ನವದೆಹಲಿ: NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್, ದೇಶದ ‘Gen-Z’ ಮತ್ತು ಯುವಜನತೆ ಬೀದಿಗಿಳಿದು ಶಾಂತಿಯುತವಾಗಿ ಹೋರಾಡುವಂತೆ ಕರೆ ನೀಡಿದ್ದಾರೆ. “ಪ್ರಶ್ನೆ ಪತ್ರಿಕೆ ಸೋರಿಕೆ ಎಂಬುದು ಒಂದು ಅಸಹ್ಯಕರ ದಂಧೆಯಾಗಿದ್ದು, ಇದನ್ನು ಕೊನೆಗಾಣಿಸಲು ಯುವಶಕ್ತಿ ಎದ್ದೇಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.
“ಪ್ರತಿ ಬಾರಿ ಪೇಪರ್ ಲೀಕ್ ಆದಾಗಲೂ ತನಿಖೆಯನ್ನು ಸಿಬಿಐಗೆ ವಹಿಸಲಾಗುತ್ತದೆ. ಆದರೆ ಸಿಬಿಐ ಯಾರಿಗೆ ವರದಿ ನೀಡುತ್ತದೆಯೋ, ಅವರೇ ಈ ದಂಧೆಯ ಹಿಂದಿದ್ದಾರೆ. 2017 ರಿಂದ 2026 ರವರೆಗೆ ಪದೇ ಪದೇ ಪೇಪರ್ ಲೀಕ್ ಆಗುತ್ತಿದ್ದರೂ ಸಿಬಿಐ ಒಬ್ಬರಿಗೂ ಶಿಕ್ಷೆ ಕೊಡಿಸಿಲ್ಲ” ಎಂದು ಕೇಜ್ರಿವಾಲ್ ಕಿಡಿಕಾರಿದ್ದಾರೆ.
2014 ರಿಂದ ದೇಶದಲ್ಲಿ ಒಟ್ಟು 93 ಪರೀಕ್ಷೆಗಳ ಪೇಪರ್ ಸೋರಿಕೆಯಾಗಿವೆ. ಇವುಗಳಲ್ಲಿ ಹೆಚ್ಚಿನವು ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್ ಮತ್ತು ಉತ್ತರಾಖಂಡದಂತಹ ಬಿಜೆಪಿ ಆಡಳಿತದ ರಾಜ್ಯಗಳಲ್ಲೇ ನಡೆದಿವೆ. ಇದು ಕಾಕತಾಳೀಯವಲ್ಲ, ಇದರ ಹಿಂದೆ ದೊಡ್ಡ ಜಾಲವಿದೆ ಎಂದು ಅವರು ಆರೋಪಿಸಿದ್ದಾರೆ.
ಈ 93 ಪರೀಕ್ಷೆಗಳ ಅಕ್ರಮದಿಂದಾಗಿ ದೇಶದ ಸುಮಾರು 6 ಕೋಟಿ ಯುವಜನತೆಯ ಭವಿಷ್ಯ ಹಾಳಾಗಿದೆ. ಈ ದಂಧೆಯ ಹಣ ನೇರವಾಗಿ ಸರ್ಕಾರದ ಉನ್ನತ ಮಟ್ಟದ ನಾಯಕರಿಗೆ ತಲುಪುತ್ತಿದೆ ಎಂದು ಕೇಜ್ರಿವಾಲ್ ನೇರವಾಗಿ ದೂಷಿಸಿದ್ದಾರೆ.








