. ಸದರಿ ವರ್ಷದಲ್ಲಿ 386.46 ಕೋಟಿ ರೂ.ಗಳ ಸಾಲ ವಿತರಿಸಿದ್ದು, 2022ರ ಮಾರ್ಚ್ ಅಂತ್ಯದವರೆಗೆ 14,776.29 ಕೋಟಿ ರೂ.ಗಳಷ್ಟು ಸಂಚಿತ ವಿತರಣೆ ಮಾಡಲಾಗಿದೆ. ಸದರಿ ವರ್ಷದಲ್ಲಿ ಒಟ್ಟು 741.89 ಕೋಟಿ ರೂ.ಗಳ ವಸೂಲಾತಿ ಮಾಡಲಾಗಿದೆ, ಇದರಲ್ಲಿ 317.64 ಕೋಟಿ ರೂ.ಗಳಷ್ಟು ಮೊತ್ತವು ಬಡ್ಡಿಯ ಪಾಲಾಗಿರುತ್ತದೆ. 2022ರ ಮಾರ್ಚ್ ಅಂತ್ಯದವರೆಗೆ ಸಂಚಿತ ವಸೂಲಾತಿಯ ಮೊತ್ತವು 19,259.93 ಕೋಟಿ ರೂ.ಗಳಷ್ಟಾಗಿರುತ್ತದೆ. ಹಾಗೆಯೇ ಹಿಂದಿನ ಹಣಕಾಸು ವರ್ಷ ಶೇ. 5.09ರಷ್ಟು ಇದ್ದ ನಿವ್ವಳ ಅನುತ್ಪಾದಕ ಆಸ್ತಿಯು ಪ್ರಸಕ್ತ ವರ್ಷದಲ್ಲಿ ಶೇಕಡಾ 4.74ಕ್ಕೆ ಇಳಿದಿದೆ.
ಸಂಸ್ಥೆಯು ಸ್ಥಾಪಿತ ದಿನದಿಂದ ಇಲ್ಲಿಯವರೆಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 22,072 ಉದ್ಯಮಿಗಳಿಗೆ 2,432.62 ಕೋಟಿ ರೂ.ಗಳಿಗೂ ಅಧಿಕ ಸಾಲಗಳ ಮಂಜೂರಾತಿ ನೆರವನ್ನು ನೀಡಿರುತ್ತದೆ. ಸಂಸ್ಥೆಯು ಆರಂಭದಿಂದ ಇಲ್ಲಿಯವರೆಗೂ 31,202 ಕ್ಕೂ ಹೆಚ್ಚಿನ ಮಹಿಳಾ ಉದ್ಯಮಿದಾರರಿಗೆ 4,511.44 ಕೋಟಿ ರೂ.ಗಳ ಸಾಲ ಮಂಜೂರಾತಿ ಮಾಡಿದೆ. ಹಾಗೂ ಹಿಂದುಳಿದ ಮತ್ತು ಅಲ್ಪ ಸಂಖ್ಯಾತ 41,199 ಉದ್ಯಮಿಗಳಿಗೂ ಇಲ್ಲಿಯವರೆಗೆ 1,834.60 ಕೋಟಿ ರೂ.ಗಳ ಸಾಲ ಮಂಜೂರಾತಿ ನೆರವನ್ನು ಒದಗಿಸಿದೆ.
ಆಕರ್ಷಕ ಸಹಾಯಧನ ಯೋಜನೆಯಡಿ ನೆರವಿನ ವಿವರ: ಸದರಿ ವರ್ಷದಲ್ಲಿ ಸಂಸ್ಥೆಯು, ರಾಜ್ಯ ಸರ್ಕಾರದ ಬೆಂಬಲದೊಂದಿಗೆ ರೂಪಿತವಾದ ವಿವಿಧ ಬಡ್ಡಿ ಸಹಾಯಧನ ಯೋಜನೆಗಳಲ್ಲಿ, 37 ಮಹಿಳಾ ಉದ್ಯಮಿಗಳಿಗೆ 42.76 ಕೋಟಿ ರೂ.ಗಳ ಮಂಜೂರಾತಿ ಮಾಡಲಾಗಿದೆ. 31ನೇ ಮಾರ್ಚ್ 2022ರ ಅಂತ್ಯದವರೆಗೆ 917.34 ಕೋಟಿ ರೂ.ಗಳ ಸಂಚಿತ ನೆರವನ್ನು 1,252 ಮಹಿಳಾ ಉದ್ಯಮಿಗಳಿಗೆ ಒದಗಿಸಲಾಗಿದೆ. ಹಾಗೆಯೇ ಸದರಿ ವರ್ಷದಲ್ಲಿ 177 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ 164.61 ಕೋಟಿ ರೂ.ಗಳ ಸಾಲ ಮಂಜೂರು ಮಾಡಲಾಗಿದೆ. ಸದರಿ ಹಣಕಾಸು ವರ್ಷದ ಅಂತ್ಯದವರೆಗೆ 1,942.19 ಕೋಟಿ ರೂ.ಗಳ ಸಂಚಿತ ನೆರವನ್ನು 3,456 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ನೀಡಲಾಗಿದೆ.
