ಬೆಂಗಳೂರು : ಸ್ವಾದಭರಿತ ಹಾಲು ಡೈರಿ ಉತ್ಪನ್ನವೆಂದು ಪರಿಗಣಿಸಬೇಕೇ ಹೊರತು ಅದು ಪಾನೀಯವಲ್ಲ, ಆದ್ದರಿಂದ ಸ್ವಾದಭರಿತ ಹಾಲಿಗೆ ಶೇ.12ರಷ್ಟು ಸರಕು ಸೇವಾ ತೆರಿಗೆ(ಜಿಎಸ್‌ಟಿ) ವಿಧಿಸುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ಶೇ.5ರಷ್ಟು ಮಾತ್ರ ವಿಧಿಸಬೇಕು ಎಂದು ಸೂಚಿಸಿದೆ.
ಶೇ.12ರಷ್ಟು ಜಿಎಸ್‌ಟಿ ವಿಧಿಸಿದ್ದ ಕ್ರಮವನ್ನು ಪ್ರಶ್ನಿಸಿ ದೊಡ್ಲಾ ಡೈರಿ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿತು. ಅಲ್ಲದೆ, ದೊಡ್ಲಾ ಕಂಪನಿ ಪರ ಆದೇಶ ನೀಡಿರುವ ನ್ಯಾಯಾಲಯ, ಅದು ಪಾವತಿ ಮಾಡಿರುವ ತೆರಿಗೆ ಹಣವನ್ನು ಮರು ಪಾವತಿ ಮಾಡುವಂತೆ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ?
ತೆರಿಗೆ ಅಧಿಕಾರಿಗಳು ಹಾಲಿನ ಉತ್ಪನ್ನಗಳನ್ನು ಸುಂಕ ಶೀರ್ಷಿಕೆ 2202ರ ಅಡಿಯಲ್ಲಿ ಪಾನೀಯ ಎಂದು ವರ್ಗೀಕರಿಸಿದ್ದರು ಮತ್ತು ಡೈರಿ ಉತ್ಪನ್ನಗಳಿಗೆ ಅನ್ವಯವಾಗುವ ಶೇ.5ರ ಜಿಎಸ್‌ಟಿ ಬದಲಿಗೆ ಶೆ.12 ಮತ್ತು ಶೇ.18ಕ್ಕೂ ಅಧಿಕ ಜಿಎಸ್‌ಟಿ ತೆರಿಗೆ ದರಗಳನ್ನು ವಿಧಿಸಿದ್ದರು.
ಸಿಜಿಎಸ್‌ಟಿ ಕಾಯಿದೆಯ ಸೆಕ್ಷ ನ್ 74 ರಡಿಯಲ್ಲಿ ತಯಾರಕರಿಗೆ ಶೋಕಾಸ್ ನೋಟಿಸ್ ನೀಡಲಾಯಿತು. ನಂತರ ತೆರಿಗೆ ಬೇಡಿಕೆಯನ್ನು ದೃಢೀಕರಿಸುವ ಆದೇಶ ನೀಡಲಾಯಿತು. ಕಂಪನಿಯು 2021ರ ಡಿಸೆಂಬರ್ ನಲ್ಲಿ ಜಿಎಸ್‌ಟಿಗೆ 72.95 ಲಕ್ಷ ಠೇವಣಿ ಮಾಡಿತು ಮತ್ತು ಜಿಎಸ್‌ಟಿ ಆದೇಶವನ್ನು ಪ್ರಶ್ನಿಸಿತು. ಆದರೆ ಮೊದಲ ಮೇಲ್ಮನವಿ ಪ್ರಾಧಿಕಾರವು ಅವರ ಅರ್ಜಿಯನ್ನು ವಜಾಗೊಳಿಸಿತು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.








