ಬಾಗಲಕೋಟೆ : ಕಳೆದ ವರ್ಷ ಮಂಡ್ಯ, ಮೈಸೂರು ಭಾಗದಲ್ಲಿ ಮಕ್ಕಳ ಭ್ರೂಣ ಪತ್ತೆ ಹಾಗೂ ಹತ್ಯೆ ಇಡೀ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಕೂಡ ಬಂಧಿಸಲಾಗಿತ್ತು.ಆದರೂ ಈ ಒಂದು ಭ್ರೂಣ ಹತ್ಯೆಗಳು ನಿಲ್ಲುತ್ತಿಲ್ಲ. ಹಾಗಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ಹಾಗೂ ಬಾದಾಮಿ ಪಟ್ಟಣದಲ್ಲಿನ ಪ್ರತಿಷ್ಟಿತ ಆಸ್ಪತ್ರೆಗಳ ಆಸ್ಪತ್ರೆಗಳ ಮೇಲೆ ದೆಹಲಿಯ ಕೇಂದ್ರ ಪ್ರಸವಪೂರ್ವ ಭ್ರೂಣ ಪತ್ತೆ ನಿಷೇಧ ತಂಡ ದಾಳಿ ಮಾಡಿದೆ.
ಇತ್ತೀಚೆಗೆ ಆಯಾ ಒಬ್ಬಳು ಮಹಾರಾಷ್ಟ್ರ ಮೂಲದ ಮಹಿಳೆಯ ಗರ್ಭಪಾತ ಮಾಡಿ ಅವಳ ಸಾವಿಗೆ ಕಾರಣಳಾಗಿದ್ದಳು. ಆ ಪಾತಕಿ ಈಗ ಅಂದರ್ ಆಗಿದ್ದಾಳೆ. ಅದು ಮಾಸುವ ಮುನ್ನವೇ ಮತ್ತಿಬ್ಬರು ವೈದ್ಯೆಯರು ಗರ್ಭಪಾತ ದಂಧೆ ಸುಳಿಯಲ್ಲಿ ಸಿಲುಕಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕೇಂದ್ರ ತಂಡ ದಾಳಿ ನಡೆಸಿದೆ. ಮುಧೋಳ ನಗರದ ಮಲಘಾಣ್ ಆಸ್ಪತ್ರೆ ಮೇಲೆ ಕೇಂದ್ರದ 10 ಜನರ ತಂಡ ದಾಳಿ ಮಾಡಲಾಗಿದ್ದು, ಡಾ.ಆಶಾ ಮಲಘಾಣ್ ಎಂಬುವವರು ಸ್ಕ್ಯಾನಿಂಗ್ ಸೆಂಟರ್ ಬಳಕೆ ಮಾಡುತ್ತಿದ್ದಾರೆ.
ಅದರ ಮೂಲಕ ಬ್ರೂಣ ಸ್ಕ್ಯಾನಿಂಗ್, ನಂತರ ಗರ್ಭಪಾತ ಮಾಡುತ್ತಾರೆ ಎಂದು ದೆಹಲಿ ತಂಡಕ್ಕೆ ಖಚಿತ ಮಾಹಿತಿ ಬಂದಿದೆ.ಇದರಿಂದ ಆಸ್ಪತ್ರೆ ಮೇಲೆ ದಾಳಿ ಮಾಡಿ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಿ, ಪ್ರಮುಖ ಮಾಹಿತಿ ಕಲೆ ಹಾಕಿದೆ. ಈ ಕುರಿತು ಮಾತನಾಡಿದ ಡಾ.ಆಶಾ ಮಲಘಾಣ್, ನಾವು ತಪಾಸಣೆ ಮಾಡೋದಿಲ್ಲ, ಸ್ಕ್ಯಾನ್ ಅರ್ಹ ವೈದ್ಯರು ಮಾಡುತ್ತಾರೆ ಎಂದಿದ್ದಾರೆ.
ಇದರ ಜೊತೆಗೆ ಬಾದಾಮಿ ಪಟ್ಟಣದಲ್ಲಿ ರೇಣುಕಾ ಆಸ್ಪತ್ರೆ ಮೇಲೆ ದಾಳಿ ಮಾಡಲಾಗಿದೆ. ಇಲ್ಲಿ ಕವಿತಾ ಶಿವನಾಯ್ಕರ್ ಬಾದಾಮಿ ಸರಕಾರಿ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞೆಯಾಗಿದ್ದಾರೆ. ಇದರ ಜೊತೆಗೆ ರೇಣುಕಾ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದು, ಅಲ್ಲಿಯೂ ಸ್ಕ್ಯಾನಿಂಗ್ ಮಷಿನ್ ಹಾಗೂ ಕೊಠಡಿ ಸೀಜ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಬ್ರೂಣ ಸ್ಕ್ಯಾನ್ ಮಾಡಿ ಗರ್ಭಪಾತ ದಂಧೆ ಮಾಡಿರೋದು ಮೇಲ್ನೋಟಕ್ಕೆ ಖಚಿತವಾಗಿದೆಯಂತೆ.