ಮಂಗಳೂರು : ಇಡಿ ಅಧಿಕಾರಿಗಳು ಕೋಚಿಮುಲ್ ನೇಮಕಾತಿಯಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ಪ್ರಶ್ನೆಪತ್ರಿಕೆ ಮಾರಾಟ ಶಂಕೆ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೋಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿರುವ ಇಡಿ ಅಧಿಕಾರಿಗಳು ಎರಡು ದಿನಗಳ ಕಾಲ ಪರಿಶೀಲನೆ ನಡೆಸಿದ್ದಾರೆ.
ಕಳೆದ 6 ತಿಂಗಳ ಹಿಂದೆಯೇ ನಡೆದಿದ್ದ ನೇಮಕಾತಿಗೆ ಪರೀಕ್ಷೆ, ಫಲಿತಾಂಶ ಪ್ರಕಟ ಹೊಣೆಯನ್ನು ಮಂಗಳೂರು ವಿವಿ ಹೊತ್ತಿತ್ತು. ಈ ಹಿನ್ನೆಲೆಯಲ್ಲಿ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ರಾಜುಕೃಷ್ಣ ಚಲನ್ನವರ್ ಅವರನ್ನು ವಿಚಾರಣೆ ಮಾಡಲಾಗುತ್ತಿದೆ. ನೇಮಕಾತಿ ಪರೀಕ್ಷೆಯ ಜವಾಬ್ದಾರಿ ವಹಿಸಿಕೊಂಡಿದ್ದ ಪ್ರೊ.ರಾಜುಕೃಷ್ಣ ಪರೀಕ್ಷೆಗೂ ಮುನ್ನ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೋಚಿಮುಲ್ ನೇಮಕಾತಿ ಅಕ್ರಮದಲ್ಲಿ ಮಂಗಳೂರು ವಿವಿ ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ತಿಂಗಳ ಹಿಂದೆಯೇ ಕುಲಸಚಿವರಿಗೆ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಇದೀಗ ವಿವಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.