ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟರ್(Twitter)ನ ಹೊಸ ಮಾಲೀಕ ಎಲಾನ್ ಮಸ್ಕ್(Elon Musk) ಗುರುವಾರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ದಿವಾಳಿಯಾಗುವ ಸಾಧ್ಯತೆಯನ್ನು ಹೆಚ್ಚಿಸಿದ್ದಾರೆ. ಇದ್ರಿಂದ ಉದ್ಯೋಗಿಗಳು ಮತ್ತೊಮ್ಮೆ ಚಿಂತೆಗೀಡಾಗಿದ್ದಾರೆ.
ಕೆಲವು ದಿನಗಳಿಂದ ಟ್ವಿಟ್ಟರ್ನಿಂದ ಉದ್ಯೋಗಿಗಳು ಕಂಪನಿಯಿಂದ ಹೊರ ನಡೆಯುತ್ತಿದ್ದಾರೆ. ಇದರ ನಡುವೆಯೇ ಮಸ್ಕ್ ತನ್ನ ಉದ್ಯೋಗಿಗಳನ್ನು ಉದ್ದೇಶಿಸಿ ʻಟ್ವಿಟ್ಟರ್ ದಿವಾಳಿತನವನ್ನು ತಳ್ಳಿಹಾಕಲು ಸಾಧ್ಯವಿಲ್ಲʼ ಎಂದಿದ್ದಾರೆ ಎಂದು ಬ್ಲೂಮ್ಬರ್ಗ್ ನ್ಯೂಸ್ ವರದಿ ಮಾಡಿದೆ. ಮಸ್ಕ್ ಟ್ವಿಟ್ಟರ್ ಖರೀದಿಸಿದ ನಂತ್ರ ಅನೇಕ ಉದ್ಯೋಗಿಗಳು ಕೆಲಸ ಕೆಳೆದುಕೊಂಡಿದ್ದಾರೆ. ಹೀಗಿರುವಾಗ, ಮಸ್ಕ್ ಇನ್ನುಳಿದಿರುವ ಉದ್ಯೋಗಿಗಳನ್ನು ಚಿಂತೆಗೀಡುಮಾಡಿದ್ದಾರೆ.
ಮಸ್ಕ್ ಅವರೊಂದಿಗೆ ಟ್ವಿಟರ್ ಸ್ಪೇಸ್ಗಳ ಚಾಟ್ ಅನ್ನು ಮಾಡರೇಟ್ ಮಾಡುವ ಇಬ್ಬರು ಕಾರ್ಯನಿರ್ವಾಹಕರಾದ ಯೋಯೆಲ್ ರಾತ್ ಮತ್ತು ರಾಬಿನ್ ವೀಲರ್ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಂತ್ರ, ಗುರುವಾರ ಟ್ವಿಟರ್ನ ಮುಖ್ಯ ಭದ್ರತಾ ಅಧಿಕಾರಿ ಲಿಯಾ ಕಿಸ್ನರ್ ಅವರು ರಾಜೀನಾಮೆ ನೀಡಿದ್ದಾರೆ. ಇವರೊಂದಿಗೆ ಮುಖ್ಯ ಗೌಪ್ಯತೆ ಅಧಿಕಾರಿ ಡೇಮಿಯನ್ ಕೀರನ್ ಮತ್ತು ಮುಖ್ಯ ಅನುಸರಣೆ ಅಧಿಕಾರಿ ಮೇರಿಯಾನ್ನೆ ಫೋಗಾರ್ಟಿ ಕೂಡ ರಾಜೀನಾಮೆ ನೀಡಿದ್ದಾರೆ. ಟ್ವಿಟರ್ನ ಉನ್ನತ ಅಧಿಕಾರಿಗಳು ಒಬ್ಬೊಬ್ಬರಾಗಿಯೇ ರಾಜೀನಾಮೆ ನೀಡುತ್ತಿರುವುದರಿಂದ ಕಂಪನಿ ಸಂಕಷ್ಟಕ್ಕೆ ಸಿಲುಕಿದೆ.
ಗುರುವಾರ ಮಧ್ಯಾಹ್ನ ಟ್ವಿಟರ್ನಲ್ಲಿ ಎಲ್ಲಾ ಉದ್ಯೋಗಿಗಳೊಂದಿಗೆ ತನ್ನ ಮೊದಲ ಸಭೆಯಲ್ಲಿ, ಮುಂದಿನ ವರ್ಷ ಕಂಪನಿಯು ಶತಕೋಟಿ ಡಾಲರ್ಗಳನ್ನು ಕಳೆದುಕೊಳ್ಳಬಹುದು. ಕಂಪನಿ ದಿವಾಳಿಯಾಗಬಹುದು ಎಂದು ಮಸ್ಕ್ ಎಚ್ಚರಿಸಿದ್ದಾರೆ ಎಂದು ಮಾಹಿತಿ ವರದಿ ಮಾಡಿದೆ.