ಮಂಡ್ಯ :- ಆಟೋಮೋಟಿವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್ಎಐ) ಪರೀಕ್ಷಾ ಕೇಂದ್ರ ಸ್ಥಾಪಿಸುವ ಕುರಿತಂತೆ ಚರ್ಚಿಸಲು ಏ.13ರಂದು ವಿಧಾನಸೌಧದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಿಗಧಿಯಾಗಿದೆ
ಇತ್ತಿಚೆಗೆ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಎಆರ್ ಎಐ ಪರೀಕ್ಷಾ ಕೇಂದ್ರಕ್ಕೆ ಜಾಗ ಕೊಟ್ಟರೆ ಸಾಲದು ಅಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ ಹೀಗಾಗಿ ಅಭಿವೃದ್ಧಿಪಡಿಸಿ ಕೊಡುವಂತೆ ಜಟಾಪಟಿ ನಡೆದಿತ್ತು.
ನೀವು ಯಾವ ಯೋಜನೆಯನ್ನು ತರುತ್ತಿರಿ ಹೇಳಿ ನಿಮಗೆ ಯಾವ ಜಾಗ ಬೇಕು ಅದನ್ನು ರಾಜ್ಯ ಸರ್ಕಾರದಿಂದ ಅಭಿವೃದ್ಧಿಪಡಿಸಿ ಕೊಡುತ್ತೇನೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿಕೆ ನೀಡಿದ್ದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೊಂಡಿಯಾಗಿ ನೀವೇ ಒಂದು ಸಭೆ ಆಯೋಜಿಸಿ ಎಂದು ಸಲಹೆ ನೀಡಿದ್ದರು. ಹೀಗಾಗಿ ಸಭೆಯನ್ನು ವಿಧಾನಸೌಧದಲ್ಲೆ ಮಾಡೋಣ ಅಲ್ಲಿ ರಾಜ್ಯದ ಕೈಗಾರಿಕಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸೋಣ ಎಂದು ಹೇಳಿದ್ದರು.
ಈ ಎಲ್ಲಾ ಬೆಳವಣಿಗೆಗಳು ನಡೆದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಏ.13ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ 3ನೇ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಸಭೆ ಆಯೋಜಿಸಲಾಗಿದೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಸಹ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸರ್ಕಾರದ ಭವ್ಯ ಯೋಜನೆ-ನಿಯಮಾವಳಿಯಡಿ ಮಂಡ್ಯದಲ್ಲಿ ಎಆರ್ಎಐ ಕೇಂದ್ರ ಮತ್ತು ಕೈಗಾರಿಕಾ ಸಮೂಹಗಳ ಅಭಿವೃದ್ಧಿಗಾಗಿ ಭೂಮಿ ಹಂಚಿಕೆ ಸಂಬಂಧ ಚರ್ಚೆ ನಡೆಯಲಿದ್ದು, ಈ ಸಭೆ ಎಷ್ಟು ಯಶಸ್ವಿಯಾಗುತ್ತೋ ಎಂದು ಕಾದು ನೋಡಬೇಕಿದೆ.
ವರದಿ : ಗಿರೀಶ್ ರಾಜ್, ಮಂಡ್ಯ








