ಬೆಂಗಳೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ( Farmer CM HD Kumaraswamy ) ನಿನ್ನೆ ಸದನದಲ್ಲಿ ಸಚಿವರೊಬ್ಬರ ಅಕ್ರಮಗಳ ಬಗ್ಗೆ ದಾಖಲೆಗಳ ಸಹಿತ ಮಾಹಿತಿ ಬಿಡುಗಡೆ ಮಾಡೋದಾಗಿ ಹೇಳಿದ್ದರು. ಅದರಂತೆ ಇಂದು ವಿಧಾನಸಭೆಯಲ್ಲಿ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ( Minister Dr CN Ashwathnarayana ) ವಿರುದ್ಧ ಸ್ಪೋಟಕ ಮಾಹಿತಿಯ ಜೊತೆಗೆ, ಅಕ್ರಮಗಳ ದಾಖಲೆಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು, ಸಚಿವ ಅಶ್ವತ್ಥನಾರಾಯಣ ಅವರು BMS ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್ ಮೂಲಕ ಅಕ್ರಮವೆಸಗಿರೋ ಬಗ್ಗೆ ಈ ಕೆಳಕಂಡಂತೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ.
1. ಶ್ರೀ ಬಿ.ಎಂ.ಶ್ರೀನಿವಾಸಯ್ಯ ಅವರು ಸಮಾಜ ಸೇವೆ ಮಾಡಬೇಕು ಎಂಬ ಸ್ವಚ್ಛ ಮತ್ತು ಉನ್ನತ ಕನಸು ಕಟ್ಟಿಕೊಂಡು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಪಟ್ಟಣದಿಂದ ಬೆಂಗಳೂರಿಗೆ ಬರುತ್ತಾರೆ.
2. ಶ್ರೀ ಶ್ರೀನಿವಾಸಯ್ಯ ಅವರ ಹೃದಯ ವೈಶಾಲ್ಯತೆ ಹೇಗಿರುತ್ತದೆ ಎಂದರೆ; ಅವರಿಗೆ ಸೇವೆ-ಉದಾರತೆ ಬಿಟ್ಟರೆ ಅವರಲ್ಲಿ ಏನೂ ಇರುವುದಿಲ್ಲ. ಆವತ್ತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಡಿಯಾಲಜಿ ಬ್ಲಾಕ್ ಕಟ್ಟಬೇಕಾದರೆ, ಶ್ರೀನಿವಾಸಯ್ಯನವರೊಬ್ಬರೇ ಅಷ್ಟೂ ದೇಣಿಗೆ ನೀಡಿದ್ದರಂತೆ. ಅವರ ಸೇವಾ ತತ್ಪರತೆ ಮೈಸೂರು ಮಹಾರಾಜರಿಗೆ ಗೊತ್ತಾಗುತ್ತದೆ.
3. ನಮ್ಮ ಮಹಾರಾಜರ ಹೃದಯ ವೈಶಾಲ್ಯತೆ ಮತ್ತು ಜನಪರ ಕಾಳಜಿಯ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮಹಾರಾಜರು, ಶ್ರೀನಿವಾಸಯ್ಯ ಅವರನ್ನು ಗುರುತಿಸುತ್ತಾರೆ. “ಧರ್ಮಪ್ರಕಾಶ ರಾಜಕಾರ್ಯಪ್ರಸಕ್ತ” ಎಂಬ ಬಿರುದು ನೀಡಿ ಗೌರವಿಸುತ್ತಾರೆ. ಅಷ್ಟಕ್ಕೇ ನಿಲ್ಲದ ಶ್ರೀನಿವಾಸಯ್ಯ ಅವರು, ತಮ್ಮ ಸಮಾಜ ಸೇವಾ ಕೈಂಕರ್ಯವನ್ನೂ ಮುಂದುವರಿಸುತ್ತಾರೆ.
4. ಮೈಸೂರು ಮಹಾರಾಜರ ಪ್ರೋತ್ಸಾಹದಿಂದ 1946ರಲ್ಲಿ ಶ್ರೀನಿವಾಸಯ್ಯ ಅವರು ʼBMS ಎಂಜಿನಿರಿಂಗ್ ಕಾಲೇಜ್ʼ ಅನ್ನು ಸ್ಥಾಪನೆ ಮಾಡುತ್ತಾರೆ.
5. ಈ ಕಾಲೇಜಿನ ಹೆಗ್ಗಳಿಕೆ ಎಂದರೆ; ಇದು ಇಡೀ ಭಾರತದಲ್ಲಿ ಸ್ಥಾಪನೆಯಾದ ಮೊತ್ತ ಮೊದಲ ಖಾಸಗಿ ಎಂಜಿನಿಯರಿಂಗ್ ಕಾಲೇಜು. ಅದೂ ಕರ್ನಾಟಕದಲ್ಲಿ, ಅಂದಿನ ಮೈಸೂರು ರಾಜ್ಯದಲ್ಲಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ಕೇವಲ ಒಂದೇ ವರ್ಷಕ್ಕೆ ಮೊದಲು ಆರಂಭವಾಗಿತ್ತು. ಅಲ್ಲಿಗೆ, ಈ ಕಾಲೇಜಿನ ಹೆಗ್ಗಳಿಕೆ, ಪರಂಪರೆ ಎಂಥದ್ದು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
6. ಇಂಥ ಶ್ರೀನಿವಾಸಯ್ಯನವರು 1953ರಲ್ಲಿ ಮರಣ ಹೊಂದುತ್ತಾರೆ. ಅವರು ಕೇವಲ 50 ವರ್ಷ ವಯಸ್ಸಾಗುವುದಕ್ಕೆ ಮೊದಲೇ ಜೀವ ಬಿಡುತ್ತಾರೆ.
7. ಶ್ರೀ ಶ್ರೀನಿವಾಸಯ್ಯ ಅವರಿಗೆ ಇಬ್ಬರು ಪತ್ನಿಯರು, ಒಬ್ಬರು; ಲಕ್ಷ್ಮಮ್ಮ, ಇನ್ನೊಬ್ಬರು; ಲಕ್ಷ್ಮೀದೇವಮ್ಮ. ಅವರಿಗೆ ಒಬ್ಬರೇ ಪುತ್ರರು, ಅವರೇ ಬಿ.ಎಸ್.ನಾರಾಯಣ್.
8. ತಂದೆಯ ನಿಧನದ ನಂತರ ಕಾಲೇಜಿನ ಜವಾಬ್ದಾರಿ ವಹಿಸಿಕೊಳ್ಳುವ ಬಿ.ಎಸ್.ನಾರಾಯಣ್ ಅವರು, BMS ಎಂಜಿನಿಯರಿಂಗ್ ಕಾಲೇಜ್ʼನ ದಿನನಿತ್ಯದ ನಿರ್ವಹಣೆ, ಆಡಳಿತ ಇತ್ಯಾದಿಗಳನ್ನು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಒಂದು ಟ್ರಸ್ಟ್ ರಚನೆ ಮಾಡುತ್ತಾರೆ. ಆ ಟ್ರಸ್ಟನ್ನು ತಮ್ಮ ತಂದೆಯವರ ಹೆಸರಿನಲ್ಲಿಯೇ ಸ್ಥಾಪನೆ ಮಾಡುತ್ತಾರೆ. ಹೀಗೆ ʼಧರ್ಮಪ್ರಕಾಶ ರಾಜಕಾರ್ಯಪ್ರಸಕ್ತ ಎಂ.ಶ್ರೀನಿವಾಸಯ್ಯ ಎಜ್ಯುಕೇಷನಲ್ ಟ್ರಸ್ಟ್ʼ 1957ರಲ್ಲಿ ಅಸ್ತಿತ್ವಕ್ಕೆ ಬರುತ್ತದೆ.
9. ಆಗ ಒಂದು ಟ್ರಸ್ಟ್ ಡೀಡ್ ಕೂಡ ತಯಾರು ಆಗುತ್ತದೆ. ಅದನ್ನು ನಮ್ಮ ಘನವೇತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ (1993-1994)
ಶ್ರೀ ಎಂ.ಎನ್.ವೆಂಕಟಾಚಲಯ್ಯ ಅವರು 1957ರಲ್ಲಿಯೇ ಡೀಡ್ʼನ (ನಂಬಿಕೆಯ ಪತ್ರ) ಕರಡು ತಯಾರಿಸಿಕೊಟ್ಟು 2-12-1957ರಂದು ಅದನ್ನು ನೋಂದಣಿಯನ್ನೂ ಮಾಡಿಸಿದ್ದರು. ಅಲ್ಲಿಗೆ ಇದು ಅಧಿಕೃತ ದಾಖಲೆಯಾಗಿ ಪರಿಣಮಿಸಿತು. ಕೆಲ ದಿನಗಳ ಕಾಲ ಎಂ.ಎನ್.ವೆಂಕಟಾಚಲಯ್ಯ ಅವರು ಕೂಡ ಈ ಟ್ರಸ್ಟಿನ ಟ್ರಸ್ಟಿ ಆಗಿ ಕೆಲಸ ಮಾಡಿದ್ದರು.
