ಚಿತ್ರದುರ್ಗ : ಕೀಟನಾಶಕಗಳ ಬಳಕೆಯಲ್ಲಿ ರೈತರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ, ಕೃಷಿ ಪೂರಕ ಸೂಕ್ಷ್ಮ ಜೀವಿಗಳ ಅಲಭ್ಯತೆ ರೈತರನ್ನು ಕಾಡಲಿದೆ. ಈ ಕುರಿತಂತೆ ಕೃಷಿ ಮತ್ತು ತೋಟಗಾರಿಕೆ ಅಧ್ಯಯನದ ವಿದ್ಯಾರ್ಥಿಗಳು ರೈತರಿಗೆ ತರಬೇತಿ ಮೂಲಕ ಮನವರಿಕೆ ಮಾಡಿಕೊಟ್ಟರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಶಿವಮೊಗ್ಗ. ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ಕಸವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೀಟನಾಶಕಗಳ ಬಳಕೆಯಲ್ಲಿ ವಹಿಸಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ರೈತರು ವಾಡಿಕೆಯಂತೆ ಹೆಚ್ಚಿನ ಮಟ್ಟದ ಕೀಟನಾಶಕಗಳನ್ನು ಬಳಸುತ್ತಾರೆ. ಸಾಮಾನ್ಯವಾಗಿ ಕೀಟನಾಶಕ ಮಣ್ಣಿನೊಳಗೆ ಸೇರಿಕೊಂಡು ನೇರವಾಗಿ ಮಣ್ಣಿನ ಫಲವತ್ತತೆಯನ್ನು ನಾಶಮಾಡುತ್ತದೆ ಹಾಗೂ ಸೂಕ್ಷ್ಮ ಜೀವಿಗಳ ಲಭ್ಯತೆಯು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಹೀಗಾಗಿ ರೈತರು ಕೀಟನಾಶಕಗಳನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ವಿಧಾನದಲ್ಲಿ ಬಳಕೆ ಮಾಡುವುದು ಸೂಕ್ತವೆಂದು ಅಂತಿಮ ವರ್ಷದ ವಿದ್ಯಾರ್ಥಿನಿ ಚೈತ್ರ ಅವರು ರೈತರಿಗೆ ತಿಳಿಸಿದರು. ಕೀಟನಾಶಕಗಳ ಸಿಂಪಡಣೆಯ ಸಂದರ್ಭದಲ್ಲಿ ತಪ್ಪದೇ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು. ಸಂರಕ್ಷಿತ ಉಡುಪು, ಮಾಸ್ಕ್ ,ಬೂಟು , ಗ್ಲೌಸ್ ಗಳನ್ನು ಧರಿಸಿ ಕೀಟನಾಶಕ ಸಿಂಪಡಣೆ ಮಾಡಬೇಕು ಎಂದರು. ಸಿಂಪಡಣೆ ಮಾಡಿದ ನಂತರ ಕಡ್ಡಾಯವಾಗಿ ಚೆನ್ನಾಗಿ ಕೈಗಳನ್ನು ತೊಳೆಯಬೇಕು ಎಂದು ತಿಳಿಸಿದರು. ಕೀಟನಾಶಕ ಸಿಂಪಡಣೆ ಮಾಡುವ ಸಂದರ್ಭದಲ್ಲಿ ಬಳಸಬೇಕಾದ ಉಡುಪನ್ನು ರೈತರಿಗೆ ಮನಮುಟ್ಟುವಂತೆ ಪ್ರಾತ್ಯಕ್ಷಿಕೆ ಮೂಲಕ ಮನವರಿಕೆ ಮಾಡಿಕೊಡಲಾಯಿತು.