ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 15ರಂದು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಒಟ್ಟಿನಲ್ಲಿ ಕೃಷಿ ಮತ್ತು ಕೈಗಾರಿಕೆ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕೆನ್ನುವುದು ತಮ್ಮ ಕಳಕಳಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಭಾನುವಾರ ಹೇಳಿದ್ದಾರೆ.
ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ʻಅಲ್ಲಿ ಕೆಲವರು ಭೂಸ್ವಾಧೀನ ಬೇಡವೆಂದು ಹೋರಾಟ ಮಾಡುತ್ತಿದ್ದಾರೆ. ಮತ್ತೆ ಕೆಲವರು 449 ಎಕರೆ ಜಮೀನನ್ನು ಬಿಟ್ಟುಕೊಡಲು ಸಿದ್ಧವಾಗಿದ್ದು, ಎಕರೆಗೆ 3.5 ಕೋಟಿ ರೂ. ಪರಿಹಾರ ಕೇಳುತ್ತಿದ್ದಾರೆ. ರೈತರಲ್ಲೇ ಈ ಬಗ್ಗೆ ಬೇರೆಬೇರೆ ಅಭಿಪ್ರಾಯಗಳಿವೆ. ಸರಕಾರವು ಎಲ್ಲಾ ರೀತಿಯ ಸಾಧಕ-ಬಾಧಕಗಳನ್ನೂ ಪರಿಶೀಲಿಸುತ್ತಿದೆʼ ಎಂದಿದ್ದಾರೆ.
ಶನಿವಾರದಂದು ʻಚನ್ನರಾಯಪಟ್ಟಣ ಹೋಬಳಿ ರೈತ ಹೋರಾಟ ಸಮಿತಿʼ ಹೆಸರಿನಲ್ಲಿ ಕೆಲವು ರೈತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, 449 ಎಕರೆಯನ್ನು ಸರಕಾರಕ್ಕೆ ಕೊಡುವುದಾಗಿ ಹೇಳಿದ್ದಾರೆ. ಯೋಜನೆಗೆ ಸಂಬಂಧಿಸಿದಂತೆ ಮೊದಲು ಅಧಿಸೂಚನೆ ಹೊರಟಿದ್ದೇ ಇಷ್ಟು ಭೂಮಿಗೆ. ಸರಕಾರವು ನಿಜವಾದ ರೈತರ ದನಿಗೆ ಬೆಲೆ ಕೊಡುತ್ತದೆಯೇ ವಿನಾ ರೈತರ ಹೆಸರಿನಲ್ಲಿ ಏನೇನೋ ಮಾತನಾಡುತ್ತಿರುವವರಿಗಲ್ಲ ಎಂದು ಅವರು ತಿಳಿಸಿದ್ದಾರೆ.
ದೇವನಹಳ್ಳಿ ಸುತ್ತಮುತ್ತ ಯಾವ್ಯಾವ ಬಿಲ್ಡರ್‌ಗಳು ಎಷ್ಟೆಷ್ಟು ಭೂಮಿ ಖರೀದಿಸಿದ್ದಾರೆ, ಯಾರ ಜೊತೆ ಅವರು ಒಪ್ಪಂದ ಮಾಡಿಕೊಂಡಿದ್ದಾರೆ, ಯಾವ ರಾಜಕಾರಣಿಗಳ ಜಮೀನು ಎಷ್ಟಿದೆ, ಹೋರಾಟದ ಹಿಂದ ಯಾರ ಕುಮ್ಮಕ್ಕಿದೆ ಎನ್ನುವುದೆಲ್ಲ ನಮಗೆ ಗೊತ್ತಿದೆ. ದೇವನಹಳ್ಳಿ ಸುತ್ತಲಿನ ಪರಿಸರದಲ್ಲಿ ಕೃಷಿ ಉಳಿಯಬೇಕು ಎನ್ನುವ ಕೂಗೂ ಎದ್ದಿದೆ. ಹೀಗಾಗಿ ಸರಕಾರವು ಶಾಶ್ವತ ಕೃಷಿ ವಲಯ ಮಾಡುವ ಬಗ್ಗೆಯೂ ಚಿಂತಿಸುತ್ತಿದೆ. ಈಗ ಕೆಲವರು ಇದು ಬೇಡ ಎನ್ನುತ್ತಿದ್ದಾರೆ. ಈ ರೀತಿಯ ದ್ವಂದ್ವ ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಭೂಸ್ವಾಧೀನ ಬೇಡವೆಂದು ಕೆಲವು ಸಾಹಿತಿಗಳು, ಚಿಂತಕರು ನಮ್ಮ ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಅದನ್ನು ನಾನು ವಿರೋಧಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಡುವ ಹಕ್ಕಿದೆ. ನಾವು ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದ್ದೇವೆ ಎಂದು ಪಾಟೀಲ ನುಡಿದಿದ್ದಾರೆ
ನಾಯಕತ್ವದಲ್ಲಿ ಗೊಂದಲವಿಲ್ಲ
ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ನಾಯಕತ್ವದ ಗೊಂದಲವೇನೂ ಇಲ್ಲ. ಪಕ್ಷದಲ್ಲಿ ರಾಜ್ಯ ಉಸ್ತುವಾರಿಯಾಗಿರುವ ರಣದೀಪ್ ಸುರ್ಜೇವಾಲಾ ಅವರು ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ನಮ್ಮ ಪಕ್ಷದ ಶಾಸಕರ ಅಭಿಪ್ರಾಯ ಕೇಳಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ಕೊನೆಗೂ ದುಡ್ಡು ಕೊಡುವುದು ಮುಖ್ಯಮಂತ್ರಿಗಳೇ ತಾನೇ ಎಂದು ಪಾಟೀಲ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ನಮ್ಮ ಐವತ್ತರವತ್ತು ಶಾಸಕರ ಮೇಲೆ ಕಣ್ಣಿಟ್ಟು, ಏಜೆಂಟರನ್ನು ಕಳಿಸುತ್ತಿದೆ ಎಂದು ನಮ್ಮ ಪಕ್ಷದ ಶಾಸಕರೇ ಹೇಳಿದ್ದಾರೆ. ಆದರೆ, ನಮ್ಮಲ್ಲಿ 140ಕ್ಕೂ ಹೆಚ್ಚು ಶಾಸಕರಿದ್ದಾರೆ. ಪಕ್ಷಾಂತರ ಆಗಬೇಕೆಂದರೆ 80-90 ಶಾಸಕರು ಹೋಗಬೇಕಾಗುತ್ತದೆ. ಈಗ ಯಾರೂ ಅಷ್ಟು ಮೂರ್ಖರಿಲ್ಲ. ಹಿಂದೇನೋ 17 ಶಾಸಕರು ಬಿಜೆಪಿಗೆ ಹೋದರು. ಈಗ ಅದೆಲ್ಲ ನಡೆಯುವುದಿಲ್ಲ. ವಾಸ್ತವವಾಗಿ ಬಿಜೆಪಿ-ಜೆಡಿಎಸ್ ಕೂಟದ 18-20 ಶಾಸಕರು ಕಾಂಗ್ರೆಸ್ ಬಾಗಿಲು ಬಡಿಯುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಿರುವಳ್ಳೂರು ಅಗ್ನಿ ಅವಘಡ ಹಿನ್ನಲೆ: ಬೆಂಗಳೂರು ವಿಭಾಗ ಈ ರೈಲುಗಳ ಮಾರ್ಗ ಬದಲಾವಣೆ, ಸಂಚಾರ ರದ್ದು