ನ್ಯೂಯಾರ್ಕ್: ಕೃತಕ ಬುದ್ಧಿಮತ್ತೆ (AI) ಜಗತ್ತಿನ ದೈತ್ಯ ಸಂಸ್ಥೆಯಾದ ಓಪನ್‌ಎಐ (OpenAI) ವಿರುದ್ಧ ಜಾಗತಿಕ ಉದ್ಯಮಿ ಎಲಾನ್ ಮಸ್ಕ್ ಹೂಡಿದ್ದ ಬಹುಕೋಟಿ ಡಾಲರ್ ಮೊತ್ತದ ಕಾನೂನು ಸಮರದಲ್ಲಿ ಅವರಿಗೆ ತೀವ್ರ ಮುಖಭಂಗವಾಗಿದೆ. ಓಪನ್‌ಎಐ ಮತ್ತು ಅದರ ಸಿಇಒ ಸ್ಯಾಮ್ ಆಲ್ಟ್‌ಮ್ಯಾನ್ ವಿರುದ್ಧ ಮಸ್ಕ್ ಹೂಡಿದ್ದ ಮೊಕದ್ದಮೆಯನ್ನು ಅಮೆರಿಕದ ನ್ಯಾಯಾಲಯದ ಜ್ಯೂರಿ (Jury) ವಜಾಗೊಳಿಸಿದೆ. ಪ್ರಕರಣ ದಾಖಲಿಸಲು ಮಸ್ಕ್ “ಅತಿಯಾದ ವಿಳಂಬ” (Waited Too Long) ಮಾಡಿದ್ದಾರೆ ಎಂದು ಜ್ಯೂರಿ ತೀರ್ಪು ನೀಡಿದೆ.
ಚಾಟ್‌ಜಿಪಿಟಿ (ChatGPT) ಸೃಷ್ಟಿಕರ್ತ ಓಪನ್‌ಎಐ ಸಂಸ್ಥೆಯು ತನ್ನ ಮೂಲ ಲಾಭೋದ್ದೇಶವಿಲ್ಲದ (Non-profit) ಸಿದ್ಧಾಂತವನ್ನು ಮರೆತು ವಾಣಿಜ್ಯೀಕರಣಗೊಂಡಿದೆ ಎಂದು ಆರೋಪಿಸಿ ಮಸ್ಕ್ ಈ ದಾವೆ ಹೂಡಿದ್ದರು.
ಓಪನ್‌ಎಐ ಸಂಸ್ಥೆಯು ಮೈಕ್ರೋಸಾಫ್ಟ್‌ನೊಂದಿಗೆ ಒಪ್ಪಂದ ಮಾಡಿಕೊಂಡು ವಾಣಿಜ್ಯ ರೂಪ ಪಡೆದಾಗ ಅಥವಾ ಆ ಬಳಿಕದ ಪ್ರಮುಖ ಬೆಳವಣಿಗೆಗಳ ಸಂದರ್ಭದಲ್ಲೇ ಮಸ್ಕ್ ನ್ಯಾಯಾಲಯದ ಮೊರೆ ಹೋಗಬೇಕಿತ್ತು. ಆದರೆ, ಸಂಸ್ಥೆಯು ಜಾಗತಿಕವಾಗಿ ಯಶಸ್ಸು ಕಂಡು ಭಾರೀ ಲಾಭ ಗಳಿಸಲು ಆರಂಭಿಸಿದ ನಂತರ ತಡವಾಗಿ ದೂರು ನೀಡಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಜ್ಯೂರಿ ಅಭಿಪ್ರಾಯಪಟ್ಟಿದೆ.
ಈ ತೀರ್ಪಿನಿಂದಾಗಿ ಓಪನ್‌ಎಐ ಸಂಸ್ಥೆಯ ಮೇಲಿದ್ದ ಅತಿ ದೊಡ್ಡ ಕಾನೂನು ತೂಗುಗತ್ತಿ ನಿವಾರಣೆಯಾದಂತಾಗಿದೆ. ಸಂಸ್ಥೆಯ ವಾಣಿಜ್ಯೀಕರಣ ಮತ್ತು ಮೈಕ್ರೋಸಾಫ್ಟ್ ಪಾಲುದಾರಿಕೆಗೆ ಈ ತೀರ್ಪು ಮತ್ತಷ್ಟು ಕಾನೂನುಬದ್ಧ ಬಲ ನೀಡಿದೆ.
ಈ ತೀರ್ಪಿನ ವಿರುದ್ಧ ಎಲಾನ್ ಮಸ್ಕ್ ಅವರು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳಿದ್ದು, ಅವರ ಒಡೆತನದ ಎಕ್ಸ್‌ಎಐ (xAI) ಮತ್ತು ಓಪನ್‌ಎಐ ನಡುವಿನ ಎಐ ತಂತ್ರಜ್ಞಾನದ ಜಿದ್ದಾಜಿದ್ದಿ ಮುಂಬರುವ ದಿನಗಳಲ್ಲಿ ಮತ್ತಷ್ಟು ರೋಚಕ ಹಂತ ತಲುಪುವ ಲಕ್ಷಣಗಳಿವೆ