10. ʼಧರ್ಮಪ್ರಕಾಶ ರಾಜಕಾರ್ಯಪ್ರಸಕ್ತ ಎಂ.ಶ್ರೀನಿವಾಸಯ್ಯ ಎಜ್ಯುಕೇಷನಲ್ ಟ್ರಸ್ಟ್ʼನ ಮೊದಲ ಅಧ್ಯಕ್ಷರಾಗಿ ದಿವಂಗತ ಬಿ.ವಿ.ನಾರಾಯಣ ರೆಡ್ಡಿ ಅವರು ನೇಮಕವಾಗುತ್ತಾರೆ. ಅವರು ಅಂದಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ʼನ ಜನರಲ್ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದರು. ಅವರ ನಂತರ ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ
ಶ್ರೀ ಕಡಿದಾಳ್ ಮಂಜಪ್ಪ ಅವರೂ ಈ ಟ್ರಸ್ಟಿನ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು.
11. ಇನ್ನು ʼಧರ್ಮಪ್ರಕಾಶ ರಾಜಕಾರ್ಯಪ್ರಸಕ್ತ ಎಂ.ಶ್ರೀನಿವಾಸಯ್ಯ ಎಜ್ಯುಕೇಷನಲ್ ಟ್ರಸ್ಟ್ʼ ಅಡಿಯಲ್ಲಿ ಈ ಕೆಳಗಿನ ಶಿಕ್ಷಣ ಸಂಸ್ಥೆಗಳು ನಡೆಯುತ್ತಿದೆ.
*BMS ಎಂಜಿನೀಯರಿಂಗ್ ಕಾಲೇಜು- ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು
*BMS ಸಂಜೆ ಎಂಜಿನಿಯರಿಂಗ್ ಕಾಲೇಜ್, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು
*BMS ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಎಂಜಿನೀಯರಿಂಗ್ ಕಾಲೇಜು), ಯಲಹಂಕ, ಬೆಂಗಳೂರು
*BMS ಮಹಿಳಾ ಕಾಲೇಜು, ಬಸವನಗುಡಿ, ಬೆಂಗಳೂರು
*BMS ಕಾನೂನು ಕಾಲೇಜು, ಬಸವನಗುಡಿ, ಬೆಂಗಳೂರು
12. ಮೂಲ ಟ್ರಸ್ಟ್ ಡೀಡ್ʼನ ಷರತ್ತು 1V ರಲ್ಲಿರುವ ಅಂಶಗಳು:
*1957ರಲ್ಲಿ ತಯಾರಾಗಿ ನೋಂದಣಿಯೂ ಆಗಿರುವ ʼಧರ್ಮಪ್ರಕಾಶ ರಾಜಕಾರ್ಯಪ್ರಸಕ್ತ ಎಂ.ಶ್ರೀನಿವಾಸಯ್ಯ ಎಜ್ಯುಕೇಷನಲ್ ಟ್ರಸ್ಟ್ʼನ ಡೀಡ್ʼನ ಪ್ರಮುಖ ಷರತ್ತುಗಳು ಸ್ಪಷ್ಟವಾಗಿವೆ.
*ಈ ಟ್ರಸ್ಟು ಮತ್ತು ಅದರ ಅಡಿಯಲ್ಲಿರುವ ಶಿಕ್ಷಣ ಸಂಸ್ಥೆಗಳ ಆಡಳಿತವನ್ನು ನೋಡಿಕೊಳ್ಳಲು 5 ಸದಸ್ಯರು ಇರುವ ಕೌನ್ಸಿಲ್ ಆಫ್ ಟ್ರಸ್ಟಿಗಳು ಇರುತ್ತಾರೆ. ಈ ಪೈಕಿ ಎಂ.ಶ್ರೀನಿವಾಸಯ್ಯನವರ ಏಕೈಕ ಪುತ್ರರಾದ ಬಿ.ಎಸ್.ನಾರಾಯಣ್ ಅವರು ಅಜೀವ ಟ್ರಸ್ಟಿ & ದಾನಿ ಟ್ರಸ್ಟಿ ಆಗಿರುತ್ತಾರೆ ಹಾಗೂ ಇತರೆ 3 ಟ್ರಸ್ಟಿಗಳನ್ನು ನೇಮಕ ಮಾಡುವ ಮತ್ತು 3 ವರ್ಷಕ್ಕೊಮ್ಮೆ ಅವರನ್ನು ಬದಲಾವಣೆ ಮಾಡುವ ಅಧಿಕಾರ ಹೊಂದಿರುತ್ತಾರೆ.
*ಇದಲ್ಲದೆ, ರಾಜ್ಯ ಸರಕಾರವು ತನ್ನ ವಿವೇಚನೆಯೊಂದಗೆ ತನ್ನದೊಬ್ಬರು ಟ್ರಸ್ಟಿಯನ್ನು ನೇಮಕ ಮಾಡಬಹುದು. ಮೂಲ ಡೀಡ್ʼನಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ.
*ಮೂಲ ಡೀಡ್ ಪ್ರಕಾರ, ಬಿ.ಎಸ್.ನಾರಾಯಣ್ ಅವರೇ ತಮ್ಮ ಜೀವಿತಾವಧಿವರೆಗೂ ಟ್ರಸ್ಟ್ ನ ದಾನಿ ಟ್ರಸ್ಟಿ ಆಗಿರುತ್ತಾರೆ. ಅವರ ನಂತರ ಅಥವಾ ಅವರು ಮರಣ ಹೊಂದಿದ ನಂತರ ಅವರ ವಂಶಸ್ಥರೇ ದಾನಿ ಟ್ರಸ್ಟಿ ಆಗಿ ಕರ್ತವ್ಯದ ಹೊಣೆ ವಹಿಸಿಕೊಳ್ಳಬೇಕು. ಒಂದು ವೇಳೆ ಬಿ.ಎಸ್.ನಾರಾಯಣ್ ಅವರ ವಂಶಸ್ಥರು ಇಲ್ಲವಾದಲ್ಲಿ ಕರ್ನಾಟಕ ರಾಜ್ಯ ಸರಕಾರದ ನಾಮನಿರ್ದೇಶಿತ ಟ್ರಸ್ಟಿಯೇ ದಾನಿ ಟ್ರಸ್ಟಿ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ ಹಾಗೂ ಇತರೆ ಟ್ರಸ್ಟಿಗಳನ್ನು ನೇಮಕ ಮಾಡುವ ಅಧಿಕಾರವನ್ನೂ ಹೊಂದಿರುತ್ತಾರೆ.
13.ಮೂಲ ಟ್ರಸ್ಟ್ ಡೀಡ್ʼನ ಷರತ್ತು V1(12) ರಲ್ಲಿರುವ ಅಂಶಗಳು:
*ಒಂದು ವೇಳೆ 1957ರ ಮೂಲ ಡೀಡ್ʼನಲ್ಲಿ ಏನಾದರೂ ತಿದ್ದುಪಡಿ ತರಬೇಕಾದರೆ, ದಾನಿ ಟ್ರಸ್ಟಿ ಆಗಿರುವ ಬಿ.ಎಸ್.ನಾರಾಯಣ್ (ಅವರು ಇಲ್ಲದಿದ್ದರೆ ಅಥವಾ ಅವರ ಉತ್ತರಾಧಿಕಾರಿ ದಾನಿ ಟ್ರಸ್ಟಿಯೂ ಆಗಬಹುದು) ಮತ್ತು ಕರ್ನಾಟಕ ರಾಜ್ಯ ಸರಕಾರದಿಂದ ನಾಮನಿರ್ದೇಶನಗೊಂಡ ಟ್ರಸ್ಟಿಯ ಒಪ್ಪಿಗೆ ಪಡೆಯುವುದು ಕಡ್ಡಾಯ.
*1957ರ ಮೂಲ ಡೀಡ್ʼನ ಪ್ರಕಾರ, ಅಂದಿನ ಮೈಸೂರು ರಾಜ್ಯ ಸರಕಾರವು, ಅಂದರೆ; ಈಗಿನ ಕರ್ನಾಟಕ ರಾಜ್ಯ ಸರಕಾರವು ಈ ಟ್ರಸ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಹಾಗೂ ʼಧರ್ಮಪ್ರಕಾಶ ರಾಜಕಾರ್ಯಪ್ರಸಕ್ತ ಎಂ.ಶ್ರೀನಿವಾಸಯ್ಯ ಎಜ್ಯುಕೇಷನಲ್ ಟ್ರಸ್ಟ್ʼ ಸಾರ್ವಜನಿಕ ಟ್ರಸ್ಟ್ ಆಗಿರುತ್ತದೆ ಹಾಗೂ ಅದರ ಅಡಿಯಲ್ಲಿರುವ ಸಮಸ್ತ ಆಸ್ತಿಯೂ ಖಾಸಗಿ ಸ್ವತ್ತಲ್ಲ, ಅದು ಸಾರ್ವಜನಿಕ ಸ್ವತ್ತಾಗಿರುತ್ತದೆ ಎಂಬ ಅಂಶವನ್ನು ಒತ್ತಿ ಹೇಳಲಾಗಿದೆ.
14.ಟ್ರಸ್ಟಿನ ಉತ್ತರಾಧಿಕಾರದ ಷರತ್ತುಗಳನ್ನು ತಿದ್ದುಪಡಿ ಮಾಡುವ ಮೊದಲ ಪ್ರಯತ್ನ:
*ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಕಡಿದಾಳ್ ಮಂಜಪ್ಪ ಅವರು 1978ರಲ್ಲಿ ಟ್ರಸ್ಟಿನ ಅಧ್ಯಕ್ಷರಾಗಿದ್ದಾಗ ಮೊದಲ ಬಾರಿಗೆ ಉತ್ತರಾಧಿಕಾರದ ಷರತ್ತುಗಳಿಗೆ ತಿದ್ದುಪಡಿ ತರುವ ಪ್ರಯತ್ನ ನಡೆಸಲಾಯಿತು.
