ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಿಎಂಟಿಸಿ ನೀಡಿದೆ. ಹಾಗಾದ್ರೇ ಬಿಎಂಟಿಸಿ ಸ್ಪಷ್ಟನೆ ಏನು ಎನ್ನುವ ಬಗ್ಗೆ ಮುಂದೆ ಓದಿ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಜಿಸಿಸಿ (Gross Cost Contract) ಆಧಾರದ ಮೇಲೆ 90 ಎಲೆಕ್ಟ್ರಿಕ್ ಬಸ್ಸುಗಳನ್ನು ಕಾರ್ಯಾಚರಿಸುತ್ತಿದೆ. ಸದರಿ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯು ಗುತ್ತಿಗೆದಾರ ಸಂಸ್ಥೆಯಾದ ಮೆ|| ಎನ್ವಿವಿಎನ್ಎಲ್ / ಜೆಬಿಎಂ ರವರ ಹೊಣೆಗಾರಿಕೆಯಾಗಿರುತ್ತದೆ.
ಘಟನೆ ವರದಿ :
ದಿನಾಂಕ-05-08-2024 ರಂದು ಸಮಯ ಸುಮಾರು 22.50 ಘಂಟೆಗೆ ಘಟಕ-08 ಕ್ಕೆ ಸಂಬಂಧಿಸಿದ ಮೆ|| ಎನ್ವಿವಿಎನ್ಎಲ್ / ಜೆಬಿಎಂ (ಬೆಂ.ಮ.ಸಾ.ಸಂಸ್ಥೆಯ ಎಲೆಕ್ಟ್ರಿಕ್ ವಾಹನಗಳ ಆಪರೇಟರ್) ವಾಹನ ಸಂಖ್ಯೆ ಕೆಎ 41 ಡಿ 2679 ರಾತ್ರಿ ಪಾಳಿ, ಮಾರ್ಗ ಸಂಖ್ಯೆ 500QA/9 ಟಿನ್ ಫ್ಯಾಕ್ಟರಿಯಿಂದ ಗೊರಗುಂಟೆಪಾಳ್ಯಕ್ಕೆ ಕಾರ್ಯಾಚರಣೆಯಲ್ಲಿದ್ದ ವಾಹನಕ್ಕೆ ಬೆಂಕಿ ತಗುಲಿ ಅವಘಡ ಸಂಭವಿಸಿರುತ್ತದೆ.
ಘಟನೆ ವಿವರ :
ಕೆಂಪಾಪುರದ ಹತ್ತಿರ ಎಲೆಕ್ಟ್ರಿಕ್ ವಾಹನ ಸಂಖ್ಯೆ ಕೆಎ 41 ಡಿ 2679 ಆಫ್ ಆದ ಕಾರಣ, ವಾಹನದಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್ಸಿನಲ್ಲಿ ಕಳುಹಿಸಿಕೊಟ್ಟು, ವಾಹನದ ಚಾಲಕ ಮತ್ತು ನಿರ್ವಾಹಕರು ವಾಹನವನ್ನು ಪರಿಶೀಲಿಸಿದಾಗ ವಾಹನದ ಹಿಂಬದಿಯಿಂದ ಇದ್ದಕ್ಕಿದ್ದಂತೆ ಹೊಗೆ ಬಂದ ಕಾರಣ ಚಾಲಕ ಮತ್ತು ನಿರ್ವಾಹಕರು ವಾಹನದಿಂದ ಕೆಳಗಿಳಿದು ಜೆಬಿಎಂ ಕಂಪನಿಯ ಪ್ರತಿನಿಧಿಗಳಿಗೆ ವಿಷಯವನ್ನು ತಿಳಿಸಿರುತ್ತಾರೆ.
