ಬೆಂಗಳೂರು:ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತಹ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಇದೀಗ ಪೊಲೀಸ್ ಇಲಾಖೆಯಲ್ಲಿ ಯಾವುದೇ ನೇಮಕಾತಿ ಪರೀಕ್ಷೆ ನಡೆಯುತ್ತಿದ್ದರು ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು ಅದಲ್ಲದೆ ವಸ್ತ್ರ ಸಂಹಿತೆ ನಿಯಮ ಕೂಡ ಇದೀಗ ಇಲಾಖೆಯು ಜಾರಿ ಮಾಡಿದ್ದು, ಹೊಸ ಸಂಹಿತೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 1,137 ಸಿವಿಲ್ ಕಾನ್‌ಸ್ಟೆಬಲ್ (ಪುರುಷ, ಮಹಿಳೆ ಹಾಗೂ ತೃತೀಯ ಲಿಂಗಿ) ಹುದ್ದೆಗಳ ಭರ್ತಿಗಾಗಿ ಫೆ. 25ರಂದು ರಾಜ್ಯದಾದ್ಯಂತ ಲಿಖಿತ ಪರೀಕ್ಷೆ ನಡೆಸಲು ನೇಮಕಾತಿ ವಿಭಾಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಭ್ಯರ್ಥಿಗಳು ಶೂ ಧರಿಸಿ ಪರೀಕ್ಷಾ ಕೇಂದ್ರದೊಳಗೆ ಹೋಗುವುದನ್ನು ನಿಷೇಧಿಸಲಾಗಿದೆ. ವಸ್ತ್ರ ಸಂಹಿತೆ ನಿಯಮವನ್ನೂ ಬಿಡುಗಡೆ ಮಾಡಿದೆ.
ರಾಜ್ಯದ ವಿವಿಧ ಕೇಂದ್ರಗಳಲ್ಲಿ ಬೆಳಿಗ್ಗೆ 11 ಗಂಟೆಯಿಂದ 12.30 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅನುಕೂಲವಾಗುವಂತೆ ಅರ್ಹ ಅಭ್ಯರ್ಥಿಗಳ ಮೊಬೈಲ್‌ಗೆ ಲಿಂಕ್ ಕಳುಹಿಸಲಾಗುವುದು. ಅಭ್ಯರ್ಥಿಗಳು ಪ್ರವೇಶ ಪತ್ರ ಪಡೆದುಕೊಂಡು, ನಿಗದಿತ ಕೇಂದ್ರಕ್ಕೆ ಹಾಜರಾಗಬೇಕು ಎಂದು ನೇಮಕಾತಿ ವಿಭಾಗದ ಡಿಐಜಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ವಸ್ತ್ರ ಸಂಹಿತೆ ಪಾಲಿಸುವುದು ಕಡ್ಡಾಯವೆಂದು ಡಿಐಜಿ ಹೇಳಿದ್ದಾರೆ. ವಸ್ತ್ರ ಸಂಹಿತೆ ವಿವರ ಇಂತಿದೆ.
ಪುರುಷರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಪುರುಷರ ಅಭ್ಯರ್ಥಿಗಳ ವಸ್ತ್ರಸಂಹಿತೆ:
1. ಅರ್ಧ ತೋಳಿನ ಅಂಗಿ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ರಹಿತ ಅಂಗಿ ಇರಬೇಕು. ಹೆಚ್ಚು ಜೇಬು ಇರುವ ಹಾಗೂ ದೊಡ್ಡ ಬಟನ್ ಇರುವ ಅಂಗಿ ಧರಿಸಬಾರದು
2. ಜೀನ್ಸ್ ಪ್ಯಾಂಟ್ ಹಾಗೂ ಹೆಚ್ಚು ಜೇಬು ಇರುವ ಪ್ಯಾಂಟ್ ಧರಿಸುವಂತಿಲ್ಲ
3. ಪರೀಕ್ಷಾ ಕೇಂದ್ರದೊಳಗೆ ಶೂಗಳನ್ನು ನಿಷೇಧಿಸಲಾಗಿದೆ. ತೆಳುವಾದ ಅಡಿಭಾಗವಿರುವ ಪಾದರಕ್ಷೆಗಳನ್ನು (ಚಪ್ಪಲಿ) ಧರಿಸಬೇಕು
4. ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣ, ಉಂಗುರ ಹಾಗೂ ಇತರೆ ಅನುಮಾನಾಸ್ಪದ ವಸ್ತುಗಳನ್ನು ಧರಿಸುವಂತಿಲ್ಲ.
ಮಹಿಳೆ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳ ವಸ್ತ್ರ ಸಂಹಿತೆ:
1. ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳು ಇರುವ ಬಟ್ಟೆಗಳನ್ನು ಧರಿಸಬಾರದು
2. ಪೂರ್ಣ ತೋಳಿನ ಬಟ್ಟೆಗಳು ಹಾಗೂ ಜೀನ್ಸ್ ಪ್ಯಾಂಟ್ ಧರಿಸಬಾರದು. ಮುಜುಗರವಾಗದಂತೆ ಅರ್ಧ ತೋಳಿನ ಬಟ್ಟೆಗಳನ್ನು ಧರಿಸಲು ಅವಕಾಶವಿದೆ
3. ಎತ್ತರವಾದ ಹಿಮ್ಮಡಿ ಇರುವ, ದಪ್ಪವಾದ ಅಡಿಭಾಗ ಹೊಂದಿರುವ ಶೂ/ಚಪ್ಪಲಿ ಧರಿಸಬಾರದು. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿ ಧರಿಸುವುದು ಕಡ್ಡಾಯ
4. ಲೋಹದ ಆಭರಣಗಳನ್ನು ಧರಿಸುವುದು ನಿಷೇಧ (ಮಾಂಗಲ್ಯ ಸರ ಹಾಗೂ ಕಾಲುಂಗುರ ಬಿಟ್ಟು)