*ಶ್ರೀ ಕಡಿದಾಳ್ ಮಂಜಪ್ಪನವರು ಕೆಲವು ಮೂಲಭೂತ ತಿದ್ದುಪಡಿಗಳನ್ನು ತರುವ ಪ್ರಯತ್ನವನ್ನು ನಡೆಸಿಸಿದರು.
*1978ರಲ್ಲಿ ದಾನಿ ಟ್ರಸ್ಟಿ ಆಗಿದ್ದ ಬಿ.ಎಸ್.ನಾರಾಯಣ್ ಅವರಿಗೆ 43 ವರ್ಷ ವಯಸ್ಸಿತ್ತು. ಅವರಿಗೆ ಸಂತಾನ ಇರಲಿಲ್ಲ, ಮಕ್ಕಳಿರಲಿಲ್ಲ. ಇವರ ನಂತರ ಟ್ರಸ್ಟಿನ ಕಾರ್ಯಭಾರ ನಡೆಸಿಕೊಂಡು ಹೋಗಲು ಪರ್ಯಾಯ ವ್ಯವಸ್ಥೆಯೊಂದನ್ನು ರೂಪಿಸಲು ಚಿಂತಿಸಿದ್ದರು ಕಡಿದಾಳ್ ಮಂಜಪ್ಪನವರು. ಬಿ.ಎಸ್.ನಾರಾಯಣ್ ಅವರ ನಂತರ ದಾನಿ ಟ್ರಸ್ಟಿ ಆಗಲು ಅವರ ವಂಶಸ್ಥರು ಇಲ್ಲದಿದ್ದಾಗ ಟ್ರಸ್ಟ್ ಅನ್ನು ಮುನ್ನಡೆಸಿಕೊಂಡು ಹೋಗಲು ಶ್ರೀ ಕಡಿದಾಳ್ ಮಂಜಪ್ಪ ಅವರ ನೇತೃತ್ವದಲ್ಲಿ 12-10-1978ರಂದು ಟ್ರಸ್ಟಿಗಳು ಒಂದು ನಿರ್ಣಯವನ್ನು ಅಂಗೀಕಾರ ಮಾಡುತ್ತಾರೆ. 1957ರ ಮೂಲ ಡೀಡ್ʼನ ಷರತ್ತು IV (i) ಬಿ.ಎಸ್.ನಾರಾಯಣ್ ಅವರ ನಂತರ ಅವರ ಮೊದಲ ಪತ್ನಿ ಶ್ರೀಮತಿ ಮಿನ್ನಿ ನಾರಾಯಣ್ ಅವರು ಟ್ರಸ್ಟಿನ ದಾನಿ ಟ್ರಸ್ಟಿ ಆಗಬೇಕು ಎಂದು ನಿರ್ಣಯ ಪಾಸು ಮಾಡಲಾಗುತ್ತದೆ.
*ಅದಾದ ಮೇಲೆ ಈ ತಿದ್ದುಪಡಿಯಲ್ಲಿ ಇನ್ನೂ ಒಂದು ಅಂಶ ಇರುತ್ತದೆ. ಶ್ರೀಮತಿ ಮಿನ್ನಿ ನಾರಾಯಣ್ ಅವರ ನಂತರ ಬಿ.ಎಸ್.ನಾರಾಯಣ್ ಅವರ ವಂಶಸ್ಥರಲ್ಲಿ ಹಿರಿಯರೊಬ್ಬರು, ಇಲ್ಲವೇ, ಬಿ.ಎಸ್.ನಾರಾಯಣ್ ಅಥವಾ ಮಿನ್ನಿ ನಾರಾಯಣ್ ಅವರು ನಾಮನಿರ್ದೇಶನ ಮಾಡಿದ ಟ್ರಸ್ಟಿಯು ದಾನಿ ಟ್ರಸ್ಟಿಯಾಗಿ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ.
*ಈ ಪರ್ಯಾಯವಾದ ಯಾವುದೇ ವ್ಯವಸ್ಥೆ ರೂಪುಗೊಳ್ಳಲು ಸಾಧ್ಯವಾಗದ ಪಕ್ಷದಲ್ಲಿ ಕರ್ನಾಟಕ ರಾಜ್ಯ ಸರಕಾರದ ನಾಮ ನಿರ್ದೇಶಿತ ಟ್ರಸ್ಟಿಯು ದಾನಿ ಟ್ರಸ್ಟಿಯಾಗಿ ಜವಾಬ್ದಾರಿ ಹೊರಬೇಕಾಗುತ್ತದೆ. 1957ರ ಮೂಲ ಡೀಡ್ʼನಲ್ಲಿಯೇ ಈ ಅಂಶವನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ.
*ಕಡಿದಾಳ್ ಮಂಜಪ್ಪ ಅವರ ನೇತೃತ್ವದ ಕೌನ್ಸಿಲ್ ಆಫ್ ಟ್ರಸ್ಟಿಗಳು ಮಾಡಿಕೊಂಡ ಈ ತಿದ್ದುಡಿಗಳನ್ನು ಅಂದಿನ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ನಾರಾಯಣ್ ಅವರ ಅಧಿಕೃತ ಒಪ್ಪಿಗೆ ಇಲ್ಲದೆಯೇ 1979ರಲ್ಲಿ ರಾಜ್ಯ ಸರಕಾರದ ಗಮನಕ್ಕೆ ತಂದು ಒಪ್ಪಿಗೆ ಪಡೆಯಲಾಗುತ್ತದೆ. ಅಷ್ಟೇ ಅಲ್ಲ; ಈ ತಿದ್ದುಪಡಿ ಮಾಡಲಾದ ನಿರ್ಣಯಗಳನ್ನು 1981 ಜೂನ್ ತಿಂಗಳಲ್ಲಿ ನೋಂದಣಿ ಮಾಡಿಸಲಾಗುತ್ತದೆ.
*ತಮ್ಮ ನಂತರ ದಾನಿ ಟ್ರಸ್ಟಿ ನೇಮಕ ಮಾಡುವ ಕುರಿತಾದ ಷರತ್ತು IV (i)ರ ತಿದ್ದುಪಡಿ ತರುವುದಕ್ಕೆ ಬಿ.ಎಸ್.ನಾರಾಯಣ್ ಅವರು ಸಹಮತ ನೀಡುವುದಿಲ್ಲ. ಉಳಿದ ಇತರೆ ತಿದ್ದುಪಡಿಗಳಿಗೆ ಬಿ.ಎಸ್.ನಾರಾಯಣ್ ಅವರ ಸಹಮತ ಮತ್ತು ಸಹಿಯೊಂದಿಗೆ ನೋಂದಣಿ ಮಾಡಿಸಲಾಗುತ್ತದೆ. ಆದ್ದರಿಂದ ಉತ್ತರಾಧಿಕಾರಕ್ಕೆ ಸಂಬಂಧಿಸಿದ ನಿಲುವು (ಷರತ್ತು iv (i)ಯೊಂದಿಗೆ ವ್ಯವಹರಿಸಿರುವುದು) ಮೂಲ ಟ್ರಸ್ಟ್ ಡೀಡ್ನಲ್ಲಿ ಇರುವಂತೆಯೇ ಉಳಿದಿದೆ. ಅಂದರೆ; ಬಿ.ಎಸ್.ನಾರಾಯಣ್ ಅವರು ಯಾವುದೇ ವಂಶಾವಳಿಯನ್ನು ಹೊಂದಿಲ್ಲದಿದ್ದರೆ, ಕರ್ನಾಟಕ ಸರಕಾರದ ಟ್ರಸ್ಟಿಯೇ ಅವರ ನಂತರ ದಾನಿ ಟ್ರಸ್ಟಿಯಾಗುತ್ತಾರೆ.
15. ಇದೆಲ್ಲ ಹೀಗಿರುವಾಗ ಟ್ರಸ್ಟಿನ ದಾನಿ ಟ್ರಸ್ಟಿಯಾಗಿದ್ದ ಬಿ.ಎಸ್.ನಾರಾಯಣ್ ಅವರು, ತಮ್ಮ ಮೊದಲ ಪತ್ನಿ ಮಿನ್ನಿ ನಾರಾಯಣ್ ಅವರಿಗೆ ವಿಚ್ಛೇಧನ ನೀಡಿ, ರಾಗಿಣಿ ನಾರಾಯಣ್ ಅವರನ್ನು ಮದುವೆಯಾಗುತ್ತಾರೆ. ರಾಗಿಣಿ ಅವರನ್ನು ಆರ್ಯ ಸಮಾಜದ ಸಂಪ್ರದಾಯದಂತೆ ಮುಂಬಯಿಯಲ್ಲಿ ಅವರು ಮದುವೆ ಮಾಡಿಕೊಳ್ಳುತ್ತಾರೆ. ಆದರೆ, ಬಿ.ಎಸ್.ನಾರಾಯಣ್-ರಾಗಿಣಿ ನಾರಾಯಣ್ ದಂಪತಿಗೂ ಸಂತಾನ ಆಗುವುದಿಲ್ಲ.
