ಉಡುಪಿ : ಕುಡಿದ ಮತ್ತಿನಲ್ಲಿ ಯುವತಿಯೊಬ್ಬಳು ಬೀದಿ ರಂಪಾಟ ನಡೆಸಿದ್ದಲ್ಲದೆ ಸಾರ್ವಜನಿಕರೊಂದಿಗೆ ಕಿರಿಕ್ ಮಾಡಿಕೊಂಡ ಪ್ರಸಂಗ ಮಣಿಪಾಲದ ಡಿಸಿ ಕಚೇರಿ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಹೊರ ರಾಜ್ಯ ಮೂಲದ ಯುವತಿಯು ಯುವಕನೊಂದಿಗೆ ಇಲ್ಲಿನ ಪಿಜ್ಜಾ ಶಾಪ್ಗೆ ಬಂದಿದ್ದು, ಕುಡಿದ ಮತ್ತಿನಲ್ಲಿ ಪಿಜಾ ಶಾಪ್ನಲ್ಲಿ ಕಿರಿಕ್ ಮಾಡಿದ್ದಾಳೆ. ಈ ವೇಳೆ ಇಬ್ಬರನ್ನೂ ಪಿಜ್ಜಾ ಶಾಪ್ ಸಿಬಂದಿ ಹೊರಗೆ ಕಳುಹಿಸಿದ್ದಾರೆ. ಇದರಿಂದ ಸಿಬಂದಿಯ ಮೇಲೆ ಯುವತಿ ಹಲ್ಲೆಗೆ ಮುಂದಾಗಿದ್ದಾಳೆ.
ಈ ವೇಳೆ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು ಯುವತಿಯ ತಲೆಗೆ ತಣ್ಣೀರು ಹಾಕಿ ನಶೆ ಇಳಿಸಲು ಪ್ರಯತ್ನಿಸಿದ್ದು, ಇದರಿಂದ ಸಿಟ್ಟುಗೊಂಡ ಆಕೆ ಸಾರ್ವಜನಿಕರ ಮೇಲೂ ಹಲ್ಲೆಗೆ ಮುಂದಾಗಿದ್ದಾಳೆ.
ವಿಪರೀತ ಮದ್ಯ ಸೇವನೆಯಿಂದಾಗಿ ನಿಂತಲ್ಲಿ ನಿಲ್ಲಲಾಗದೆ ತೂರಾಡುತ್ತಾ ರಸ್ತೆಯಲ್ಲಿ ಬೀಳುತ್ತಿದ್ದಳು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇನ್ನು ಜೊತೆಗಿದ್ದ ಯುವಕನ ಮೇಲೂ ಚಪ್ಪಲಿ ಏಟು ನೀಡಿದ್ದಾಳೆ.
ಕೊನೆಗೆ ಮಣಿಪಾಲ ಪೊಲೀಸರು ಯುವತಿಯನ್ನು ಠಾಣೆಗೆ ಕರೆದೊಯ್ದರು. ಯುವತಿಯ ಬೀದಿ ರಂಪಾಟದ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.