ಬೆಂಗಳೂರು: ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಮೊದಲು ಪರಿಹರಿಸಿ; ಆಮೇಲೆ ಸಿಎಂ ಉತ್ತರಾಧಿಕಾರಿಯ ಕುರಿತು ಚರ್ಚಿಸಿ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ನೀಡಿದರು. ಯಾರು ಬೇಕಾದರೂ ಮುಂದಿನ ಮುಖ್ಯಮಂತ್ರಿ, ಉತ್ತರಾಧಿಕಾರಿ ಆಗಲಿ; ನಮಗೆ ಆ ಪ್ರಶ್ನೆ ಇಲ್ಲ ಎಂದು ತಿಳಿಸಿದರು. ಉತ್ತರಾಧಿಕಾರಿ ಎಂಬುದು ಬಹಳ ಗಂಭೀರ ಸಮಸ್ಯೆಯೇ ಎಂದು ಕೇಳಿದರು.
ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನ ಫಾರ್ಮ್ ಹೌಸ್‍ನಲ್ಲಿ ಹೆಣ್ಣು ಭ್ರೂಣಗಳ ಹತ್ಯೆ ದಂಧೆ ನಡೆಯುತ್ತಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಏನು? ಇದನ್ನು ನಿಲ್ಲಿಸುವ ಕುರಿತು ಸರಕಾರದ ಕಾರ್ಯತಂತ್ರ ಏನು ಎಂದು ಪ್ರಶ್ನಿಸಿದರು. ನೂರಾರು ಹೆಣ್ಣು ಭ್ರೂಣಗಳ ಹತ್ಯೆ ಕುರಿತು ಸಚಿವ ದಿನೇಶ್ ಗುಂಡೂರಾವ್ ಅವರು ಏನು ಹೇಳುತ್ತಾರೆ ಎಂದರು.
ಸಿದ್ದರಾಮಯ್ಯನವರ ತವರು ಜಿಲ್ಲೆಯಲ್ಲೇ ಅರಮನೆ ಮೈದಾನದ ಬಳಿ ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯದ ಮಗುವಿನ ಮೇಲೆ ಅತ್ಯಾಚಾರ, ಕೊಲೆ ನಡೆದಿದೆ. ಅದರ ಬಗ್ಗೆ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಆ ಮನೆಗೆ ಇನ್ನೂ ಆಧಾರ್ ಕಾರ್ಡ್ ಕೊಟ್ಟಿಲ್ಲ ಎಂದು ಗಮನಕ್ಕೆ ತಂದರು.
ಮೈಸೂರಿನಲ್ಲಿ ರಾಜಾರೋಷವಾಗಿ ಡ್ರಗ್ಸ್ ಮಾರಾಟವಾಗುತ್ತಿದೆ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ರಾಜ್ಯದಲ್ಲಿ 2,300 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 7 ಜನ ಸರಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಲ್ಬರ್ಗದ ಲೈಬ್ರೆರಿಯನ್, ಚಾಮರಾಜನಗರದ ನೀರಗಂಟಿ ವೇತನ ಬಂದಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಮ್ಮ ಉತ್ತರಾಧಿಕಾರಿ ಆಮೇಲೆ ಮಾಡಿಕೊಳ್ಳಿ. ಇವೆಲ್ಲ ಸಮಸ್ಯೆ ಕೂಡಲೇ ಪರಿಹರಿಸಿ ಎಂದು ಒತ್ತಾಯಿಸಿದರು.
ಗೃಹ ಸಚಿವರನ್ನು ಹುಡುಕಿ ಕೊಡಿ..
ಬೆಂಗಳೂರಿನಲ್ಲಿ ಅತ್ಯಾಚಾರ, ಕೊಲೆ ನಡೆಯುತ್ತಿವೆ. ಎಲ್ಲಿ ಹೋಗಿದ್ದಾರೆ ಗೃಹ ಸಚಿವ ಪರಮೇಶ್ವರ್ ಅವರು? ಅವರನ್ನು ಹುಡುಕಿ ಕೊಡಿ ಎಂದು ಎನ್.ರವಿಕುಮಾರ್ ಅವರು ತಿಳಿಸಿದರು.
1,300 ಮಹಿಳೆಯರ ಮೇಲೆ ಅತ್ಯಾಚಾರ ಆಗಿದೆ. ಸರಗಳ್ಳತನ ನಡೆಯುತ್ತಿದೆ. ಸಚಿವರು ಎಲ್ಲಿ ಹೋಗಿದ್ದಾರೆ? ಕಾನೂನು- ಸುವ್ಯವಸ್ಥೆ ಪರಿಸ್ಥಿತಿ ಏನು ಎಂದು ಕೇಳಿದರು. 15 ಜನ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 33 ಸಾವಿರ ಕೋಟಿ ಬಾಕಿ ಹಣ ಬರಬೇಕಿದೆ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದರು. ಶೇ 60 ಕಮಿಷನ್ ಕುರಿತು ಪತ್ರದಲ್ಲಿ ಬರೆದಿದ್ದು, ಎಲ್ಲಿದೆ ಸಾಕ್ಷಿ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದ್ದಾರೆ ಎಂದು ಆಕ್ಷೇಪಿಸಿದರು.
ಬೆಂಗಳೂರು ಎಂಬುದು ಗುಂಡಿ ಸಿಟಿ..
ಬೆಂಗಳೂರು ಎಂಬುದು ಗುಂಡಿ ಸಿಟಿ ಆಗಿದೆ. ಬೆಂಗಳೂರು- ಮೈಸೂರು ಅತ್ಯಾಚಾರಿಗಳ ನಗರವಾಗಿವೆ. ಇದನ್ನು ತಡೆಯುವ ಕುರಿತು ಮೊದಲು ಮಾತನಾಡಿ. ಮಳೆ ಬಂದು ರೈತರು ಕಂಗಾಲಾಗಿದ್ದಾರೆ. ಅವರ ಬೆಳೆಹಾನಿಗೆ ಪರಿಹಾರ ನೀಡಿಲ್ಲ. ಮಂತ್ರಿಗಳು ಎಲ್ಲಿ ಹೋಗಿದ್ದಾರೆ? ಎಂದರು. ಇದೆಲ್ಲದರ ಬಗ್ಗೆ ಮೊದಲು ಉತ್ತರಿಸಿ. ಉತ್ತರಾಧಿಕಾರಿ ಆಮೇಲೆ ಮಾಡಿಕೊಳ್ಳಿ ಎಂದು ಹೇಳಿದರು.
ಬೆಂಗಳೂರಿಗೆ ಬರಲಿದ್ದ ಎ.ಐ. ಹಬ್ ಆಂಧ್ರಕ್ಕೆ ಹೋಗಿದೆ. ಉತ್ತರಾಧಿಕಾರಿ ಕುರಿತ ಚರ್ಚೆ ನಿಲ್ಲಿಸಿ ಇದರ ಕಡೆ ಗಮನಿಸಿದ್ದರೆ ಕರ್ನಾಟಕದ ಸಾವಿರಾರು ಜನ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಬಹುದಾಗಿತ್ತು. ಮೊದಲು ಇದಕ್ಕೆ ಉತ್ತರ ಕೊಡಿ. ಆಮೇಲೆ ಉತ್ತರಾಧಿಕಾರಿ ಬಗ್ಗೆ ಯೋಚಿಸಿ ಎಂದು ಸವಾಲು ಹಾಕಿದರು.
‘ವೈದ್ಯಕೀಯ ಕೋರ್ಸ್’ಗಳ ಪ್ರವೇಶಕ್ಕೆ 3ನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ ಕೆಇಎ








