ಕೋಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ವರದಿಯಾಗುತ್ತಿರುವ ಹಿಂಸಾಚಾರದ ಘಟನೆಗಳನ್ನು ಭಾರತೀಯ ಚುನಾವಣಾ ಆಯೋಗ (ECI) ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮತ್ತು ಹಿಂಸಾಚಾರದ ವಿರುದ್ಧ ‘ಶೂನ್ಯ ಸಹನೆ’ (Zero Tolerance) ನೀತಿಯನ್ನು ಅನುಸರಿಸುವಂತೆ ಆಯೋಗವು ಭದ್ರತಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದರೆ ಆಯಾ ಪ್ರದೇಶದ ಭದ್ರತಾ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆಯೋಗ ಎಚ್ಚರಿಸಿದೆ.
ಫಲಿತಾಂಶದ ನಂತರವೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು (CAPF) ಸಂವೇದನಾಶೀಲ ಪ್ರದೇಶಗಳಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ.
ವಿಜಯೋತ್ಸವದ ಹೆಸರಿನಲ್ಲಿ ಅಥವಾ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮತ್ತು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುವವರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ.
ಚುನಾವಣಾ ಆಯೋಗದ ವಿಶೇಷ ವೀಕ್ಷಕರು ರಾಜ್ಯದ ಪರಿಸ್ಥಿತಿಯನ್ನು ಕ್ಷಣಕ್ಷಣಕ್ಕೂ ಗಮನಿಸುತ್ತಿದ್ದು, ಸ್ಥಳೀಯ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.








