ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದು, ಅಧ್ಯಕ್ಷ ಸ್ಥಾನದ ಚುನಾವಣೆ ಈಗ ಕಾಂಗ್ರೆಸ್ಗೆ ಸವಾಲಾಗಿ ಪರಿಣಮಿಸಿದೆ.
ಕಾಂಗ್ರೆಸ್ ಪಕ್ಷವು ಆಗಸ್ಟ್ 20 ರವರೆಗೆ ಆಂತರಿಕ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಆಗಸ್ಟ್ 21 ರಿಂದ ಸೆಪ್ಟೆಂಬರ್ 20 ರ ನಡುವೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಪಕ್ಷವು ಘೋಷಿಸಿತ್ತು. ಆದರೆ, ಹಲವಾರು ಪ್ರಯತ್ನಗಳ ಹೊರತಾಗಿಯೂ ರಾಹುಲ್ ಗಾಂಧಿ ಇದುವರೆಗೆ ತಮ್ಮ ನಿಲುವನ್ನು ನಿರ್ಧರಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಚುನಾವಣಾ ಪ್ರಕ್ರಿಯೆಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಲು ಕೇಂದ್ರ ಚುನಾವಣಾ ಪ್ರಾಧಿಕಾರ ಸಂಪೂರ್ಣ ಸಿದ್ಧತೆ ನಡೆಸಿದೆ. ಪ್ರಾಧಿಕಾರದ ಅಧ್ಯಕ್ಷರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಗಾಗಿ ಕಾಯುತ್ತಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಸ್ಪರ್ಧಿಸಲು ಸಿದ್ಧರಿಲ್ಲದ ಕಾರಣ, ಮುಂದಿನ ಕಾಂಗ್ರೆಸ್ ಮುಖ್ಯಸ್ಥರು ಯಾರು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಆದರೂ ಅವರನ್ನು ಮನವೊಲಿಸುವ ಎಲ್ಲಾ ಪ್ರಯತ್ನಗಳು ಇನ್ನೂ ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ವಾಸ್ತವವಾಗಿ, ರಾಹುಲ್ ಗಾಂಧಿಯೇತರರಿಗೆ ಅಧ್ಯಕ್ಷ ಸ್ಥಾನವನ್ನು ನೀಡಲು ಬಯಸಿದ್ದಾರೆ. ಅದಕ್ಕಾಗಿಯೇ ಅವರು ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ನಾಮಪತ್ರ ಸಲ್ಲಿಸದಂತೆ ತಡೆಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ʻಸೋನಿಯಾ ಗಾಂಧಿ ಅವರು ಆರೋಗ್ಯದ ಕಾರಣದಿಂದ ಈ ಹುದ್ದೆಯನ್ನು ಅಲಂಕರಿಸಲು ಬಯಸುವುದಿಲ್ಲ ಮತ್ತು ಸೋನಿಯಾ ಬದಲಿಗೆ ಗಾಂಧಿಯೇತರರು ಈ ಹುದ್ದೆಯನ್ನು ಅಲಂಕರಿಸಬೇಕೆಂದು ರಾಹುಲ್ ಬಯಸುತ್ತಾರೆʼ ಎನ್ನಲಾಗಿದೆ.
ರಾಹುಲ್ ಮನವೊಲಿಸಲು ಕಾಂಗ್ರೆಸ್ ಪ್ರಯತ್ನಿಸಿದ್ದು, ಪ್ರಿಯಾಂಕಾ ಅವರನ್ನು ಎರಡನೇ ಆಯ್ಕೆ ಎಂದು ಪರಿಗಣಿಸಿದೆ. ಇಲ್ಲದಿದ್ದರೆ, ಪಕ್ಷದ ಒಗ್ಗಟ್ಟಿನ ದೃಷ್ಟಿಯಿಂದ ಸೋನಿಯಾ ಗಾಂಧಿ ಅವರನ್ನು 2024 ರವರೆಗೆ ಇರುವಂತೆ ಕೇಳಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಜಟಾಪಟಿ ಮುಂದುವರಿದರೆ ಅಶೋಕ್ ಗೆಹ್ಲೋಟ್, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಕುಮಾರಿ ಶೈಲಜಾ, ಮುಕುಲ್ ವಾಸ್ನಿಕ್ ಮುಂತಾದ ನಾಯಕರ ಹೆಸರನ್ನು ಪ್ರಸ್ತಾಪಿಸಬಹುದು. ತಾಂತ್ರಿಕವಾಗಿ ಭಾನುವಾರವೇ ಆರಂಭವಾಗಿರುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ಕಾಲಮಿತಿಯನ್ನು ಗಮನದಲ್ಲಿಟ್ಟುಕೊಂಡು ಗಾಂಧಿ ಕುಟುಂಬಕ್ಕೆ ಮುಂದಿನ ದಿನಗಳು ಬಹಳ ಮಹತ್ವದ್ದಾಗಿವೆ.