16. ಉತ್ತರಾಧಿಕಾರದ ಷರತ್ತುಗಳನ್ನು ಬದಲಾಯಿಸುವ ಎರಡನೇ ಪ್ರಯತ್ನ:
*1994 ಡಿಸೆಂಬರ್ ತಿಂಗಳಲ್ಲಿ ಪರ್ಯಾಯ ದಾನಿ ಟ್ರಸ್ಟಿಯನ್ನು ನೇಮಕ ಮಾಡುವ ಬಗ್ಗೆ 1957ರ ಮೂಲ ಟ್ರಸ್ಟ್ ಡೀಡ್ʼಗೆ ಕೆಲ ತಿದ್ದುಪಡಿ ತರಲಾಯಿತು. ಅದೇನೆಂದರೆ; ಈ ತಿದ್ದುಪಡಿ ನಿರ್ಣಯದ ಪ್ರಕಾರ ದಾನಿ ಟ್ರಸ್ಟಿ ಆಗಲು, ಬಿ.ಎಸ್.ನಾರಾಯಣ್ ಅವರ ನಂತರ ಅವರ ಹಿರಿಯ ಮೂಲ ವಂಶಸ್ಥರು ಅಥವಾ ಕುಟುಂಬ ಸದಸ್ಯರೇ ಆಗಿರಬೇಕು, ಅವರು ಬಿ.ಎಸ್.ನಾರಾಯಣ್ ಅವರಿಂದ ನೇಮಕವಾಗಿರಬೇಕು ಅಥವಾ ಅವರ ಧರ್ಮಪತ್ನಿಯೂ ಆಗಿರಬಹುದು.
ಈ ಮೇಲೆ ಅಂಗೀಕರಿಸಿದ ನಿರ್ಣಯವು 1978ರಲ್ಲಿ ಅಂಗೀಕಾರ ಮಾಡಲಾದ ತಿದ್ದುಪಡಿ ನಿರ್ಣಯಕ್ಕೆ ಸಂಪೂರ್ಣ ವಿರುದ್ಧವಾಗಿತ್ತು. 1978ರ ತಿದ್ದುಪಡಿಯ ಪ್ರಕಾರ ನಾರಾಯಣ್ ಅವರ ನಂತರ ಅವರ ಪತ್ನಿಗೆ (ಮಿನ್ನಿ ನಾರಾಯಣ್ ಅಥವಾ ರಾಗಿಣಿ ನಾರಾಯಣ್) ತಕ್ಷಣವೇ ಉತ್ತರಾಧಿಕಾರಿ ಅಧಿಕಾರವನ್ನು ನೀಡಲು ಅವಕಾಶ ಇರಲಿಲ್ಲ.
ಆದಾಗ್ಯೂ, ದಿವಂಗತ ಶ್ರೀ ವೈ.ರಾಮಚಂದ್ರ ಅವರ ನೇತೃತ್ವದ ಟ್ರಸ್ಟಿಗಳು, 1978ರ ನಿರ್ಣಯಕ್ಕೆ ರಾಜ್ಯ ಸರಕಾರವು ನೀಡಿದ ಅನುಮೋದನೆಯು 1994ರ ಈ ಹೊಸ ನಿರ್ಣಯಕ್ಕೆ ಸರಿಹೊಂದುತ್ತದೆ ಎಂದು ಭಾವಿಸಿ
30-1-1995ರಂದು ಅಂಗೀಕರಿಸಿದ ಹೊಸ ತಿದ್ದುಪಡಿಯನ್ನು ಕೂಡ ನೋಂದಾಯಿಸುತ್ತಾರೆ. ಆದರೆ, ಈ ಹೊಸ ತಿದ್ದುಪಡಿ ನಿರ್ಣಯವನ್ನು ಕೈಗೊಳ್ಳುವ ಸಭೆಯಲ್ಲಿ ರಾಜ್ಯ ಸರಕಾರವು ನಾಮನಿರ್ದೇಶನ ಮಾಡಿರುವ ಟ್ರಸ್ಟಿ ಹಾಜರು ಇರುವುದಿಲ್ಲ. ಈ ವಿಷಯವನ್ನು ಇತರೆ ಟ್ರಸ್ಟಿಗಳು ಸರಕಾರದ ಟ್ರಸ್ಟಿಯ ಗಮನಕ್ಕೂ ತಂದಿರುವುದಿಲ್ಲ. ಆದ್ದರಿಂದ ದಾನಿ ಟ್ರಸ್ಟಿ ಅಥವಾ ಉತ್ತರಾಧಿಕಾರಿ ವಿಚಾರವಾಗಿ ಷರತ್ತು IV (i)ಗೆ ತಂದ ತಿದ್ದುಪಡಿಗೆ ರಾಜ್ಯ ಸರಕಾರ ಒಪ್ಪಿಗೆ ನೀಡುವುದಿಲ್ಲ.
17. ರಾಜ್ಯ ಸರಕಾರದಿಂದ ಉತ್ತರಾಧಿಕಾರಿ ನಾಮನಿರ್ದೇಶನ:
1995ರಲ್ಲಿ ದಾನಿ ಟ್ರಸ್ಟಿಯಾದ ಬಿ.ಎಸ್.ನಾರಾಯಣ್ ಅವರು ಕೆಲವು ವಾರಗಳ ಕಾಲ ವಿದೇಶಕ್ಕೆ ತೆರಳುತ್ತಾರೆ. ಆಗ ಅವರಿಗೆ ದೊಡ್ಡ ಕರುಳಿನ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತದೆ. 19-7-1995ರಂದು ಅವರು ಬೆಂಗಳೂರಿಗೆ ವಾಪಸ್ ಬಂದು ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ವೊಕ್ಹಾರ್ಡ್ ಆಸ್ಪತ್ರೆಗೆ ದಾಖಲಾಗುತ್ತಾರೆ. ವೈದ್ಯರಾದ ಡಾ.ಎಂ.ಆರ್.ವಿಠಲ್ ಅವರು 4 ವಾರಗಳಲ್ಲಿ 3 ಸಲ ಬಿ.ಎಸ್.ನಾರಾಯಣ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಅವರ ದೇಹದಲ್ಲಿದ್ದ ಕ್ಯಾನ್ಸರ್ ಪೀಡಿತ ಭಾಗವನ್ನು ತೆಗೆದುಹಾಕಿದ್ದರು.
ಇದಾದ ಕೆಲ ದಿನಗಳಲ್ಲಿ, ಅಂದರೆ; 13-8-1995ರಂದು ಬಿ.ಎಸ್.ನಾರಾಯಣ್ ಅವರು ತಮ್ಮ ದಾನಿ ಟ್ರಸ್ಟಿ ಅಧಿಕಾರನ್ನು ಚಲಾಯಿಸಿ 1957ರ ಮೂಲ ಟ್ರಸ್ಟ್ ಡೀಡ್ʼನ ಷರತ್ತು IV (IV) ಅನ್ವಯ ತಮ್ಮ ನಂತರ, ತಮ್ಮ ಉತ್ತರಾಧಿಕಾರಿಯಾಗಿ ಮತ್ತು ದಾನಿ ಟ್ರಸ್ಟಿಯಾಗಿ ಕರ್ನಾಟಕ ಸರಕಾರವೇ ಕಾರ್ಯಭಾರ ಮಾಡಬೇಕು ಎಂದು ನಿರ್ಣಯ ತೆಗೆದುಕೊಳ್ಳುತ್ತಾರೆ. ಈ ಸದರಿ ನಿರ್ಣಯದ ಕರುಡು ಪ್ರತಿಯನ್ನು BMS ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ BMS ಎಜ್ಯುಕೇಷನಲ್ ಟ್ರಸ್ಟಿನ ಕಾನೂನು ನಿರ್ದೇಶಕ ಪ್ರೊ.ವೆಂಕಟಕೃಷ್ಣಪ್ಪ ಅವರು ತಯಾರು ಮಾಡುತ್ತಾರೆ. ಈ ದಾಖಲೆಯನ್ನೂ ನೋಂದಣಿ ಮಾಡಿಸಲಾಗುತ್ತದೆ. 23-8-1995ರಂದು ಬಿ.ಎಸ್.ನಾರಾಯಣ್ ಅವರು ನಿಧನರಾಗುವವರೆಗೂ ಈ ಕುರಿತ ಮಾಹಿತಿಯನ್ನಾಗಲಿ ಅಥವಾ ದಾಖಲೆಯನ್ನಾಗಲಿ ಟ್ರಸ್ಟ್ ನವರು ರಾಜ್ಯ ಸರಕಾರಕ್ಕೆ ನೀಡಿರುವುದಿಲ್ಲ.
