ಬೆಂಗಳೂರು : 2024-25ನೇ ಸಾಲಿನಲ್ಲಿ “ಶಾಲಾ ಮಿಂಚಿನ ಸಂಚಾರ/ಶಾಲಾ ಸಂದರ್ಶನ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
2024-25ನೇ ಸಾಲಿನ ಶೈಕ್ಷಣಿಕ ವರ್ಷವು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶೈಕ್ಷಣಿಕ ವರ್ಷದ ಪೂರ್ವಸಿದ್ಧತಾ ಕ್ರಮಗಳ ಹಾಗೂ ವಾರ್ಷಿಕ ಚಟುವಟಿಕೆಗಳ ನಿರ್ವಹಣೆ ಕುರಿತಂತೆ ವಹಿಸಬೇಕಾದ ಕ್ರಮಗಳ ಕುರಿತು ಶೈಕ್ಷಣಿಕ ಮಾರ್ಗದರ್ಶಿ-2024-25ನ್ನು ಬಿಡುಗಡೆಗೊಳಿಸಿದೆ. ಶಾಲಾ ಮುಖ್ಯಸ್ಥರಿಂದ ಶೈಕ್ಷಣಿಕ ಉಸ್ತುವಾರಿ ಅಧಿಕಾರಿ/ಸಿಬ್ಬಂದಿವರೆಗೆ ತಮ್ಮ ವ್ಯಾಪ್ತಿವಾರು ಕ್ರಿಯಾ ಯೋಜನೆ ರೂಪಿಸಿ ಅದರಂತೆ ಅನುಷ್ಠಾನಗೊಳಿಸಲು ಉಲ್ಲೇಖಿತ ಸುತ್ತೋಲೆಯಂತೆ ನಿರ್ದೇಶನ ನೀಡಲಾಗಿರುತ್ತದೆ.
ಮಿಂಚಿನ ಸಂಚಾರ ಉದ್ದೇಶ:-
ಪ್ರಸ್ತುತ ಸಾಲಿನ ಶಾಲಾ ಶೈಕ್ಷಣಿಕ ಚಟುವಟಿಕೆಗಳು ಮೇಲ್ಕಂಡಂತೆ ಸಕ್ರಿಯಗೊಂಡಿರುವ ಹಿನ್ನೆಲೆಯಲ್ಲಿ ಶಾಲಾವಾರು ಖಚಿತಪಡಿಸಿಕೊಳ್ಳಲು ಮಿಂಚಿನ ಸಂಚಾರ ತ್ವರಿತ ಸಂದರ್ಶನ (Flying visit ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಖ್ಯವಾಗಿ ಈ ಶಾಲಾ ಸಂದರ್ಶನ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಪೂರ್ವಸಿದ್ಧತೆ, ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿ, ಬೋಧನಾ ಕಲಿಕಾ ಚಟುವಟಿಕೆಗಳ ಪೂರ್ವ ಸಿದ್ಧತೆ, ಇಲ್ಲಿಯವರೆಗಿನ ಪ್ರಗತಿ, ಶಾಲಾ ಮೂಲಭೂತ ಸೌಕರ್ಯಗಳು (ಮಳೆಗಾಲ ಪ್ರಾರಂಭವಾಗಿರುವುದರಿಂದ ಶಿಥಿಲಗೊಂಡ ಕಟ್ಟಡಗಳು/ಮಕ್ಕಳ ಸುರಕ್ಷತೆ ಬಗ್ಗೆ) ಅಕ್ಷರ ದಾಸೋಹ ಕಾರ್ಯಕ್ರಮಗಳು, ಹಾಗೂ ಪ್ರೋತ್ಸಾಹದಾಯಕ ಯೋಜನೆಗಳ ಅನುಷ್ಠಾನಗೊಂಡಿರುವ ಬಗ್ಗೆ ಪರಿಶೀಲಿಸುವುದಾಗಿದೆ. ಮುಂದುವರೆದು 2024-25ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಮಂಜೂರಿಸಿರುವ ಉನ್ನತೀಕರಿಸಿದ ಶಾಲೆಗಳು, ದ್ವಿಭಾಷಾ ಮಾಧ್ಯಮ ತರಗತಿಯ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಮತ್ತು ಅಗತ್ಯ ಪೂರ್ವ ಸಿದ್ಧತೆಯೊಂದಿಗೆ ನಡೆಯುತ್ತಿರುವ ಕುರಿತಂತೆ ಶೈಕ್ಷಣಿಕ ಮೇಲ್ವಿಚಾರಣಾ ಅಧಿಕಾರಿ/ಸಿಬ್ಬಂದಿಗಳು ಖುದು ಪರಿಶೀಲಿಸಿ ಪ್ರಗತಿ ಹಂಚಿಕೊಳ್ಳುವುದರೊಂದಿಗೆ ಕಡಿಮೆ ಸಾಧನೆಗೈದ ಶಾಲೆಗಳ ಪಟ್ಟಿಯನ್ನು ತಯಾರಿಸಿಟ್ಟುಕೊಂಡು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವುದಾಗಿದೆ.
