ದೊಡ್ಡವರಾಗಿದ್ರೂ ಕೂಡ ಕೆಲವರು ಚಿಕ್ಕ ಮಕ್ಕಳ ಹಾಗೆ ಆಡುತ್ತಾರೆ. ಅವರ ನಡೆ, ಅವರಾಡುವ ಮಾತು, ಮಾಡೋ ಕೆಲಸ ಎಲ್ಲದೂ ಚಿಕ್ಕಮಕ್ಕಳ ಹಾಗೆಯೇ ಇರುತ್ತದೆ. ಇದನ್ನು ಕಂಡ ನಾವು ಓಹ್ ಕ್ಯೂಟ್… ಕ್ಯೂಟ್ನೆಸ್ ಅನ್ನುತ್ತಾ ಅವರನ್ನು ಮನಸಾರೆ ಮೆಚ್ಚುತ್ತೇವೆ. ಆದರೆ ಇದು ಕ್ಯೂಟ್ನೆಸ್ ಅಲ್ಲ, ಒಂದು ರೋಗವಾಗಿದೆ. ದೊಡ್ಡವರಾಗಿದ್ರೂ ಕೂಡ ಕೆಲವರು ತಾವು ಬಾಲ್ಯದಲ್ಲಿ ನೋಡುತ್ತಿದ್ದ ಕಾರ್ಟೂನ್‌ಗಳು, ಆಡುತ್ತಿದ್ದ ಗೊಂಬೆಗಳನ್ನು ಇಂದಿಗೂ ಎಂಜಾಯ್ ಮಾಡುತ್ತಾ ಮಕ್ಕಳಂತೆ ವರ್ತಿಸುತ್ತಿರಬಹುದು. ಹೀಗೆ ದೊಡ್ಡವರಾದರೂ ಸಣ್ಣವರಂತೆ ವರ್ತಿಸುವುದನ್ನು ಎಲ್ಲರೂ ಕ್ಯೂಟ್ನೆಸ್ ಅನ್ನುತ್ತಾರೆ. ಆದರೆ ಇದನ್ನು ಸೈಕಾಲಜಿಯಲ್ಲಿ ಒಂದು ಸಮಸ್ಯೆಯಾಗಿ ನೋಡಲಾಗುತ್ತದೆ. ಅದುವೇ ‘ಪೀಟರ್ ಪ್ಯಾನ್ ಸಿಂಡ್ರೋಮ್’.
ಪೀಟರ್ ಪ್ಯಾನ್ ಸಿಂಡ್ರೋಮ್ ಎಂಬುದು ಒಂದು ರೀತಿಯ ಮಾನಸಿಕ ಸ್ಥಿತಿ. ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಕಂಡು ಬರುತ್ತದೆ. ಹೆಚ್ಚಿನ ಬಾರಿ ಅವರಿಗಿನ್ನೂ ಮೆಚುರಿಟಿ ಬಂದಿಲ್ಲ ಎಂದುಕೊಂಡು ಉಳಿದವರು ಸುಮ್ಮನಾಗುತ್ತಾರೆ. ಆದರೆ, ನಿಜವಾಗಿ ಅವರಿಗೆ ತಜ್ಞರಿಂದ ವಿಶೇಷ ಕಾಳಜಿ ಮತ್ತು ಗಮನದ ಅಗತ್ಯವಿರುತ್ತದೆ. ಬೆಳವಣಿಗೆಯು ಕುಂಠಿತಗೊಳ್ಳುವ ಅಥವಾ ಬೆಳವಣಿಗೆ ಸರಿಯಾಗಿ ಆಗದೇ ಅವರು ವರ್ತಿಸುವ ನಡವಳಿಕೆಯನ್ನು ವಿವರಿಸಲು ಮನಶಾಸ್ತ್ರ ತಜ್ಞ ಡಾನ್ ಕಿಲೆ ಈ ಪದವನ್ನು ರಚಿಸಿದ್ದಾರೆ. ಪೀಟರ್ ಪ್ಯಾನ್ ಸಿಂಡ್ರೋಮ್‌ಗೆ ಚಿಕಿತ್ಸೆ ನೀಡಬಹುದಾದರೂ, ಪೀಡಿತ ವ್ಯಕ್ತಿಯ ಕಡೆಯಿಂದ ಬಲವಾದ ಇಚ್ಛಾಶಕ್ತಿಯ ಅಗತ್ಯವಿರುತ್ತದೆ. ಈ ಸ್ಥಿತಿಯನ್ನು ನಿವಾರಿಸಲು ವ್ಯಕ್ತಿಯು ತಮ್ಮ ಕಂಫರ್ಟ್ ಝೋನ್‌ನಿಂದ ಹೊರ ಬರಬೇಕು. ಅವರು ಜವಾಬ್ದಾರಿ ಹೊರುವ ಮತ್ತು ಬದಲಾವಣೆಯ ಭಯವನ್ನು ಎದುರಿಸಬೇಕಾಗುತ್ತದೆಯಾಗಿದೆ.