ಬೆಂಗಳೂರು : ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿಯಿಂದಾಗಿ ಭಾರತದಿಂದ ದುಬೈಗೆ ಹಾರಾಟ ನಡೆಸಬೇಕಿದ್ದ ವಿಮಾನಗಳು ರದ್ದಾಗಿವೆ. ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ಪ್ರೆಸ್ ಸೇವೆಗಳು ಸ್ಥಗಿತಗೊಂಡಿದ್ದು, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ 24 ಹಾಗೂ ಮಂಗಳೂರಿನಿಂದ ಕೆಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ನಿಂದ ನಿರ್ಗಮನ ಮತ್ತು ಆಗಮಿಸಬೇಕಿದ್ದ ಒಟ್ಟು 24 ವಿಮಾನಗಳ ಹಾರಾಟ ಕ್ಯಾನ್ಸಲ್ ಆಗಿವೆ. ಕೆಂಪೇಗೌಡ ಏರ್ಪೋರ್ಟ್ನಿಂದ ನಿರ್ಗಮಿಸಬೇಕಿದ್ದ 11 ಫ್ಲೈಟ್ಗಳು ಮತ್ತು ಅರಬ್ ದೇಶಗಳಿಂದ ಕೆಐಎಬಿಗೆ ಆಗಮಿಸಬೇಕಿದ್ದ 13 ಫ್ಲೈಟ್ ರದ್ದಾಗಿವೆ. ಅಬುದಾಬಿ, ರಿಯಾದ್, ಜಿಡ್ಡಾ, ಡಮಾಮ್, ದುಬೈ ಹಾಗೂ ದೋಹಾದಿಂದ ಕೆಐಎಬಿಗೆ ಆಗಮಿಸಿದ್ದ ವಿಮಾನಗಳು ಕ್ಯಾನ್ಸಲ್ ಆಗಿವೆ ಎನ್ನಲಾಗಿದೆ.
ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಭವಿಷ್ಯದ ಬೇರೆ ದಿನಾಂಕಕ್ಕೆ ತಮ್ಮ ಪ್ರಯಾಣವನ್ನು ಮರುನಿಗದಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪ್ರಯಾಣ ಬೇಡವೆನ್ನುವವರು ಟಿಕೆಟ್ ರದ್ದುಗೊಳಿಸಿ ಪೂರ್ಣ ಹಣವನ್ನು ಮರಳಿ ಪಡೆಯಬಹುದಾಗಿದೆ.








