ಆಂಧ್ರ ಪ್ರದೇಶ: ಕೃಷ್ಣಾ ಜಿಲ್ಲೆ ಪೆನಮಲೂರು ಮಂಡಲದ ಯನಮಲಕುದೂರು ಗ್ರಾಮದಲ್ಲಿ ಶುಕ್ರವಾರ ಈ ದಾರುಣ ಘಟನೆ ನಡೆದಿದೆ. ಕೃಷ್ಣಾ ನದಿಗೆ ಸ್ನಾನಕ್ಕೆಂದು ತೆರಳಿದ್ದ ಐವರು ಬಾಲಕರು ನಾಪತ್ತೆಯಾಗಿದ್ದರು. ಅವರಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನುಳಿದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಮೃತರನ್ನು ಪಟಮಟ ವ್ಯಾಪ್ತಿಯ ದರ್ಶಿಪೇಟೆ ಅಂಬೇಡ್ಕರ್ ನಗರದ ಶೇಖ್ ಬಾಜಿ (15), ಶೇಖ್ ಹುಸೇನ್ (15), ತೋಟ ಕಾಮೇಶ್ (15), ಮದ್ದಲ ಬಾಲು (17), ಇನಕೊಳ್ಳು ಗುಣಶೇಖರ್ (14), ಪಿನ್ನಿಂಟಿ ಶ್ರೀನು ಮತ್ತು ಶೇಖ್ ಖಾಸಿಂ ಅಲಿ ಎಂದು ಗುರುತಿಸಲಾಗಿದೆ.
ಇವರುಗಳು ಆಟವಾಡಲು ಹೋಗುವುದಾಗಿ ತಮ್ಮ ಮನೆಗಳಲ್ಲಿ ಹೇಳಿ ಯನಮಲಕುದೂರಿನ ಕೃಷ್ಣಾ ನದಿಯ ಜೆಟ್ಟಿಗೆ ಹೋಗಿದ್ದಾರೆ. ಅಲ್ಲಿ ಸ್ವಲ್ಪ ಹೊತ್ತು ಕ್ರಿಕೆಟ್ ಆಡಿ ಯನಮಲಕುದೂರು ಪಾಯದಿಂದ ಮೂರೂವರೆ ಕಿಲೋಮೀಟರ್ ನಡೆದು ಗುಂಟೂರು ಜಿಲ್ಲೆಯ ತಾಡೆಪಲ್ಲಿ ವ್ಯಾಪ್ತಿಯ ಪಾತೂರು ಇಟಿಪಾಯ ದಡ ತಲುಪಿದರು. ಕಿರಿಯ ಶ್ರೀನು ಹೊರತುಪಡಿಸಿ ಉಳಿದ ಆರು ಮಂದಿ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು.
ಎಲ್ಲರೂ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಶ್ರೀನು ಜೋರಾಗಿ ಕೂಗಿ ಸ್ಥಳೀಯ ಜಾನುವಾರು ಸಾಕಾಣಿಕೆದಾರರಿಗೆ ಮತ್ತು ಮೀನುಗಾರರಿಗೆ ವಿಷಯ ತಿಳಿಸಿದ್ದು, ಅವರು ತಕ್ಷಣ ನದಿಗೆ ಹಾರಿ ಖಾಸಿಂ ಅಲಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಐದು ಮಕ್ಕಳು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಈ ಮಾಹಿತಿ ತಿಳಿದ ಪೆನಮಲೂರು ಪೊಲೀಸರು ಹಾಗೂ ಕಂದಾಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಈಜುಗಾರರು ಹಾಗೂ ರಕ್ಷಣಾ ಸಿಬ್ಬಂದಿಗಳ ನೆರವಿನಿಂದ ಶಿವಲಿಂಗದ ಒಡ್ಡು ಪ್ರದೇಶದಲ್ಲಿ ಇನಕೊಳ್ಳು ಗುಣಶೇಖರ್ ಮತ್ತು ತೋಟ ಕಾಮೇಶ್ ಅವರ ಶವ ಪತ್ತೆಯಾಗಿದೆ. ಶೇಖ್ ಹುಸೇನ್, ಶೇಖ್ ಬಾಜಿ, ಮದ್ದಲ ಬಾಲು ಪತ್ತೆಯಾಗಿಲ್ಲ. ಆಗಲೇ ಕತ್ತಲಾಗಿದ್ದರಿಂದ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಪೆನಮಲೂರು ಸಿಐ ಗೋವಿಂದರಾಜು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.