ಸೂಕ್ಷ್ಮ ಮತ್ತು ಸಣ್ಣ ಗಾತ್ರದ ಘಟಕಗಳಿಗೆ ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ 213 ಘಟಕಗಳಿಗೆ 243.02 ಕೋಟಿ ರೂ.ಗಳ ಸಾಲ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ ಸದರಿ ಹಣಕಾಸು ವರ್ಷದ ಅಂತ್ಯದವರೆಗೆ, 912 ಉದ್ಯಮಗಳಿಗೆÉ 995.20 ಕೋಟಿ ರೂ.ಗಳ ಸಂಚಿತ ನೆರವನ್ನು ನೀಡಲಾಗಿದೆ.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ರಾಜ್ಯ ಸರ್ಕಾರದ ನೆರವು: 2021-22ರ ಹಣಕಾಸು ವರ್ಷದಲ್ಲಿ ಕರ್ನಾಟಕ ಸರ್ಕಾರವು ಸಂಸ್ಥೆಗೆ 50.00 ಕೋಟಿ ರೂ.ಗಳ ಈಕ್ವಿಟಿ ಬಂಡವಾಳವನ್ನು ಹಾಗೂ 171.85 ಕೋಟಿ ರೂ.ಗಳ ಬಡ್ಡಿ ಸಹಾಯಧನ ಯೋಜನೆಗಳಿಗೆ ಪೂರಕ ನೆರವನ್ನು ಒದಗಿಸಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯಮಿಗಳು ಸ್ಥಾಪಿಸುವ ಜವಳಿ ಮತ್ತು ಕೈಮಗ್ಗ ಘಟಕಗಳಿಗೆ ವಿಶೇಷ ಹಣಕಾಸಿನ ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರವು 25.51 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ.
ಕೋವಿಡ್ ಅವಧಿಯಲ್ಲಿ ಸಾಲಗಾರರಿಗೆ ಒದಗಿಸಿರುವ ಸೌಲಭ್ಯಗಳು: ಭಾರತೀಯ ರಿಸರ್ವ ಬ್ಯಾಂಕ್ ಅಧಿಸೂಚÀನೆ ರೆಸಲ್ಯೂಷನ್ ಫ್ರೇಮ್ ವರ್ಕ್ 2.0 ಗೆ ಅನುಗುಣವಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಘಟಕಗಳಿಗೆ ಕೋವಿಡ್-19ರ ಸಾಂಕ್ರಾಮಿಕ ರೋಗದ ಪರಿಣಾಮದ ಸಮಸ್ಯೆಗಳಿಗೆ ಸಾಲ ಮರುಪಾವತಿಯ ಪುನರ್ರಚನೆ ಸೌಲಭ್ಯ ನೀಡಲಾಯಿತು.
2022-23ನೇ ವರ್ಷದ ಗುರಿಗಳು : ಸಂಸ್ಥೆಯು ಹಣಕಾಸು ವರ್ಷ 2022-23ರಲ್ಲಿ ರೂ.1010.00 ಕೋಟಿಗಳ ಸಾಧಾರಣ ಮಂಜೂರಾತಿ ಗುರಿಯನ್ನು ಇಟ್ಟುಕೊಂಡು ಗುಣಮಟ್ಟದ ಉದ್ಯಮಗಳಿಗೆ ಹಣಕಾಸು ನೆರವು ನೀಡಿ ಆರ್ಥಿಕ ಅಭಿವೃದ್ಧ್ದಿಯ ಯೋಜನೆ ಹೊಂದಿದೆ. 2022-23ರಲ್ಲಿ ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಮತ್ತು ಮಹಿಳಾ ಉದ್ಯಮಿಗಳಿಗೆ ಹಾಗೂ ಅತಿ ಸಣ್ಣ ಮತ್ತು ಸಣ್ಣ ಗಾತ್ರದ ಘಟಕಗಳಿಗೆ ಲಭ್ಯವಿರುವ ಬಡ್ಡಿ ಸಹಾಯಧನ ಯೋಜನೆಯಿಂದ ಮುಂಬರುವ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಮಂಜೂರಾತಿ ಹಾಗೂ ವಿತರಣೆಯ ಗುರಿ ಸಾಧಿಸಲು ಅನುಕೂಲವಾಗುವ ನಿರೀಕ್ಷೆಯಿದೆ. ಅಲ್ಲದೆ ಅನುತ್ಪಾದಕ ಆಸ್ತಿಗಳನ್ನು ಮತ್ತಷ್ಟು ಕಡಿಮೆಗೊಳಿಸಲು ಸಂಸ್ಥೆಯು ಹೆಚ್ಚಿನ ಒತ್ತು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.