ಸಂದರ್ಶನ ಸಪ್ತಾಹ/ಶಾಲಾ ಸಂದರ್ಶನದ ಉದ್ದೇಶ:
ಶಾಲಾ ಸಂದರ್ಶನ ಸಪ್ತಾಹ ಕಾರ್ಯಕ್ರಮವು ಸಂಪೂರ್ಣವಾಗಿ ಶೈಕ್ಷಣಿಕ ಪ್ರಗತಿಯ ಪರಿಶೀಲನೆಯಾಗಿದ್ದು ಆಯಾ ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ತಂಡದಲ್ಲಿ ದಿನವೊಂದಕ್ಕೆ ತಲಾ ಒಂದು ತಾಲ್ಲೂಕಿನಲ್ಲಿ ಮಿಂಚಿನ ಸಂಚಾರದಡಿ ಗುರುತಿಸಿದ ಕಡಿಮೆ ಪ್ರಗತಿ ಸಾಧಿಸಿದ ಶಾಲೆಗಳಲ್ಲಿ ಆಯ್ದ ಕೆಲವು ಶಾಲೆಗಳನ್ನು ಅನಿರೀಕ್ಷಿತವಾಗಿ ಸಂದರ್ಶಿಸಿ ಮಕ್ಕಳ ಕಲಿಕಾ ಪ್ರಗತಿಯನ್ನು ಪರಿಶೀಲಿಸುವುದಾಗಿದೆ.
ಕಾರ್ಯ ಯೋಜನೆ ರೂಪಿಸುವಿಕೆ :
ಸಿ.ಟಿ.ಇ. ಕಾಲೇಜಿನ ಪ್ರಾಂಶುಪಾಲರು, ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಉಸ್ತುವಾರಿ ಸಿಬ್ಬಂದಿಯವರು ಸಭೆಯನ್ನು ನಡೆಸಿ ಕಾರ್ಯಕ್ರಮದ ರೂಪುರೇಷೆಗಳನ್ನು ಕೆಳಕಂಡಂತೆ ಆಯೋಜಿಸುವುದು.
ಮಿಂಚಿನ ಸಂಚಾರ:
ಮಿಂಚಿನ ಸಂಚಾರ ಕಾರ್ಯಕ್ರಮವು ಆಯಾ ಕ್ಲಸ್ಟರ್ ಹಂತದಿಂದ ಜಿಲ್ಲಾ ಹಂತದವರೆಗೆ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳು ಹಾಗೂ ತಾಲ್ಲೂಕು ನೋಡಲ್ ಅಧಿಕಾರಿಗಳು ಅನಿರೀಕ್ಷಿತವಾಗಿ ತಮ್ಮ ವ್ಯಾಪ್ತಿಯಲ್ಲಿ ದಿನವೊಂದಕ್ಕೆ 4 ಶಾಲೆಗಳನ್ನು ಸಂದರ್ಶಿಸುವ ಕಾರ್ಯಕ್ರಮವಾಗಿದೆ.
ಈ ಕಾರ್ಯಕ್ರಮದಡಿಯಲ್ಲಿ ಶಾಲೆಯ ಸಮಗ್ರ ತಪಾಸಣೆ/ಪರಿಶೀಲನೆ ಮಾಡದೆ ಶಾಲೆಯ ಪ್ರಾಥಮಿಕ ಚಟುವಟಿಕೆಗಳ ನಿರ್ವಹಣೆ ಕುರಿತು ವರದಿ ದಾಖಲಿಸುವುದಾಗಿದೆ.
ಈ ಕಾರ್ಯಕ್ರಮವನ್ನು ಸಿ.ಆರ್.ಪಿ ಯಿಂದ ಡಿ.ಡಿ.ಪಿ.ಐ ವರೆಗೆ ವೈಯಕ್ತಿಕವಾಗಿ ಮಾರ್ಗ ನಕ್ಷೆ ತಯಾರಿಸಿಕೊಂಡು ಶಾಲೆಗಳನ್ನು ತ್ವರಿತವಾಗಿ ಸಂದರ್ಶಿಸುವುದಾಗಿದೆ.
ಅಂತಿಮವಾಗಿ ನಿಗಧಿಪಡಿಸಿದ ಚಕ್ಲಿಸ್ಟ್ ನಲ್ಲಿ ಪ್ರಗತಿ ವರದಿ ದಾಖಲಿಸಿಕೊಂಡು, ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ತಾಲ್ಲೂಕುವಾರು ಮಾಹಿತಿ ವಿನಿಮಯ ಮಾಡಿ ಕಲಿಕೆಯಲ್ಲಿ ಹಿಂದುಳಿದ ಶಾಲೆಗಳ ಕಾರಣ ಮತ್ತು ಪರಿಹಾರಗಳನ್ನು ಗುರುತಿಸಿಕೊಂಡು ಅನುಪಾಲನೆ ಮಾಡುವುದಾಗಿದೆ.