18. ಬಿ.ಎಸ್.ನಾರಾಯಣ್ ಅವರ ನಿಧನದ ನಂತರ 13-8-1995ರಂದು, ಅಂದರೆ; ಬಿ.ಎಸ್.ನಾರಾಯಣ್ ಅವರು ನಿಧನರಾಗುವುದಕ್ಕೆ 10 ದಿನಗಳ ಮೊದಲು ನೋಂದಣಿಯಾಗಿದ್ದ ಮೇಲಿನ ದಾಖಲೆಯ ಮಾಹಿತಿಯನ್ನು ಟ್ರಸ್ಟಿಗಳು ರಾಜ್ಯ ಸರಕಾರಕ್ಕೆ ತಿಳಿಸಿದರು. ಈಗ ಸರಕಾರದ ನಾಮನಿರ್ದೇಶಿತ ಟ್ರಸ್ಟಿಯೇ ದಾನಿ ಟ್ರಸ್ಟಿಯಾಗಬೇಕು ಎಂದು ಹೇಳಿದರು. 7-11-1995ರಂದು ರಾಜ್ಯ ಸರಕಾರದ ನಾಮನಿರ್ದೇಶಿತ ಟ್ರಸ್ಟಿಯು ಈ ಟ್ರಸ್ಟಿನ ದಾನಿ ಟ್ರಸ್ಟಿಯಾಗಿ ಅಧಿಕಾರ ವಹಿಸಿಕೊಂಡರು. ಅಂದಿನ ರಾಜ್ಯ ಸರಕಾರದಲ್ಲಿ ಗ್ರಾಮೀಣ ಇಲಾಖೆಯ ಕಾರ್ಯದರ್ಶಿ ಆಗಿದ್ದ ಹಿರಿಯ ಐಎಎಸ್ ಅಧಿಕಾರಿ ಶ್ರೀ ಎಂ.ಆರ್.ಶ್ರೀನಿವಾಸ ಮೂರ್ತಿ ಅವರು ಆಡಳಿತ ಮಂಡಳಿಯ ಜವಾಬ್ದಾರಿ ವಹಿಸಿಕೊಂಡರು.
19. ಆಡಳಿತ ಮಂಡಳಿಯನ್ನು ನೇಮಕ ಮಾಡಿದ ರಾಜ್ಯ ಹೈಕೋರ್ಟ್:
1999 ಅಗಸ್ಟ್ ನಲ್ಲಿ ರಾಗಿಣಿ ನಾರಾಯಣ್ ಅವರು BMS ಎಜ್ಯುಕೇಷನಲ್ ಟ್ರಸ್ಟಿನಲ್ಲಿ ಅಧಿಕಾರ ಸ್ಥಾಪಿಸಲು ರಾಜ್ಯ ಹೈಕೋರ್ಟ್ ನಲ್ಲಿ ವ್ಯಾಜ್ಯ ಹೂಡುತ್ತಾರೆ. ಉಚ್ಛ ನ್ಯಾಯಾಲಯವು 1999ರ ಅಗಸ್ಟ್ ತಿಂಗಳಲ್ಲಿ ಒಂದು ಆದೇಶ ನೀಡಿ; ಸಿವಿಲ್ ನ್ಯಾಯಾಲಯದಲ್ಲಿ ತಮ್ಮ ಹಕ್ಕನ್ನು ಸಾಬೀತುಪಡಿಸಲು ಸಿವಿಲ್ ಮೊಕದ್ದಮೆಯನ್ನು ಸಲ್ಲಿಸಬೇಕು ಎಂದು ಆದೇಶಿಸಿತು, ಮತ್ತೂ ಸದರಿ ಪ್ರಕರಣವನ್ನು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ಹೊಸ ಆಡಳಿತ ಮಂಡಳಿಯೇ ಟ್ರಸ್ಟ್ನ ಸಮಸ್ತ ವ್ಯವಹಾರಗಳನ್ನು ನಿರ್ವಹಿಸಬೇಕು ಎಂದು ತಿಳಿಸಿತು.
ಹೈಕೋರ್ಟಿನಿಂದ ನೇಮಿಸಲ್ಪಟ್ಟ ಆಡಳಿತ ಮಂಡಳಿಯಲ್ಲಿ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಜಸ್ಟೀಸ್ ಸಿ.ಎನ್.ಅಶ್ವತ್ಥನಾರಾಯಣ ರಾವ್, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ.ಎಚ್.ನರಸಿಂಹಯ್ಯ, ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಆರ್.ಶ್ರೀನಿವಾಸ ಮೂರ್ತಿ ಸೇರಿದಂತೆ ರಾಜ್ಯ ಸರಕಾರದ ಇಬ್ಬರು ಅಧಿಕಾರಿಗಳು ಮತ್ತು ಸ್ವತಃ ರಾಗಿಣಿ ನಾರಾಯಣ್ ಅವರೂ ಟ್ರಸ್ಟಿನಲ್ಲಿ ಇದ್ದರು.
20. ರಾಜ್ಯ ಹೈಕೋರ್ಟ್ ನೇಮಕ ಮಾಡಿದ್ದ ಆಡಳಿತ ಮಂಡಳಿಯೂ 10 ವರ್ಷಗಳ ಕಾಲ ಅತ್ಯುತ್ತಮವಾಗಿ ಕೆಲಸ ಮಾಡಿತು. ಅಂದರೆ; 2009 ಜುಲೈವರೆಗೂ BMS ಎಜ್ಯುಕೇಷನಲ್ ಟ್ರಸ್ಟ್ ನಿರ್ವಹಣೆಯನ್ನು ಸುಸೂತ್ರವಾಗಿ ನಡೆಸಿತು.
ಈ ಅವಧಿಯಲ್ಲಿ ಟ್ರಸ್ಟಿನ ಎಲ್ಲ ಶಿಕ್ಷಣ ಸಂಸ್ಥೆಗಳು ಶಿಸ್ತುಬದ್ಧವಾಗಿ ನಡೆದವು. ಆರ್ಥಿಕವಾಗಿಯೂ ಉತ್ತಮ ಬೆಳವಣಿಗೆ ಆಯಿತು. ಮೂಲಸೌಕರ್ಯಗಳ ನಿರ್ಮಾಣದಲ್ಲಿ ದೊಡ್ಡ ಬದಲಾವಣೆಗಳು, ಸಾಧನೆಗಳು ಆದವು. ಹಾಗೆಯೇ, ಬೆಂಗಳೂರಿನ ಯಲಹಂಕದಲ್ಲಿ ಹೊಸ BMS ಎಂಜಿನಿಯರಿಂಗ್ ಕಾಲೇಜ್ ಅನ್ನೂ ಸ್ಥಾಪನೆ ಮಾಡಲಾಯಿತು.
ಇದೇ ಆಡಳಿತ ಮಂಡಳಿಯು ಹೊಸ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಚಿಕ್ಕಜಾಲದ ಸಮೀಪ 5 ಎಕರೆ ಭೂಮಿಯನ್ನು ಸರಕಾರದಿಂದ ಪಡೆದುಕೊಂಡು ನೂತನ ಕಾನೂನು ಶಿಕ್ಷಣ ಸಂಸ್ಥೆಯನ್ನೂ ಸ್ಥಾಪನೆ ಮಾಡಿತು. ಯಾವುದೇ ರೀತಿಯಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ವಂತಿಗೆಯನ್ನು ಪಡೆಯದೇ ಸರಕಾರದಿಂದ ನಿಗದಿ ಮಾಡಿದ ಶುಲ್ಕವನ್ನಷ್ಟೇ ಪಡೆದು ಶ್ರೀ ಶ್ರೀನಿವಾಸಯ್ಯನವರ ಸೇವಾ ತತ್ಪರತೆಯನ್ನು ಅಕ್ಷರಶಃ ಪಾಲಿಸಿತು. 1995ರಲ್ಲಿ ಸರಕಾರದಿಂದ ದಾನಿ ಟ್ರಸ್ಟಿಯು ಟ್ರಸ್ಟಿನ ಜವಾಬ್ದಾರಿ ವಹಿಸಿಕೊಂಡಾಗ ಟ್ರಸ್ಟಿನ ಬ್ಯಾಂಕ್ ಖಾತೆಯಲ್ಲಿ 92 ಲಕ್ಷ ರೂಪಾಯಿ ಇತ್ತು. ಅದೇ, ಹೈಕೋರ್ಟ್ ನೇಮಕ ಮಾಡಿದ ಆಡಳಿತ ಮಂಡಳಿಯು 2009ರ ಹೊತ್ತಿಗೆ ಟ್ರಸ್ಟಿನ ಬ್ಯಾಂಕ್ ಖಾತೆಗೆ 60 ಕೋಟಿ ರೂ.ಗಳನ್ನು ಜಮೆ ಮಾಡಿತ್ತು!
21. ಸರಕಾರದ ವಿರುದ್ಧ ಆದೇಶ ನೀಡಿದ ನ್ಯಾಯಾಲಯ:
2007 ಜುಲೈ ತಿಂಗಳಿನಲ್ಲಿ ರಾಜ್ಯ ಸರಕಾರದ ವಿರುದ್ಧ ಆದೇಶ ನೀಡಿದ ಸಿವಿಲ್ ನ್ಯಾಯಾಲಯವು, ರಾಗಿಣಿ ನಾರಾಯಣ್ ಅವರನ್ನೇ BMS ಎಜ್ಯುಕೇಷನಲ್ ಟ್ರಸ್ಟಿನ ದಾನಿ ಟ್ರಸ್ಟಿ ಎಂದು ತೀರ್ಪು ನೀಡಿತು. ನಂತರ, ನಿರ್ಣಯವು ರಾಜ್ಯ ಸರಕಾರದ ಅನುಮೋದನೆಯನ್ನು ಹೊಂದಿಲ್ಲದಿದ್ದರೂ ಸಹ 1994ರ ಟ್ರಸ್ಟ್ ಡೀಡ್ನ ತಿದ್ದುಪಡಿ ಮಾನ್ಯವಾಗಿದೆ ಎಂದು ಕರ್ನಾಟಕದ ಉಚ್ಚ ನ್ಯಾಯಾಲಯವು ತೀರ್ಪು ನೀಡಿತು..
