ಡೆಹ್ರಾಡೂನ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಬುಧವಾರ ಏರ್ ಕಂಡೀಷನರ್ (ಎಸಿ) ಯಂತ್ರ ಸ್ಫೋಟಗೊಂಡು ಸಂಭವಿಸಿದ ಅಗ್ನಿ ಅವಘಡದಲ್ಲಿ 66 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ ಮತ್ತು ಇತರ 16 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯು ರಿಸ್ಪಾನಾ ಸೇತುವೆಯ ಸಮೀಪವಿರುವ ‘ಪನಾಸಿಯಾ ಆಸ್ಪತ್ರೆ’ಯಲ್ಲಿ (Panacea Hospital) ಬೆಳಿಗ್ಗೆ ಸುಮಾರು 9:35 ಕ್ಕೆ ಸಂಭವಿಸಿದ್ದು, ಮೃತರನ್ನು ವೀರಾವತಿ ಎಂದು ಗುರುತಿಸಲಾಗಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಈ ಎಸಿ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ಸಮಯದಲ್ಲಿ ಆಸ್ಪತ್ರೆಯಲ್ಲಿ 14 ರೋಗಿಗಳು ದಾಖಲಾಗಿದ್ದರು, ಅವರಲ್ಲಿ ಕನಿಷ್ಠ ನಾಲ್ಕರಿಂದ ಐದು ಜನರು ಐಸಿಯು ವಾರ್ಡ್‌ನಲ್ಲಿದ್ದರು.
ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್ ಈ ಅವಘಡಕ್ಕೆ ಕಾರಣ ಎಂದು ತಿಳಿದುಬಂದಿದೆ ಎಂದು ಅಧಿಕಾರಿಗಳು ಸೇರಿಸಿದ್ದಾರೆ.
ಜಿಲ್ಲಾಡಳಿತ, ಪೊಲೀಸ್, ಅಗ್ನಿಶಾಮಕ ದಳ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ತಂಡಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಆಸ್ಪತ್ರೆಯ ಆವರಣದೊಳಗೆ ಸಿಲುಕಿಕೊಂಡಿದ್ದ ಸುಮಾರು ಏಳು ಜನ ರೋಗಿಗಳ ಸಹಾಯಕರು, ಸಿಬ್ಬಂದಿ ಮತ್ತು ಇತರರನ್ನು ತಂಡಗಳು ರಕ್ಷಿಸಿದವು, ಹಾಗೂ ಎಲ್ಲಾ ರೋಗಿಗಳನ್ನು ಸಮೀಪದ ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದವು. ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳಿಗೆ ಸ್ಥಳಾಂತರ ಪ್ರಕ್ರಿಯೆಯಲ್ಲಿ ಮೊದಲ ಆದ್ಯತೆ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ವೀರಾವತಿ ಅವರು ವೆಂಟಿಲೇಟರ್‌ನಲ್ಲಿದ್ದರು ಮತ್ತು ಪ್ರಾಥಮಿಕ ತನಿಖೆಯ ಪ್ರಕಾರ ದಟ್ಟವಾದ ಹೊಗೆಯನ್ನು ಉಸಿರಾಡಿದ್ದರಿಂದಲೇ ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಮೂವರು ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬೆಂಕಿ ಅವಘಡದ ನಿಖರ ಕಾರಣದ ಕುರಿತು ವಿವರವಾದ ತನಿಖೆ ನಡೆಸುವಂತೆ ಜಿಲ್ಲಾಡಳಿತ ಆದೇಶಿಸಿದೆ.
”ಐಸಿಯು ಒಳಗಡೆ ದಟ್ಟವಾದ ಹೊಗೆ ಮತ್ತು ಅನಿಲ ತುಂಬಿಕೊಂಡಿದ್ದರಿಂದ, ಹಲವಾರು ರೋಗಿಗಳು ಹಾಗೂ ಕೆಲವು ಪೊಲೀಸ್ ಸಿಬ್ಬಂದಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರನ್ನು ಚಿಕಿತ್ಸೆಗಾಗಿ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ,” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SSP) ಪ್ರಮೇಂದ್ರ ದೋಭಾಲ್ ತಿಳಿಸಿದ್ದಾರೆ.