ಸಂದರ್ಶನ ಸಪ್ತಾಹ/ಶಾಲಾ ಸಂದರ್ಶನ
ಶಾಲಾ ಸಂದರ್ಶನ ಸಪ್ತಾಹ/ಶಾಲಾ ಸಂದರ್ಶನವು ಪರಿಪೂರ್ಣವಾಗಿ ಶಾಲೆಯ ಬೋಧನಾ ಕಲಿಕಾ ಚಟುವಟಿಕೆಗಳ ತಪಾಸಣೆಯಾಗಿದ್ದು ಕಲಿಕಾ ಪ್ರಗತಿಯ ಕೇಂದ್ರಿಕರಿಸುವುದಾಗಿದೆ.
ಸದರಿ ಕಾರ್ಯಕ್ರಮವನ್ನು ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಉಪನಿರ್ದೇಶಕರ ನೇತೃತ್ವದಲ್ಲಿ ಮಾರ್ಗನಕ್ಷೆಯನ್ನು ಮಿಂಚಿನ ಸಂಚಾರದಡಿ ಗುರುತಿಸಿದ “ಸಿ” ಶ್ರೇಣಿಯ ಅಂದರೆ ಕಲಿಕೆಯಲ್ಲಿ ಹಿಂದುಳಿದಿರುವ ಶಾಲೆಗಳನ್ನು ಆಧ್ಯತೆ ಮೇಲೆ ಸಂದರ್ಶಿಸುವುದಾಗಿದೆ.
ಸಂದರ್ಶನ ಸಮಯದಲ್ಲಿ ಕಡ್ಡಾಯವಾಗಿ ತಂಡದಲ್ಲಿ ವಿಷಯವಾರು ಸಂಪನ್ಮೂಲ ಶಿಕ್ಷಕರುಗಳನ್ನೊಳಗೊಂಡಂತೆ ತಂಡ ರಚಿಸಿಕೊಂಡು ಶಾಲೆಗಳ ಸಂದರ್ಶನ ನೀಡಿ ಬೋಧನಾ ಕಲಿಕಾ ಚಟುವಟಿಕೆಗಳನ್ನು ವಿಷಯವಾರು ಸಂಪನ್ಮೂಲ ಶಿಕ್ಷಕರು ಪರಿಶೀಲಿಸಿ ಮಾರ್ಗದರ್ಶನ ಮಾಡುವುದಾಗಿದೆ.
ಕಾರ್ಯಕ್ರಮದ ಹೆಸರೇ ಹೇಳುವಂತೆ ಒಂದು ವಾರಗಳ ಕಾಲ ತಂಡಗಳು ಪ್ರತಿ ದಿನ ತಲಾ ಒಂದೊಂದು ತಾಲ್ಲೂಕಿನ ಆಯ್ಕೆ ಪ್ರಾಥಮಿಕ/ಪ್ರೌಢ ಶಾಲೆಗಳನ್ನು ಸಂದರ್ಶಿಸುವುದಾಗಿದೆ.
ಮಾರ್ಗ ನಕ್ಷೆಯನ್ನು ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗುರುತಿಸಿ ಉಪನಿರ್ದೇಶಕರಿಗೆ ನೀಡುವುದು, ತದನಂತರ ಉಪನಿರ್ದೇಶಕರು ಪ್ರತಿ ತಂಡಕ್ಕೆ ಸಂದರ್ಶಿಸಬೇಕಾದ ಶಾಲೆಗಳ ಮಾರ್ಗ ನಕ್ಷೆಯನ್ನು ದಿನವೊಂದಕ್ಕೆ 3 ಶಾಲೆಗಳಂತೆ (ಎರಡು ಪ್ರಾಥಮಿಕ, ಒಂದು ಪ್ರೌಢ) ಸಂದರ್ಶಿಸುವುದಾಗಿದೆ.
ನಿಗಧಿಪಡಿಸಿದ ಮಾರ್ಗ ನಕ್ಷೆ (Route Map)ಯಂತೆ ಜಿಲ್ಲೆಯೊಳಗೆ ಇಲಾಖೆಯ ಲಭ್ಯ ವಾಹನಗಳನ್ನು ಅಂದರೆ ಉಪನಿರ್ದೇಶಕರು (ಆಡಳಿತ) ಉಪನಿರ್ದೇಶಕರು (ಅಭಿವೃದ್ಧಿ) ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿ.ವೈ.ಪಿ.ಸಿ ಸಮಗ್ರ ಶಿಕ್ಷಣ ಕರ್ನಾಟಕ/ ಶಿಕ್ಷಣಾಧಿಕಾರಿಗಳು ಅಕ್ಷರ ದಾಸೋಹ ರವರುಗಳನ್ನೊಳಗೊಂಡಂತೆ ಲಭ್ಯ 10 ವಾಹನಗಳನ್ನು ಸದರಿ ಕಾರ್ಯಕ್ರಮಕ್ಕೆ ಆ ತಾಲ್ಲೂಕಿಗೆ ನಿಯೋಜಿಸುವುದು.