22. ಈ ಎಲ್ಲಾ ಕಾನೂನು ಸಮರ ಮತ್ತು ತೀರ್ಪಿನ ಹಿನ್ನೆಲೆಯಲ್ಲಿ ಶ್ರೀಮತಿ ರಾಗಿಣಿ ನಾರಾಯಣ್ ಅವರು ದಾನಿ ಟ್ರಸ್ಟಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಅಲ್ಲದೆ, ರಿಯಲ್ ಎಸ್ಟೇಟ್ ಉದ್ಯಮಿ ಶ್ರೀ ದಯಾನಂದ ಪೈ ಅವರನ್ನು ಟ್ರಸ್ಟಿಯಾಗಿ ಸೇರಿಸಿಕೊಳ್ಳುತ್ತಾರೆ.
ಟ್ರಸ್ಟಿನಲ್ಲಿರುವ ಅನೇಕರು ಶ್ರೀ ದಯಾನಂದ ಪೈ ಅವರನ್ನು ಟ್ರಸ್ಟ್ನಲ್ಲಿ ನಿಜವಾದ ಶಕ್ತಿ, ಅಧಿಕಾರದ ಕೇಂದ್ರಬಿಂದು ಎಂದು ಪರಿಗಣಿಸುತ್ತಾರೆ. ಅಷ್ಟೇ ಅಲ್ಲ, ದಯಾನಂದ ಪೈ ಅವರು ರಾಗಿಣಿ ನಾರಾಯಣ್ ಅವರಿಂದ BMS ಟ್ರಸ್ಟ್ʼನ ಆಸ್ತಿಗಳನ್ನು ನಿಖರವಲ್ಲದ ಬೃಹತ್ ಮೊತ್ತಕ್ಕೆ ಖರೀದಿ ಮಾಡಿದ್ದಾರೆಂಬ ವದಂತಿಗಳೂ ಹರಿದಾಡಿದವು.
ಇದೇ ವೇಳೆ ಶ್ರೀಮತಿ ರಾಗಿಣಿ ನಾರಾಯಣ್ ಅವರು ಹಿರಿಯ ವಕೀಲ, ಕರ್ನಾಟಕ ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ಶ್ರೀ ಬಿ.ವಿ.ಆಚಾರ್ಯ ಅವರನ್ನು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ವಿ.ಕೆ.ಗೋರೆ ಅವರನ್ನು BMS ಎಜುಕೇಶನಲ್ ಟ್ರಸ್ಟಿನ ಟ್ರಸ್ಟಿಗಳನ್ನಾಗಿ ನೇಮಕ ಮಾಡಿಕೊಳ್ಳುತ್ತಾರೆ!
23. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಕರಣ:
ಇದೇ ಸಂದರ್ಭದಲ್ಲಿ ರಾಜ್ಯ ಸರಕಾರವು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವಿಶೇಷ ರಜಾ ಕಾಲದ ಅರ್ಜಿಯನ್ನು (SLP) ಸಲ್ಲಿಸುತ್ತದೆ. 2010 ಅಗಸ್ಟ್ ತಿಂಗಳಲ್ಲಿ ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕಾರ ಮಾಡುವ ಸುಪ್ರೀಂ ಕೋರ್ಟ್, ಪ್ರಾಥಮಿಕ ವಿಚಾರಣೆಯನ್ನೂ ನಡೆಸುತ್ತದೆ. ಕೇಸಿನ ವಿಚಾರಣೆ ನಡೆಸಿದ ನಂತರ ಸರ್ವೋಚ್ಛ ನ್ಯಾಯಾಲಯವು 2016 ಸೆಪ್ಟೆಂಬರ್ 16ರಂದು ತೀರ್ಪು ನೀಡಿ, ಈ ಹಿಂದೆ ಕರ್ನಾಟಕದ ಹೈಕೋರ್ಟ್ ನೀಡಿದ್ದ ತೀರ್ಪನ್ನೇ ಎತ್ತಿ ಹಿಡಿಯುತ್ತದೆ.
24. ಟ್ರಸ್ಟ್ ಡೀಡ್ʼಗೆ ತಿದ್ದುಪಡಿ ಪ್ರಸ್ತಾವನೆ:
10-3-2018ರಂದು ಟ್ರಸ್ಟಿಗಳೆಲ್ಲರೂ ಸೇರಿ ಒಂದು ಸಭೆ ನಡೆಸುತ್ತಾರೆ. ಆ ಸಭೆಯಲ್ಲಿ ಒಂದು ನಿರ್ಣಯವನ್ನು ಅಂಗೀಕಾರ ಮಾಡಿ, BMS ಎಜ್ಯುಕೇಷನಲ್ ಟ್ರಸ್ಟ್ ಡೀಡ್ʼನಲ್ಲಿ ಈ ಕೆಳಕಂಡ ಮೂಲಭೂತ ತಿದ್ದುಪಡಿಗಳನ್ನು ಮಾಡಲು ಹೊರಡುತ್ತಾರೆ.
* ದಾನಿ ಟ್ರಸ್ಟಿಯು ತನ್ನ ಜೀವನದುದ್ದಕ್ಕೂ ಟ್ರಸ್ಟ್ನ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.
*ದಾನಿ ಟ್ರಸ್ಟಿಯು ತನ್ನ ಕುಟುಂಬದ ಯಾವುದೇ ಸದಸ್ಯರನ್ನು ದಾನಿ ಟ್ರಸ್ಟಿಯಾಗಿ ತನ್ನ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಬಹುದು.
*ದಾನಿ ಟ್ರಸ್ಟಿಯು ಯಾರನ್ನಾದರೂ ಅಜೀವ ಟ್ರಸ್ಟಿಯನ್ನಾಗಿ ನೇಮಿಸಬಹುದು, ಹಾಗೆ ನೇಮಕವಾದವರೂ ತನ್ನ ಉತ್ತರಾಧಿಕಾರಿಯನ್ನೂ ನೇಮಿಸಬಹುದು;
ಮತ್ತೂ,
*ದಾನಿ ಟ್ರಸ್ಟಿಗಳ ಕುಟುಂಬಕ್ಕೆ ಯಾರೇ ವಂಶಸ್ಥರಿಲ್ಲದಿದ್ದಲ್ಲಿ ದಾನಿ ಟ್ರಸ್ಟಿಯ ಸ್ಥಾನದ ಜವಾಬ್ದಾರಿಯನ್ನು ನಿರ್ವಹಿಸುವ ಹಾಗೂ ಟ್ರಸ್ಟಿಗಳನ್ನು ನೇಮಕ ಮಾಡುವ ಕರ್ನಾಟಕ ಸರಕಾರದ ಅಧಿಕಾರವನ್ನು ತೆಗೆದುಹಾಕಲಾಗುತ್ತದೆ.
25. ಮೇಲ್ಕಂಡ ಹಾಗೆ 10-3-2018 ರಂದು ಟ್ರಸ್ಟಿಗಳೆಲ್ಲರೂ ಸೇರಿ ಕೈಗೊಂಡ ಈ ನಿರ್ಣಯವು ರಾಜ್ಯ ಸರಕಾರದ ನಾಮನಿರ್ದೇಶಿತ ಟ್ರಸ್ಟಿಯ ಅನುಪಸ್ಥಿತಿಯಲ್ಲಿ ಕೈಗೊಳ್ಳಲಾಗಿರುತ್ತದೆ.
ಅಷ್ಟೇ ಅಲ್ಲ; ಸರಕಾರದ ನಾಮನಿರ್ದೇಶಿತ ಟ್ರಸ್ಟಿಗೆ ಈ ಬಗ್ಗೆ ಪೂರ್ವಸೂಚನೆ ಅಥವಾ ಮಾಹಿತಿ ನೀಡಿರುವುದಿಲ್ಲ.
ಟ್ಟಸ್ಟಿನಲ್ಲಿ ಕೈಗೊಳ್ಳಲಾದ ಎಲ್ಲ ನಿರ್ಣಯಗಳಿಗೆ ಅಂದಿನ ರಾಜ್ಯ ಸರಕಾರದ ಒಪ್ಪಿಗೆ ಕೋರಲಾಗುತ್ತದೆ. ಆಗ ರಾಜ್ಯ ಸರಕಾರ BMS ಎಜ್ಯುಕೇಷನಲ್ ಟ್ರಸ್ಟ್, ಮತ್ತದರ ಶಿಕ್ಷಣ ಸಂಸ್ಥೆಗಳ ಇತಿಹಾಸವನ್ನು ಅವಲೋಕನ ಮಾಡುತ್ತದೆ ಹಾಗೂ ಈ ಕುರಿತ ಕಾನೂನಾತ್ಮಕ ಅಂಶಗಳನ್ನು ಪರಿಶೀಲನೆ ಮಾಡಿ ರಾಜ್ಯದ ಅಡ್ವೋಕೇಟ್ ಜನರಲ್ ಅವರ ಸಲಹೆಯನ್ನೂ ಪಡೆದುಕೊಳ್ಳುತ್ತದೆ. ಎಲ್ಲ ಆಯಾಮಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ
1-1-2019ರಂದು ಟ್ರಸ್ಟು 10-3-2018ರಂದು ಕೈಗೊಂಡಿದ್ದ ನಿರ್ಣಯಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತದೆ.
