ಬೆಂಗಳೂರು : 2015 ರ ನಂತರ ಬರಗಾಲದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ 2024-25 ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ-2009 ರ ಸೆಕ್ಷನ್ 12(1)(ಬಿ) ಮತ್ತು ಸೆಕ್ಷನ್ 12(1) (ಸಿ)ಅಡಿ ಪ್ರವೇಶ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2024-25ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 12(1)(ಬಿ) ಮತ್ತು 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆ ನಡೆಸಲು ಉಲ್ಲೇಖ (5) ಮತ್ತು (7) ರ ಸರ್ಕಾರದ ಆದೇಶದಂತೆ ನೆರೆಹೊರೆಯನ್ನು ಈ ಕೆಳಕಾಣಿಸಿದಂತೆ ವ್ಯಾಖ್ಯಾನಿಸಲಾಗಿದೆ.
ನೆರೆಹೊರ
ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಿಸಿದ ಕಂದಾಯ ಗ್ರಾಮದ ಭೌಗೋಳಿಕ ಗಡಿ;
ಶಾಲೆ ಇರುವ ನಗರ ಸಭೆ, ಟೌನ್ ಮುನಿಸಿಪಲ್ ಕೌನ್ಸಿಲ್ ಮತ್ತು ಪಟ್ಟಣ ಪಂಚಾಯಿತಿಯ ಭೌಗೋಳಿಕ ಗಡಿ;
ಮಹಾನಗರ ಪಾಲಿಕೆಗಳು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರತಿ ವಾರ್ಡ್ ಭೌಗೋಳಿಕ ಗಡಿ.
ಈಗಾಗಲೇ ಉಲ್ಲೇಖ(10)ರಂತೆ 2024-25ನೇ ಸಾಲಿನ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶಾಲೆಗಳ ಮ್ಯಾಪಿಂಗ್ ಮಾಡುವ ಕುರಿತು ಕಳುಹಿಸಿರುವ ಸುತ್ತೋಲೆಯನ್ನು ಮುಂದುವರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು (ಆಡಳಿತ) ಈ ಕೆಳಕಾಣಿಸಿದ ಕ್ರಮ ತೆಗೆದುಕೊಳ್ಳಲು ತಿಳಿಸಿದೆ.
1. ನೆರೆಹೊರೆಯಲ್ಲಿರುವ ಯಾವುದೇ ಶಾಲೆಯನ್ನು ಕೈಬಿಡದಂತೆ ಎಲ್ಲಾ ಸರ್ಕಾರಿ, ಬಿ.ಬಿ.ಎಂ.ಪಿ. ಶಾಲೆಗಳು ಅನುದಾನಿತ ಮತ್ತು ಅನುದಾನರಹಿತ, ಶಾಲೆಗಳನ್ನು ಮ್ಯಾಪ್ ಮಾಡುವುದು.
2. ಅಲ್ಪಸಂಖ್ಯಾತ ಶಾಲೆಗಳೆಂದು ಘೋಷಣಾ ಪತ್ರ ಪಡೆದಿರುವ, ಈಗಾಗಲೇ ಮುಚ್ಚಿರುವ ಮತ್ತುನ್ಯಾಯಾಲಯದ ತಡೆಯಾಜ್ಞೆ ಪಡೆದಿರುವ ಶಾಲೆಗಳನ್ನು ಪಟ್ಟಿಯಿಂದ ಕೈಬಿಡುವುದು.
3. ಎಲ್.ಕೆ.ಜಿ. ಮತ್ತು ಯು.ಕೆ.ಜಿ ತರಗತಿಗಳನ್ನು ಮಾತ್ರ ನಡೆಸುವ ಶಾಲೆಗಳನ್ನು ಪಟ್ಟಿಯಲ್ಲಿ ಸೇರಿಸಬಾರದು.
ಅಲ್ಪ ಸಂಖ್ಯಾತವಲ್ಲದ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ದಿ: 31.12.2023 ರಲ್ಲಿದ್ದಂತೆ ಎಲ್.ಕೆ.ಜಿ. ಮತ್ತು 1 ನೇ ತರಗತಿಯ ಒಟ್ಟು ದಾಖಲಾತಿ ಸಂಖ್ಯೆಯನ್ನು ಎಸ್.ಎ.ಟಿ.ಎಸ್. ತಂತ್ರಾಂಶದ ಆಧಾರದ ಮೇಲೆ ಶೇ.25% ಸೀಟು ಹಂಚಿಕೆಗೆ ಪರಿಗಣಿಸಲಾಗುವುದು.
