ಬೆಂಗಳೂರು : ಹೆಣ್ಣುಭ್ರೂಣ ಹತ್ಯೆಯು ಸಾಂವಿಧಾನಾತ್ಮಕ ಮೌಲ್ಯಗಳಿಗೆ ಮಾಡುವ ಅವಮಾನ ಎಂದಿರುವ ಹೈಕೋರ್ಟ್, ಲಿಂಗ ಪರೀಕ್ಷೆ ಬಳಿಕ ಗರ್ಭಪಾತ ಮಾಡಿದ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದೆ.ಪ್ರಕರಣದಲ್ಲಿ ಆರೋಪಿಗಳಾಗಿದ್ದ ಶಾರದಮ್ಮ, ಅವರ ಪತಿ ದಾಸೇಗೌಡ ಮತ್ತು ಡಾ.ಶಶಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಹೆಣ್ಣು ಭ್ರೂಣ ಹತ್ಯೆ ಕೇವಲ ಕಾನೂನುಬಾಹಿರ ಅಪರಾಧವಲ್ಲದೇ, ನೈತಿಕ ಸಮಾಜದ ಮೇಲೆ ಬಿದ್ದ ಕಳಂಕವಾಗಿದ್ದು, ಸಂವಿಧಾನಾತ್ಮಕ ಮೌಲ್ಯಗಳನ್ನು ಅವಮಾನ ಮಾಡುವಂತದ್ದಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಲಿಂಗ ಪರೀಕ್ಷೆ ನಡೆಸಿ ಗರ್ಭಪಾತ ಮಾಡಿಸಿದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
ಪ್ರಕರಣದ ಹಿನ್ನೆಲೆ
ಚನ್ನಪಟ್ಟಣ ತಾಲೂಕಿನ ಚನ್ನಕೇಶವ ಮತ್ತು ಅವರ ಪತ್ನಿ ಹರ್ಷಿತಾ ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದರು. ಅವರಿಗೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳು ಇದ್ದ ಕಾರಣ, ಗರ್ಭದಲ್ಲಿರುವ ಮಗುವಿನ ಲಿಂಗ ತಿಳಿದುಕೊಳ್ಳಲು ಅವರು ಯತ್ನಿಸಿದರು. ಈಗಾಗಲೇ ಇಬ್ಬರು ಹೆಣ್ಣುಮಕ್ಕಳು ಇದ್ದ ಕಾರಣ ಸಂಬಂಧಿಕರಾದ ಶಾರದಮ್ಮ ಮತ್ತು ದಾಸೇಗೌಡ ಅವರ ಸಹಾಯದಿಂದ ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ.ಶಶಿ ಮೂಲಕ ಅಕ್ರಮವಾಗಿ ಲಿಂಗ ಪತ್ತೆಗೆ ಸ್ಕ್ಯಾನಿಂಗ್ ಮಾಡಿಸಿದ್ದರು.
ಅವರು ಸನ್ನೆಯ ಮೂಲಕ ಭ್ರೂಣದ ಲಿಂಗ ಗೊತ್ತಾಗಿತ್ತು. ಇದಾದ ಬಳಿಕ, ಗರ್ಭಿಣಿಗೆ ಖಾಸಗಿ ಕ್ಲಿನಿಕ್ನಲ್ಲಿ ಗರ್ಭಪಾತಕ್ಕೆ ಔಷಧಿ ನೀಡಲಾಗಿದೆ. ಆ ರಾತ್ರಿ ಹರ್ಷಿತಾಗೆ ತೀವ್ರ ರಕ್ತಸ್ರಾವ ಉಂಟಾಗಿ ಭ್ರೂಣ ಮೃತಪಟ್ಟಿತ್ತು. ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದರು.