26. ಟ್ರಸ್ಟಿನ ನಿರ್ಣಯಗಳನ್ನು ರಾಜ್ಯ ಸರಕಾರ ತಿರಸ್ಕರಿಸಲು ಕಾರಣಗಳು ಹೀಗಿವೆ:
* BMS ಎಜ್ಯುಕೇಷನಲ್ ಟ್ರಸ್ಟ್ ಅನ್ನು ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಸ್ಥಾಪನೆ ಮಾಡಲಾಗಿರುತ್ತದೆ.
*ಹೊಸ ತಿದ್ದುಪಡಿ ನಿರ್ಣಯಗಳು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿವೆ ಹಾಗೂ ಅವು ನಿಖರವಾಗಿ ಇಲ್ಲ.
*ಈ ತಿದ್ದುಪಡಿಗಳ ಮೂಲಕ ಟ್ರಸ್ಟು ಕುರಿತಾದ ರಾಜ್ಯ ಸರಕಾರದ ಆಡಳಿತಾತ್ಮಕ ಹೊಣೆಯನ್ನು, ಜವಾಬ್ದಾರಿಯನ್ನು ವಿಫಲಗೊಳಿಸುವ ಉದ್ದೇಶವನ್ನು ಟ್ರಸ್ಟಿನ ಆಡಳಿತ ಮಂಡಳಿ ಹೊಂದಿರುವಂತೆ ಕಂಡು ಬಂದಿರುತ್ತದೆ.
27. ಟ್ರಸ್ಟ್ ಡೀಡ್ ತಿದ್ದುಪಡಿಗೆ ಮತ್ತೊಮ್ಮೆ ಪ್ರಸ್ತಾವನೆ:
10-3+2018ರಂದು BMS ಎಜ್ಯುಕೇಷನಲ್ ಟ್ರಸ್ಟ್ ಕೈಗೊಂಡ ನಿರ್ಣಯಗಳನ್ನು ರಾಜ್ಯ ಸರಕಾರ ತಿರಸ್ಕರಿಸಿದ ನಂತರ ಶ್ರೀಮತಿ ರಾಗಿಣಿ ನಾರಾಯಣ್ ಅವರ ನೇತೃತ್ವದಲ್ಲಿ ಸದರಿ ಟ್ರಸ್ಟು 10-6-2019 ರಂದು ಮತ್ತೊಮ್ಮೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಮತ್ತೆ ಕೆಲ ತಿದ್ದುಪಡಿಗಳಿಗೆ ಒಪ್ಪಿಗೆ ಕೋರಿತು. ಈ ಕುರಿತು 7-10-2019 ರಂದು ನಡೆದ ಟ್ರಸ್ಟಿನ ಸಭೆಯಲ್ಲಿ ತಿದ್ದುಪಡಿಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಗಿಣಿ ನಾರಾಯಣ್ ಅವರು ತಿಳಿಸಿದ್ದರು.
ಆ ಮನವಿಯಲ್ಲಿ ಸೂಚಿಸಲಾಗಿದ್ದ ತಿದ್ದುಪಡಿ ಅಂಶ ಹೀಗಿತ್ತು:
ದಾನಿ ಟ್ರಸ್ಟಿಯು ಅಜೀವ ಟ್ರಸ್ಟಿಯನ್ನು ನೇಮಿಸಿಕೊಳ್ಳುವ ಅಧಿಕಾರ ಹೊಂದಿರುತ್ತಾನೆ ಮತ್ತು ತನ್ನ ಉತ್ತರಾಧಿಕಾರಿಯನ್ನು ನೇಮಿಸಿಕೊಳ್ಳಲು ಅಜೀವ ಟ್ರಸ್ಟಿಗೆ ಅಧಿಕಾರ ನೀಡುತ್ತಾನೆ. 28. 7-6-2019 ರಂದು ನಡೆಸಿದ್ದ ಟ್ರಸ್ಟ್ ಸಭೆಯಲ್ಲಿ ಈ ತಿದ್ದುಪಡಿ ನಿರ್ಣಯವನ್ನು ಕೈಗೊಳ್ಳಲಾಗಿತ್ತು.
5-7-2019ರಂದು ರಾಗಿಣಿ ನಾರಾಯಣ್ ಅವರು ರಿಯಲ್ ಎಸ್ಟೇಟ್ ಉದ್ಯಮಿ ದಯಾನಂದ ಪೈ ಅವರನ್ನು BMS ಎಜ್ಯುಕೇಷನಲ್ ಟ್ರಸ್ಟ್ ಅಜೀವ ಟ್ರಸ್ಟಿಯನ್ನಾಗಿ ನೇಮಕ ಮಾಡುವ ಸಂಬಂಧ ಪತ್ರ ಬರೆದಿದ್ದರು. ಅದಕ್ಕೆ ಪೂರಕವಾಗಿ ಮೇಲ್ಕಂಡ ದಿನಾಂಕದಂದು ಟ್ರಸ್ಟಿನ ಸಭೆಯಲ್ಲಿ ತಿದ್ದುಪಡಿ ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಣಯವು ಟ್ರಸ್ಟಿನಲ್ಲಿ ಬಹುಮತದೊಂದಿಗೆ ಕೈಗೊಳ್ಳಲಾಗಿದೆ ಎಂದು ತೋರುವಂತಿದೆ.
ವಿಪರ್ಯಾಸವೆಂದರೆ; ಸಭೆಯಲ್ಲಿ ಹಾಜರಿದ್ದ ಸರಕಾರದ ನಾಮನಿರ್ದೇಶಿತ ಟ್ರಸ್ಟಿ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಡಾ.ಎನ್.ಮಂಜುಳಾ ಅವರ ಅಭಿಪ್ರಾಯವನ್ನು ಟ್ರಸ್ಟಿಗಳು ಪರಿಗಣನೆಗೇ ತೆಗೆದುಕೊಳ್ಳಲಾಗಿಲ್ಲ.
ಈ ಬೆಳವಣಿಗೆ ನಡೆದ ಮೇಲೆ ಸರಕಾರದ ನಾಮನಿರ್ದೇಶಿತ ಟ್ರಸ್ಟಿ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಡಾ.ಎನ್.ಮಂಜುಳಾ ಅವರು 16-7-2019ರಂದು ರಾಜ್ಯ ಸರಕಾರಕ್ಕೆ ವಿವರವಾದ ಪತ್ರವನ್ನು ಬರೆಯುತ್ತಾರೆ.
“ಈ ತಿದ್ದುಪಡಿ ನಿರ್ಣಯವು ಟ್ರಸ್ಟ್ನ ಸಾರ್ವಜನಿಕ ಹಿತಾಸಕ್ತಿಯನ್ನು ರಕ್ಷಿಸಲು ರಾಜ್ಯ ಸರ್ಕಾರವು ತೆಗೆದುಕೊಂಡ ನಿಲುವಿಗೆ ವಿರುದ್ಧವಾಗಿದೆ” ಎಂದು ಅವರು ದೂರಿದ್ದಾರೆ.
ಅಷ್ಟೇ ಮಾತ್ರವಲ್ಲ, ಈ ತಿದ್ದುಪಡಿಯ ಇನ್ನೊಂದು ಅಪಾಯವನ್ನು ಡಾ.ಮಂಜುಳಾ ಅವರು ತಮ್ಮ ಪತ್ರದಲ್ಲಿ ಬೊಟ್ಟು ಮಾಡಿ ತೋರಿಸಿದ್ದಾರೆ. ಅದೇನೆಂದರೆ; ಶ್ರೀ ದಯಾನಂದ ಪೈ ಅವರು ಇಡೀ ಟ್ರಸ್ಟ್ ಅನ್ನು ಸ್ವಾಧೀನಪಡಿಸಿಕೊಳ್ಳಲು ರಾಗಿಣಿ ನಾರಾಯಣ್ ಅವರು ನಡೆಸುತ್ತಿರುವ ಪ್ರಯತ್ನದ ಸ್ಪಷ್ಟ ಕುರುಹಾಗಿ ಈ ನಿರ್ಣಯವು ಗೋಚರಿಸುತ್ತಿದೆ ಎಂದು ಅವರು ಬರೆದಿದ್ದಾರೆ.
ಇದಲ್ಲದೆ; ರಾಗಿಣಿ ನಾರಾಯಣ್ ಅವರು ತಮ್ಮ ಸೋದರಳಿಯನನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಟ್ರಸ್ಟಿ ಸ್ಥಾನಕ್ಕೆ ನೇಮಿಸಿದ ಕಾನೂನುಬದ್ಧತೆಯನ್ನು ಕೂಡ ಪರಿಶೀಲಿಸುವಂತೆ ಆಯುಕ್ತರು ಸರಕಾರಕ್ಕೆ ಪತ್ರದಲ್ಲಿ ಮನವಿ ಮಾಡಿದ್ದರು.
29. ಇವೆಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ತೀವ್ರ ಒತ್ತಡಕ್ಕೆ ಒಳಗಾಗಿತ್ತು. ಸಾರ್ವಜನಿಕ ಉದ್ದೇಶಕ್ಕೆ ವಿರುದ್ಧವಾದ ಈ ತಿದ್ದುಪಡಿ ನಿರ್ಣಯಗಳಿಗೆ ಒಪ್ಪಿಗೆ ಕೋಡುವ ಬಗ್ಗೆಯೂ ಸರಕಾರದ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ ಎಂಬುದು ಕೂಡ ನನಗೆ ಗೊತ್ತಿದೆ.