2024-25ನೇ ಸಾಲಿನಲ್ಲಿ ಕಾಯ್ದೆಯ ಸೆಕ್ಷನ್ 12(1) (ಬಿ) ಮತ್ತು 12(1)(ಸಿ) ಅನ್ವಯ ಪ್ರವೇಶ ಪ್ರಕ್ರಿಯೆಗೆ ನಿಗದಿಪಡಿಸಿದ ವೇಳಾಪಟ್ಟಿಯನ್ನು ಈ ಸುತ್ತೋಲೆಗೆ ಲಗತ್ತಿಸಿದೆ. ವೇಳಾಪಟ್ಟಿ ಪ್ರಕಾರ ಸಂಬಂಧಿಸಿದ ಪ್ರಾಧಿಕಾರ ಸಕಾಲಿಕ ಕ್ರಮ ತೆಗೆದುಕೊಳ್ಳುವುದು. ಆನ್ಲೈನ್ ತಂತ್ರಾಂಶದಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಅನುಕೂಲವಾಗುವಂತೆ ಪ್ರತಿ ವರ್ಷದಂತೆ ಅಗತ್ಯ ಗಣಕಯಂತ್ರ ವ್ಯವಸ್ಥೆ ಮತ್ತು ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು.
ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವ ಮೊದಲು ನೆರೆಹೊರೆಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆ ಇಲ್ಲದಿರುವುದನ್ನು ಪಡಿಸಿಕೊಂಡು ನೆರೆಹೊರೆಯಲ್ಲಿರುವ ಅಲ್ಪಸಂಖ್ಯಾತವಲ್ಲದ ಅಧಿಕೃತ ಅನುದಾನ ರಹಿತ ಶಾಲೆಗಳ ಅಂತಿಮ ಪಟ್ಟಿ ಹಾಗೂ ಸದರಿ ಶಾಲೆಗಳಲ್ಲಿ ಶಾಲಾವಾರು ಶೇಕಡಾ 25ರ ಪ್ರಮಾಣದಲ್ಲಿ ಲಭ್ಯವಿರುವ ಸೀಟುಗಳ ಸಂಖ್ಯೆಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಅದರಂತೆ ಉಪನಿರ್ದೇಶಕರು(ಆಡಳಿತ)ರವರ ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯ ಸೂಚನಾ ಫಲಕಗಳಲ್ಲಿ ಪ್ರಕಟಿಸಲು ಕ್ರಮವಹಿಸುವುದು.
ಅನುದಾನಿತ ಶಾಲೆಗಳಲ್ಲಿ ಅನುದಾನದ ಅನುಪಾತಕ್ಕೆ ಅನುಗುಣವಾಗಿ ಸೆಕ್ಷನ್ 12(1)(ಬಿ) ಅಡಿ 1ನೇ ತರಗತಿಗೆ ಶಾಲಾವಾರು ಶೇಕಡಾ 25ರ ಪ್ರಮಾಣದಲ್ಲಿ ಲಭ್ಯವಿರುವ ಸೀಟುಗಳ ಮಾಹಿತಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಅದರಂತೆ ತಮ್ಮ ಕಛೇರಿಯ ಸೂಚನಾ ಫಲಕಗಳಲ್ಲಿ ಪ್ರಕಟಿಸಲು ಕ್ರಮವಹಿಸುವುದು.
ನೆರೆಹೊರೆ ಶಾಲೆಗಳಿಗೆ ಸಂಬಂಧಿಸಿದಂತೆ ನಿಗಧಿತ ಅವಧಿಯಲ್ಲಿ ಆಕ್ಷೇಪಣೆಗಳನ್ನು ಸ್ವೀಕರಿಸಿ, ದತ್ತಾಂಶ ಪರಿಶೀಲಿಸಿ, ನೈಜತೆಯನ್ನು ಖಾತರಿ ಪಡಿಸಿಕೊಂಡು ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವುದು ಕ್ಷೇತ್ರಶಿಕ್ಷಣಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಉಪನಿರ್ದೇಶಕರ ಕಛೇರಿಯಿಂದ ಈ ಕುರಿತು ಅನುಪಾಲನೆ ಮಾಡಲು ತಿಳಿಸಿದೆ.