ಪರಿಶೀಲನೆ ಸಮಯದಲ್ಲಿ ಬಸ್ಸಿಗೆ ಬೆಂಕಿ ಹತ್ತಿಕೊಳ್ಳುತ್ತಿರುವುದನ್ನು ಗಮನಿಸಿ, ಅಗ್ನಿಶಾಮಕ ಇಲಾಖೆಗೆ ಮಾಹಿತಿಯನ್ನು ನೀಡಿರುತ್ತಾರೆ. ಅಗ್ನಿಶಾಮಕ ಸಿಬ್ಬಂದಿಗಳು ತಕ್ಷಣವೇ ಘಟನಾ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿರುತ್ತಾರೆ. ಬೆಂ.ಮ.ಸಾ.ಸಂಸ್ಥೆಯ ರಾತ್ರಿ ಗಸ್ತು ಪಾಳಿ ಸಿಬ್ಬಂದಿಗಳು ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಭಾಯಿಸಲು ಸಹಕರಿಸಿರುತ್ತಾರೆ. ಜೆಬಿಎಂ ಕಂಪನಿಯ ಪ್ರತಿನಿಧಿಗಳು ಎಲೆಕ್ಟ್ರಿಕ್ ಬಸ್ಸನ್ನು ಮುಂದಿನ ಕ್ರಮಕ್ಕಾಗಿ ಘಟನಾ ಸ್ಥಳದಿಂದ ಕೆಂಗೇರಿಗೆ ತೆಗೆದುಕೊಂಡು ಹೋಗಿರುತ್ತಾರೆ.
ಮುಂಜಾಗ್ರತಾ ಕ್ರಮ :
ಸದರಿ ಘಟನೆಯಲ್ಲಿ ಪ್ರಯಾಣಿಕರಿಗೆ, ಚಾಲಕ ಮತ್ತು ನಿರ್ವಾಹಕರಿಗೂ ಯಾವುದೇ ರೀತಿಯ ತೊಂದರೆಯಾಗಿರುವುದಿಲ್ಲ. ಜೆಬಿಎಂ ಕಂಪನಿಯು ಘಟನೆ ಸಂಬಂಧ ತನಿಖೆ ಕೈಗೊಂಡಿದ್ದು, ಮಳೆಯ ಕಾರಣದಿಂದ ರಸ್ತೆಯಲ್ಲಿ ನಿಂತ ನೀರಿನಿಂದ ಎಲೆಕ್ಟ್ರಿಕ್ ಬಸ್ಸಿನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಳ್ಳಲು ಪ್ರಾಥಮಿಕ ಕಾರಣವಾಗಿರುತ್ತದೆ.
ಭರವಸೆ :
ಸಾರ್ವಜನಿಕ ಪ್ರಯಾಣಿಕರ ಸುರಕ್ಷತೆಯು ಬೆಂ.ಮ.ಸಾ.ಸಂಸ್ಥೆಯ ಪ್ರಮುಖ ಧ್ಯೇಯವಾಗಿರುತ್ತದೆ. ಬಸ್ಸುಗಳ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಬೆಂ.ಮ.ಸಾ.ಸಂಸ್ಥೆಯು ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ಸಾರ್ವಜನಿಕ ಪ್ರಯಾಣಿಕರ ಸುರಕ್ಷತೆಯ ನಿಟ್ಟಿನಲ್ಲಿ ಜೆಬಿಎಂ ಕಂಪನಿಯೊಂದಿಗೆ ನಿರಂತರವಾಗಿ ಶ್ರಮಿಸುತ್ತಿದೆ.
ಬೆಂ.ಮ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್. ರಾಮಚಂದ್ರನ್ ಮತ್ತು ಬಿಎಂಟಿಸಿ ಅಧಿಕಾರಿಗಳು, ಜೆಬಿಎಂ ಪ್ರತಿನಿಧಿಗಳಾದ ಪುನೀತ್ ಶರ್ಮಾ, ಹೆಡ್ ಆಫ್ಟರ್ ಸೇಲ್ಸ್ ಮತ್ತು ಜಾನ್, ಸಿಟಿಒ ಅವರುಗಳೊಂದಿಗೆ ಸಭೆ ನಡೆಸಿ ಕೆಳಕಂಡಂತೆ ನಿರ್ದೇಶನ ನೀಡಲಾಯಿತು.
1. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಲ್ಲಾ ಮುಂಜಾಗ್ರತಾ/ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು.
2. ಬೆಂಕಿ ಅವಘಡ ಸಂಬಂಧ ಕಾರಣಗಳೊಂದಿಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
BREAKING: ಲೋಕಸಭೆಯಲ್ಲಿ ಹಣಕಾಸು ಮಸೂದೆ ಅಂಗೀಕಾರ | Lok Sabha passes Finance Bill
ಆ.22ರಿಂದ ಬೆಂಗಳೂರಲ್ಲಿ ಅತಿದೊಡ್ಡ ಕೃಷಿ ಮತ್ತು ಆಹಾರ ಪ್ರದರ್ಶನ ಮೇಳ | AgriTech India 2024