ಕೆಲ ಪಟ್ಟಭದ್ರ ಹಿತಾಸಕ್ತಿಗಳು BMS ಎಜ್ಯುಕೇಷನಲ್ ಟ್ರಸ್ಟ್ ಅನ್ನು ಹೊಡೆದುಕೊಳ್ಳಲು ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗಿತ್ತು. ಇಂಥ ಅಕ್ರಮ ತಿದ್ದುಪಡಿಗಳಿಗೆ ಒಪ್ಪಿಗೆ ಕೋರಿ ಬರೆಯಲಾಗಿದ್ದ ಪತ್ರ (ED 128 TEC 2018 Dated 31-3-2021) ಹೆಚ್ಚೂಕಡಿಮೆ ಎರಡು ವರ್ಷಗಳಿಂದ ಸರಕಾರದ ಬಳಿ ಹಾಗೆಯೇ ಬಿದ್ದಿತ್ತು.
30. ರಾಜ್ಯ ಸರಕಾರದ ಮಟ್ಟದಲ್ಲಿ ಅಕ್ರಮ ತಿದ್ದುಪಡಿಗಳ ಪತ್ರ ಬಾಕಿ ಬಿದ್ದಿರುವಾಗಲೇ ಉದ್ಯಮಿ ಶ್ರೀ ದಯಾನಂದ ಪೈ ಅವರು ಇನ್ನೊಂದು ವಿಪರೀತ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಅವರು ತಮ್ಮ ಪುತ್ರ ರವೀಂದ್ರ ಪೈ ಅವರನ್ನು BMS ಎಜ್ಯುಕೇಷನಲ್ ಟ್ರಸ್ಟ್ನ ಅಜೀವ ಟ್ರಸ್ಟಿ ಸ್ಥಾನಕ್ಕೆ ತಮ್ಮ ಉತ್ತರಾಧಿಕಾರಿಯಾಗಿ ನೋಂದಾಯಿತ ನಾಮನಿರ್ದೇಶನ ಪತ್ರದ ಮೂಲಕ ನೇಮಿಸುವ ಹಂತಕ್ಕೆ ಹೋಗಿದ್ದಾರೆ.
ಅಷ್ಟೇ ಅಲ್ಲ; ಶ್ರೀಮತಿ ರಾಗಿಣಿ ನಾರಾಯಣ್ ಮತ್ತು ದಯಾನಂದ ಪೈ ಇಬ್ಬರೂ BMS ಎಂಜಿನಿಯರಿಂಗ್ ಕಾಲೇಜು, BMS ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ BMS ವಾಸ್ತುಶಿಲ್ಪ ಕಾಲೇಜು ಸೇರಿ ಇತರೆ ಎಲ್ಲ ಶಿಕ್ಷಣ ಸಂಸ್ಥೆಗಳ ಮ್ಯಾನೇಜ್ʼಮೆಂಟ್ ಕೋಟಾದ ಸೀಟುಗಳನ್ನು 50:50 ಅನುಪಾತದಲ್ಲಿ ಹಂಚಿಕೊಳ್ಳಲು ಒಂದು ಲಿಖಿತ ಒಪ್ಪಂದ ಮಾಡಿಕೊಂಡಿದ್ದಾರೆ!!
31. BMS ಎಜುಕೇಶನಲ್ ಟ್ರಸ್ಟ್’ ಮೇಲೆ ರಿಯಲ್ ಎಸ್ಟೇಟ್ ಕುಳಗಳ ಕಣ್ಣು ಬಿದ್ದಿರುವುದು ಕಳವಳಕಾರಿ. ಇದು ಸಾರ್ವಜನಿಕ ಟ್ರಸ್ಟ್ ಆಗಿದ್ದು, ಶಿಕ್ಷಣದ ಕಾರಣಕ್ಕಾಗಿ ಸೇವೆ ಸಲ್ಲಿಸುವ ವೈಭವಯುತ ಇತಿಹಾಸ, ಸಂಪ್ರದಾಯವನ್ನು ಹೊಂದಿರುವ ಸಂಸ್ಥೆಯಾಗಿದೆ. ಕರ್ನಾಟಕದ ಜನರಿಗೆ ಅಚ್ಚುಮೆಚ್ಚಿನ ಶೈಕ್ಷಣಿಕ ಸಂಸ್ಥೆಯಾಗಿದೆ. ಬೆಲೆ ಕಟ್ಟಲಾಗದ ಆಸ್ತಿಪಾಸ್ತಿಗಳನ್ನು ಹೊಂದಿರುವ, ಮೌಲ್ಯವನ್ನೇ ಕಟ್ಟಲಾಗದ ಪರಂಪರೆಯುಳ್ಳ ಈ ಸಂಸ್ಥೆಯೊಳಕ್ಕೆ ಖಾಸಗಿ ಹಿತಾಸಕ್ತಿಗಳ ಪ್ರವೇಶಕ್ಕೆ, ಅದರಲ್ಲೂ ಲಾಭಕೋರ ಮನಃಸ್ಥಿತಿಯ ರಿಯಲ್ ಎಸ್ಟೇಟ್ ಕುಳಗಳನ್ನು ಬಿಡಲೇಬಾರದು.
32. 1968ರಿಂದ ಈವರೆಗೆ ಬಿಎಂಎಸ್ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ತನ್ನ ಖಜಾನೆಯಿಂದ 80 ಕೋಟಿ ರೂ.ಗಳಿಗೂ ಹೆಚ್ಚು ಜನರ ತೆರಿಗೆ ಹಣವನ್ನು ನೀಡಿದೆ. ಅಷ್ಟೇ ಅಲ್ಲ; BMS ಎಂಜಿನಿಯರಿಂಗ್ ಕಾಲೇಜ್ ಸ್ಥಾಪನೆಗಾಗಿ ಹೆಚ್ಚುವರಿ ಅನುದಾನವನ್ನೂ ನೀಡಿದೆ.
33. ಬೆಂಗಳೂರು ಮಹಾನಗರದ ಹೃದಯಭಾಗದಲ್ಲಿರುವ 35,450 ಚದರ ಅಡಿಯಷ್ಟು ಅತ್ಯಂತ ಬೆಲೆ ಬಾಳುವ ಭೂಮಿಯನ್ನು ಬಿಎಂಎಸ್ ಮಹಿಳಾ ಕಾಲೇಜಿಗಾಗಿ ನೀಡಲಾಗಿದೆ. ಅಲ್ಲೇ ಸಮೀಪದಲ್ಲಿ ಕಾನೂನು ಕಾಲೇಜು ಕಟ್ಟಲು 24,000 ಚದರ ಅಡಿ ಜಾಗವನ್ನು ಸರಕಾರ ಮಂಜೂರು ಮಾಡಿದೆ. ಆದರೆ, ಇವೆರಡೂ ಜಾಗಗಳು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಶ್ರೀ ಕಾರಂಜಿ ಆಂಜನೇಯಸ್ವಾಮಿ ದೇವಾಲಯಕ್ಕೆ ಸೇರಿದ್ದಾಗಿವೆ.
34. ಅದೇ ರೀತಿ ಬಸವಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ, ಮುಜರಾಯಿ ಇಲಾಖೆಗೆ ಸೇರಿರುವ ದೊಡ್ಡ ಬಸವಣ್ಣ ದೇಗುಲದ ಆಸ್ತಿಯಾಗಿರುವ 40,000 ಚದರ ಅಡಿ ಬೆಲೆ ಬಾಳುವ ಜಾಗವನ್ನು BMS ಎಜ್ಯುಕೇಷನಲ್ ಟ್ರಸ್ಟ್ಗೆ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರು ಮಾಡಲಾಗಿತ್ತು. ಆದರೆ, ಈ ಜಾಗವನ್ನು ಟ್ರಸ್ಟ್ ದುರುಪಯೋಗ ಮಾಡಿಕೊಂಡಿದ್ದು; ಖಾಸಗಿ ನರ್ಸಿಂಗ್ ಕಾಲೇಜ್ ಒಂದಕ್ಕೆ ಭೋಗ್ಯಕ್ಕೆ (Lease) ಕೊಟ್ಟಿದೆ.
35. ಇನ್ನು; ಹೊಸ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಚಿಕ್ಕಜಾಲದ ಬಳಿ ನೀಡಲಾಗಿರುವ 4.39 ಎಕರೆ ಪ್ರದೇಶವನ್ನು BMS ಕಾನೂನು ಕಾಲೇಜು ಕಟ್ಟಲು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನೀಡಲಾಗಿದೆ.
36. ಇಂದು BMS ಎಜ್ಯುಕೇಷನಲ್ ಟ್ರಸ್ಟ್ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಆಸ್ತಿಯೂ ಸರಕಾರಕ್ಕೇ ಸೇರಿದ್ದು. ಸೇರಲೇಬೇಕಾದ್ದು. ಆದರೆ, ಇಂದು ಅಷ್ಟೂ ಆಸ್ತಿಯನ್ನು ಖಾಸಗಿ ಸ್ವತ್ತನ್ನಾಗಿ ಪರಿವರ್ತನೆ ಮಾಡಿಕೊಳ್ಳುವ ಮಹಾ ಹುನ್ನಾರ ನಡೆದಿದೆ.