ಅರ್ಜಿ ಸಲ್ಲಿಸುವ ಕ್ರಮ ಹಾಗೂ ಪರಿಶೀಲನೆ:
ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟಿಗಾಗಿ ಪ್ರವೇಶ ಕೋರುವ ಮಗು ಮತ್ತು ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಕಡ್ಡಾಯ. ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿ ಸೀಟು ಬಯಸುವ ಪಾಲಕರು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗಳಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿ ಉಚಿತವಾಗಿ ಅಥವಾ ಸರ್ಕಾರದ ಪಾವತಿ ಕೇಂದ್ರಗಳಾದ ಬೆಂಗಳೂರು ನಗರದಲ್ಲಿ, ಬೆಂಗಳೂರು-ಒನ್, ಇತರೆ ನಗರ ಪ್ರದೇಶಗಳಲ್ಲಿ ಕರ್ನಾಟಕ-ಒನ್, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಆಟಲ್ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆನ್ಲೈನ್ನಲ್ಲಿ ಶಾಲೆಗಳ ಆದ್ಯತೆ ನಮೂದಿಸಿ ಅರ್ಜಿಯನ್ನು ಸಲ್ಲಿಸಬಹುದು. ತಂದೆ/ತಾಯಿ/ಪಾಲಕರ ಬಳಿ ಸ್ವಂತ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸೌಲಭ್ಯ ಲಭ್ಯವಿದ್ದಲ್ಲಿ ಆನ್ಲೈನ್ ಮುಖಾಂತರ ನೇರವಾಗಿ ಅರ್ಜಿ ಸಲ್ಲಿಸಬಹುದು.
ಜಾತಿ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಆರ್.ಡಿ. ಸಂಖ್ಯೆಯನ್ನು ನಿಗದಿತ ಕಾಲಂನಲ್ಲಿ ಸರಿಯಾಗಿ ನಮೂದಿಸುವುದು. ಈ ದಾಖಲೆಗಳನ್ನು ಆಪ್ ಲೋಡ್ ಮಾಡುವ ಅವಶ್ಯಕತೆ ಇಲ್ಲ. ಅರ್ಜಿ ಸಲ್ಲಿಸುವಾಗಲೇ ತಂತ್ರಾಂಶದ ಮೂಲಕ ನಿಜಕಾಲಿಕ ಪರಿಶೀಲನೆ ನಡೆಸಿ, ಸದರಿ ದಾಖಲೆಗಳ ನೈಜತೆಯನ್ನು ಖಾತರಿ ಪಡಿಸಿಕೊಳ್ಳಲಾಗುವುದು.
ವಿಶೇಷ ಪ್ರವರ್ಗದಡಿ ಮೀಸಲಾತಿ ಕೋರುವ ಪೋಷಕರು ಸೂಕ್ತ ಕಾಲಂನಲ್ಲಿ ನಿರ್ದಿಷ್ಟವಾಗಿ ಮೀಸಲಾತಿ ಕೋರಿರುವ ಪ್ರವರ್ಗವನ್ನು ನಮೂದಿಸುವುದು ಹಾಗೂ ಸದರಿ ಪವರ್ಗಕ್ಕೆ ಸಂಬಂಧಿಸಿದ ದಾಖಲೆಯನ್ನು ತಂತ್ರಾಂಶದಲ್ಲಿ ಆಪ್ ಲೋಡ್ ಮಾಡುವುದು.
ಅನಾಥ ಮಗು, ವಿಶೇಷ ಅಗತ್ಯತೆಯುಳ್ಳ ಮಗು (ಸಿ.ಡಬ್ಲ್ಯೂ.ಎಸ್.ಎನ್), ಹೆಚ್.ಐ.ವಿ. ಸೋಂಕಿತ /ಭಾದಿತ ಮಗು, ವಲಸೆ ಮತ್ತು ಬೀದಿ ಮಗು, ಬರಗಾಲದ ಕಾರಣ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಮಗು, ಮಂಗಳಮುಖಿ ಇತ್ಯಾದಿ ವಿಶೇಷ ಪ್ರವರ್ಗದಡಿ ಮೀಸಲಾತಿ ಕೋರಿ ಸಲ್ಲಿಸಿರುವ ಅರ್ಜಿಗಳ ಮತ್ತು ದಾಖಲೆಗಳ ನೈಜತೆಯನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಖುದ್ದಾಗಿ ಮೂಲ ದಾಖಲೆಗಳೊಂದಿಗೆ ತಾಳೆ ನೋಡಿ, ಪರಿಶೀಲಿಸಿ ಸರಿಯಿದ್ದಲ್ಲಿ ಮಾತ್ರ ದಾಖಲೆಯನ್ನು ಸ್ಕ್ಯಾನ್ ಮಾಡಿ. ಅಪ್ಲೋಡ್ ಮಾಡುವಂತೆ ಸೂಚನೆ ನೀಡಲಾಗಿದೆ.