ಬೆಂಗಳೂರು: ಬಜೆಟ್ನಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮತ್ತು ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ರೂ.5 ಲಕ್ಷ ಪ್ರೋತ್ಸಾಹ ಧನ ಘೋಷಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಈ ಹಿಂದೆಯೂ ಅನೇಕ ಬಾರಿ ರೈತಾಪಿ ವರ್ಗದ ಯುವಕರನ್ನು ವಿವಾಹವಾಗುವ ಯುವತಿಯರಿಗೆ ಪ್ರೋತ್ಸಾಹಧನ ಅಥವಾ ವಿಶೇಷ ಯೋಜನೆ ಘೋಷಿಸಬೇಕು ಎಂಬುವುದು ರೈತರ ಆಗ್ರಹವಾಗಿತ್ತು. ಇದೀಗ ಈ ವಿಷಯ ಮತ್ತೆ ಪ್ರಸ್ತಾಪವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರೈತ ಸಂಘಟನೆಗಳು ಈ ಕುರಿತಂತೆ ಮನವಿ ಸಲ್ಲಿಸಿವೆ ಎಂದು ತಿಳಿದು ಬಂದಿದೆ.
ರಾಜ್ಯದ ರೈತ ಸಂಘ ಸಂಸ್ಥೆಗಳ 200ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ರೈತ ಮುಖಂಡರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ 2024-25ನೇ ಸಾಲಿನ ಆಯವ್ಯಯ ಪೂರ್ವಭಾವಿ ಚರ್ಚೆ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಬಡಗಲಪುರ ನಾಗೇಂದ್ರ, ರೈತರು ಸಾಲದ ಸುಳಿಗೆ ಸಿಲುಕದಂತೆ ಕೃಷಿ ನೀತಿ ರೂಪಿಸಬೇಕು. ಕೃಷಿಗೆ ಬಜೆಟ್ನಲ್ಲಿ ಹೆಚ್ಚಿನ ಒತ್ತು ನೀಡಬೇಕು, ಬರಕ್ಕೆ ಶಾಶ್ವತವಾಗಿ ಪರಿಹಾರ ಸಿಗಬೇಕಾದರೆ ಸಣ್ಣ ನೀರಾವರಿಗೆ ಒತ್ತು ಕೊಡಬೇಕು. 10 ವರ್ಷದ ಕಾರ್ಯಯೋಜನೆಯನ್ನು ಘೋಷಿಸಬೇಕೆಂದು ಮನವಿ ಮಾಡಿದ್ದೇವೆ ಎಂದರು.
ಕೃಷಿಕರ ಮಕ್ಕಳಿಗೆ ಮದುವೆಗೆ ಕನ್ಯೆಯರು ಸಿಗುತ್ತಿಲ್ಲ. ಹೀಗಾಗಿ 45 ವರ್ಷವಾದರೂ ಮದುವೆ ಆಗುತ್ತಿಲ್ಲ. ಇದಕ್ಕೆ ಕಾರಣ ಕೃಷಿಗೆ ಆದ್ಯತೆ ಸಿಗುತ್ತಿಲ್ಲ. ಹೀಗಾಗಿ ರೈತರನ್ನು ಮದುವೆ ಆಗುವ ಕನ್ಯೆಯರಿಗೆ ₹5 ಲಕ್ಷ ಪ್ರೋತ್ಸಾಹ ಧನ ನೀಡುವಂತೆ ಮನವಿ ಮಾಡಿದ್ದೇವೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು, ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ವಾಪಸ್ ಪಡೆಯಬೇಕು ಎಂದೂ ಒತ್ತಾಯಿಸಿದ್ದೇವೆ ಎಂದರು.