ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಪಟ್ಟ ಕೇಸಿಗೆ ಇಡಿ ಎಂಟ್ರಿಯಾಗಿದೆ. ಇಂದು ಬೆಳ್ಳಂ ಬೆಳಗ್ಗೆ ಬೆಂಗಳೂರು, ರಾಯಚೂರು, ಹೈದ್ರಬಾದ್ ಸೇರಿದಂತೆ ಒಟ್ಟು 18 ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ಮಹತ್ವದ ದಾಖಲೆಗಳನ್ನು ಕಲೆ ಹಾಕುತ್ತಿದೆ ಎನ್ನಲಾಗಿದೆ.
ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ದದ್ದಲ್ ನಿವಾಸಕ್ಕೆ ಬೆಳಗ್ಗೆ 7 ಗಂಟೆಗೆ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದಲ್ಲದೇ ಬೆಂಗಳೂರಿನ ಯಲಹಂಕದಲ್ಲಿರುವ ಅವರ ಮನೆ ಮೇಲೆ ಕೂಡ ದಾಳಿ ನಡೆಸಿದ್ದಾರೆ. ಇನ್ನೂ ಬಳ್ಳಾರಿಯ ನೆಹರು ಕಾಲೋನಿಯಲ್ಲಿರುವ ಮಾಜಿ ಸಚಿವ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾಗೇಂದ್ರ ಮನೆ ಮೇಲೂ ಕೂಡ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಡಾಲರ್ಸ್ ಕಾಲೋನಿಯಲ್ಲಿರುವ ನಾಗೇಂದ್ರ ಫ್ಲ್ಯಾಟ್ ಮೇಲೂ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ನಡುವೆ ಇಡಿ ದಾಳಿಗೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ.ಪರಮೇಶ್ವರ್ ಇಡಿ ಅಧಿಕಾರಿಗಳು ದಾಳಿ ಮಾಡುವ ಬಗ್ಗೆ ರಾಜ್ಯಕ್ಕೆ ತಿಳಿಸುವುದಿಲ್ಲ, ಅದರ ಮಾಹಿತಿ ನಮಗೆ ತಿಳಿದಿರುವುದಿಲ್ಲ, ಅವರು ಯಾವ ಕಾರಣಕ್ಕೆ ದಾಳಿ ನಡೆಸಿದ್ದಾರೆ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಅಂಥ ಹೇಳಿದರು.