ಬಳ್ಳಾರಿ : ಜಿಲ್ಲೆಯಾದ್ಯಂತ ಏ.01 ರಿಂದ 30 ರವರೆಗೆ (30 ದಿನಗಳ ವರೆಗೆ) ಕಾಲುಬಾಯಿ ಜ್ವರ ಲಸಿಕೆ ಅಭಿಯಾನ ನಡೆಯಲಿದ್ದು, ಅಭಿಯಾನದಲ್ಲಿ ರೈತರು ತಮ್ಮ ಜಾನುವಾರು ಮತ್ತು ಸಾಕು ಪ್ರಾಣಿಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸಿ.ವಿನೋದ್ ಕುಮಾರ್ ಅವರು ತಿಳಿಸಿದ್ದಾರೆ.
ಸಾಕು ಪ್ರಾಣಿಗಳಾದ ಹಸು, ಎತ್ತು, ಎಮ್ಮೆ, ಹೋರಿ ಮತ್ತು ಹಂದಿಗಳಲ್ಲಿ ಕಾಣಿಸಿಕೊಳ್ಳುವ ಮಾರಕ ರೋಗವಾದ ಕಾಲುಬಾಯಿ ಜ್ವರ ರೋಗವು ಅತೀ ಪರಿಣಾಮಕಾರಿಯಾಗಿದ್ದು, ರೋಗದಿಂದ ರೈತರಿಗೆ ಆರ್ಥಿಕ ಸಂಕಷ್ಟ ಉಂಟಾಗುತ್ತದೆ. ರೈತರು ಕಾಲು ಬಾಯಿ ರೋಗದ ಲಸಿಕೆಯನ್ನು ಮೂರು ತಿಂಗಳು ಮೇಲ್ಪಟ್ಟ ಹಾಗೂ ಸೀಳುಗೊರಸುಗಳುಳ್ಳ ಜಾನುವಾರುಗಳಿಗೆ ಹಾಕಿಸಬೇಕು ಎಂದು ತಿಳಿಸಿದ್ದಾರೆ.
ರಾಸುಗಳು ಈ ರೋಗದಿಂದ ಮುಕ್ತವಾದರೂ ಸಹ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಸಾಮಥ್ರ್ಯ ನಷ್ಟ ಮತ್ತು ಹಾಲಿನ ಇಳುವರಿ ಕಡಿಮೆ ಹಾಗೂ ಇತರೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ರೋಗ ತಡೆಗಟ್ಟಲು ಜಿಲ್ಲೆಯ ಎಲ್ಲಾ ರೈತ ಬಾಂಧವರು ಕಾಲುಬಾಯಿ ಜ್ವರ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ಎಲ್ಲಾ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.