ಇಸ್ಲಾಮಾಬಾದ್: ಅಮೆರಿಕಾ ಮತ್ತು ಇರಾನ್ ನಡುವೆ ಶಾಂತಿ ಮೂಡಿಸಲು ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನಕ್ಕೆ ಈಗ ತನ್ನದೇ ಸಚಿವನ ವಿವಾದಾತ್ಮಕ ಹೇಳಿಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಇಸ್ರೇಲ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದು, ನಂತರ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿರುವುದು ಈಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಖವಾಜಾ ಆಸಿಫ್ ಅವರು ತಮ್ಮ ‘X’ (ಟ್ವಿಟ್ಟರ್) ಖಾತೆಯಲ್ಲಿ ಇಸ್ರೇಲ್ ಅನ್ನು “ಮಾನವಕುಲಕ್ಕೆ ಶಾಪ” (Curse for humanity) ಮತ್ತು “ದುಷ್ಟ ರಾಷ್ಟ್ರ” (Evil State) ಎಂದು ಕರೆದಿದ್ದರು. ಅಲ್ಲದೆ, “ಇಸ್ರೇಲ್ ಸ್ಥಾಪಿಸಿದವರು ನರಕದಲ್ಲಿ ಸುಡಲಿ” ಎಂಬ ಅತ್ಯಂತ ಕಟು ಶಬ್ದಗಳನ್ನು ಬಳಸಿದ್ದರು. ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಅವರು “ಜನಾಂಗೀಯ ಹತ್ಯೆ” ಎಂದು ಟೀಕಿಸಿದ್ದರು.
ವಿವಾದ ತೀವ್ರಗೊಳ್ಳುತ್ತಿದ್ದಂತೆಯೇ ಸಚಿವರು ತಮ್ಮ ಪೋಸ್ಟ್ ಅನ್ನು ಅಳಿಸಿ ಹಾಕಿದ್ದಾರೆ. ಆದರೆ, ಅದರ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿದ್ದು, ಸಚಿವರು ಈ ಪೋಸ್ಟ್ ಮಾಡುವಾಗ ‘ಮದ್ಯದ ಅಮಲಿನಲ್ಲಿ’ (Drunk Posting) ಇದ್ದರೇ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಎತ್ತಿದ್ದಾರೆ.
ಸಚಿವ ಆಸಿಫ್ ಅವರ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಕಚೇರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. “ಒಂದು ಕಡೆ ಸಂಧಾನಕಾರ ಎಂದು ಹೇಳಿಕೊಳ್ಳುವ ದೇಶದ ಸಚಿವನಿಂದ ಇಂತಹ ಬೇಜವಾಬ್ದಾರಿ ಹೇಳಿಕೆ ಸಹಿಸಲು ಸಾಧ್ಯವಿಲ್ಲ” ಎಂದು ಇಸ್ರೇಲ್ ಗುಡುಗಿದೆ.
ಪಾಕಿಸ್ತಾನವು ಅಮೆರಿಕಾ ಮತ್ತು ಇರಾನ್ ನಡುವೆ ನಿಷ್ಪಕ್ಷಪಾತ ಸಂಧಾನಕಾರನಾಗಿ ಕೆಲಸ ಮಾಡಲು ಸಾಧ್ಯವೇ? ಎಂಬ ಪ್ರಶ್ನೆಯನ್ನು ಇಸ್ರೇಲ್ ಮತ್ತು ಅದರ ಮಿತ್ರ ರಾಷ್ಟ್ರಗಳು ಎತ್ತಿವೆ. ಇದು ಇಂದಿನ ಇಸ್ಲಾಮಾಬಾದ್ ಸಭೆಯ ಮೇಲೆ ಕಪ್ಪು ನೆರಳು ಬೀರಿದೆ.








