ಉಡುಪಿ: ಬ್ರಹ್ಮಾವರದಲ್ಲಿ ಎಫ್ ಎಂ ಸ್ಟೇಷನ್ ಈ ವಿತ್ತಿಯ ವರ್ಷದಲ್ಲೇ ಪ್ರಾರಂಭ ವಾಗಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಹಾಗೂ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಅನುರಾಗ ಠಾಕೂರ್ ಅವರು ಹೇಳಿದರು. ಅವರು ಉಡುಪಿಯಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತದಾದ್ಯಂತ ಕ್ರೀಡಾ ಉತ್ತೇಜನ ಹಾಗೂ ಮೂಲ ಸೌಕರ್ಯಗಳನ್ನು ನೀಡುವ ಮೂಲಕ ಇಂಥ ಕೇಂದ್ರಗಳು ಕ್ರೀಡಾಳುಗಳಿಗೆ ಸ್ಪರ್ಧೆಗೆ ಸಹಕರಿಸುತ್ತದೆ, ಅಲ್ಲದೆ ಕ್ರೀಡಾ ವಿಜ್ಞಾನಿಗಳನ್ನು ಕ್ರೀಡಾಳುಗಳ ಜೊತೆ ಸಮೀಕರಿಸುತ್ತದೆ ಎಂದರು. ಭಾರತ ಈ ಬಾರಿ ಪ್ಯಾರಒಲಿಂಪಿಕ್ಸ್ ನಲ್ಲಿ ಅತೀ ಹೆಚ್ಚು ಪದಕ ಗಳನ್ನು ಪಡೆದು ಕೊಂಡಿದೆ ಎಂದರು.
ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ಕ್ರೀಡೆಯನ್ನು ವೈಜ್ಞಾನಿಕವಾಗಿ ದೈಹಿಕ ಹಾಗೂ ಮಾನಸಿಕ ದೇಹದಾರ್ಡ್ಯತೆ ಅಧ್ಯಯನ ಮಾಡಿ ಈ ಕೇಂದ್ರ ಕ್ರೀಡಾಳುಗಳನ್ನು ತಯಾರು ಮಾಡಲಿದೆ. ಇಂಥ ಕೇಂದ್ರಗಳು ಉತ್ತರ ಕರ್ನಾಟಕದಲ್ಲೂ ಬರಲಿ ಎಂದರು. ಬ್ರಹ್ಮಾವರ ದಲ್ಲಿ ಎಫ್ ಎಂ ಕೇಂದ್ರ ಸ್ಥಾಪನೆ ಮಾಡುವಂತೆ ಮನವಿ ಮಾಡಿದರು.
ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ಕೆ. ಸಿ. ನಾರಾಯಣ ಸ್ವಾಮಿ ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ಭಾರತವನ್ನು ಇತರ ರಾಷ್ಟ್ರಗಳ ಮಟ್ಟಕ್ಕೆ ಕೊಂಡೊಯ್ಯುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ ಎಂದರು.
ಉಡುಪಿ ಶಾಸಕ ಕೆ ರಘುಪತಿ ಭಟ್ ಪ್ರಾಸ್ತಾವಿಕ ಮಾತನಾಡಿ, ಉಡುಪಿಯಿಂದ ಒಂದೆರಡು ವರ್ಷಗಳ ಒಳಗೆ ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಬರಲಿದ್ದಾರೆ . ಖೇಲೋ ಇಂಡಿಯಾದ ಅಡಿಯಲ್ಲಿ ಕ್ರೀಡಾ ಸಂಶೋಧನಾ ಕೇಂದ್ರ ಸ್ಥಾಪನೆಗೆ ಸಹಕಾರ ನೀಡಬೇಕೆಂದು ಸಚಿವರಿಗೆ ಮನವಿ ಮಾಡಿದರು.
ಸುಮಿತ್ರಾ ನಾಯಕ್, ಜಿಲ್ಲಾಧಿಕಾರಿ ಕೂರ್ಮಾ ರಾವ್ ಇನ್ನಿತರರು ಉಪಸ್ಥಿತರಿದ್ದರು. ಅಂತಾರಾಷ್ಟ್ರೀಯ ಕ್ರೀಡಾ ಪಟು ಅಶ್ವಿನಿ ಅಕ್ಕುಂಜೆ ಯವರನ್ನು ಸನ್ಮಾನಿಸಲಾಯಿತು.