ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳ ಕರಡು ವಾರ್ಡ್ ವಾರು ಕ್ಷೇತ್ರ ಪುನರ್ ವಿಂಗಡಣೆಯ ಅಧಿಸೂಚನೆ ಪ್ರಕಟಿಸಲಾಗಿದೆ. ಅಲ್ಲದೇ ನಾಗರೀಕರಿಂದ ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟಿಸಿದ್ದು, ದಿನಾಂಕ: 14- 05-2025 ರಲ್ಲಿ ಗ್ರೇಟರ್ ಬೆಂಗಳೂರು ಆಡಳತ ಅಧಿನಿಯಮ, 2024 ಅನ್ನು ಸರ್ಕಾರವು ದಿನಾಂಕ: 15-05-2025 ರಿಂದ ಜಾರಿಗೆ ತಂದಿರುತ್ತದೆ ಎಂದಿದೆ.
ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 183 ಬಿಬಿಎಸ್ 2025, ದಿನಾಂಕ:02-09- 2025ರಲ್ಲಿ ಸರ್ಕಾರವು ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ 1) ಬೆಂಗಳೂರು ಕೇಂದ್ರ ನಗರ ಪಾಲಿಕೆ, 2) ಬೆಂಗಳೂರು ಪೂರ್ವ ನಗರ ಪಾಲಿಕೆ, 3) ಬೆಂಗಳೂರು ಪಶ್ಚಿಮ ನಗರ ಪಾಲಿಕೆ, 4) ಬೆಂಗಳೂರು ಉತ್ತರ ನಗರ ಪಾಲಿಕೆ, 5) ಬೆಂಗಳೂರು ದಕ್ಷಿಣ ನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ, ಸದರಿ ಕಾಯ್ದೆಯ ಪ್ರಕರಣ 29ರ ಉಪ ಪ್ರಕರಣ (1) ಮತ್ತು (3) ಗಳನ್ವಯ ವಾರ್ಡ್‌ಗಳ ಪುನರ್ ವಿಂಗಡಣೆಗಾಗಿ 03 ತಿಂಗಳ ಅವಧಿಗೆ ಸೀಮಿತವಾಗಿ, ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ವಾರ್ಡ್‌ಗಳ ಪುನರ್ ವಿಂಗಡಣಾ ಆಯೋಗವನ್ನು ರಚಿಸಲಾಗಿತ್ತು ಎಂದಿದೆ.
ದಿನಾಂಕ: 02-09- 2025ರಲ್ಲಿ ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಬೆಂಗಳೂರು ನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ವಾರ್ಡ್‌ಗಳ ಪುನರ್‌ವಿಂಗಡಣೆಯನ್ನು ಮಾಡಲು ಮಾರ್ಗಸೂಚಿಗಳನ್ನು ರಚಿಸಲಾಗಿತ್ತು ಎಂದು ತಿಳಿಸಿದೆ.
ಅದರಂತೆ, ವಾರ್ಡ್‌ಗಳ ಪುನರ್ ವಿಂಗಡಣಾ ಆಯೋಗವು ದಿನಾಂಕ 30-09-2025ರಂದು ಸರ್ಕಾರಕ್ಕೆ ವಾರ್ಡ್‌ಗಳ ಪುನರ್ ವಿಂಗಡಣಾ ವರದಿಯನ್ನು ಸಲ್ಲಿಸಿರುತ್ತದೆ.
ಸರ್ಕಾರವು, ವಾರ್ಡ್‌ಗಳ ಪುನರ್ ವಿಂಗಡಣಾ ಆಯೋಗದ ವರದಿಯನ್ನು ಒಪ್ಪಿ, ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಪ್ರಕರಣ 29ರಲ್ಲಿ ಪ್ರದತ್ತವಾದ ಅಧಿಕಾರದನ್ವಯ, 2011ರ ಜನಗಣತಿಯ ಆಧಾರದ ಮೇರೆಗೆ, ಗ್ರೇಟರ್ ಬೆಂಗಳೂರು ಪ್ರದೇಶದ 05 ನಗರ ಪಾಲಿಕೆಗಳ ಕರಡು ವಾರ್ಡ್‌ವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಈ ಕೆಳಕಂಡಂತೆ ನಿಗದಿಪಡಿಸಿ, ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಪ್ರಕಟಿಸಿರುತ್ತದೆ ಎಂದು ಹೇಳಿದೆ.
05 ನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ಕರಡು ವಾರ್ಡ್ ಗಳ ಸಂಖ್ಯೆ:
01. ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವಾರ್ಡ್ ಗಳ ಸಂಖ್ಯೆ: 63
02.ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಾರ್ಡ್ ಗಳ ಸಂಖ್ಯೆ: 72
03.ಬೆಂಗಳೂರು ಪೂರ್ವ ನಗರ ಪಾಲಿಕೆಯ ವಾರ್ಡ್ ಗಳ ಸಂಖ್ಯೆ: 50
04.ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಾರ್ಡ್ ಗಳ ಸಂಖ್ಯೆ: 111
05.ಬೆಂಗಳೂರು ಉತ್ತರ ನಗರ ಪಾಲಿಕೆಯ ವಾರ್ಡ್ ಗಳ ಸಂಖ್ಯೆ: 72
ಈ ಬಗ್ಗೆ ಯಾವುದೇ ಆಕ್ಷೇಪಣೆ / ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳು ತಮ್ಮ ಪೂರ್ಣ ವಿಳಾಸ, ಸಹಿಯೊಂದಿಗೆ ಸೂಕ್ತ ಕಾರಣ-ವಿವರಣೆಗಳೊಂದಿಗೆ ಅತ ರೂಪದಲ್ಲಿ ಆಕ್ಷೇಪಣೆ | ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ: 436, 4ನೇ ಮಹಡಿ, ವಿಕಾಸಸೌಧ, ಡಾ. ಬಿ.ಆರ್ ಅಂಬೇಡ್ಕರ್ ವೀದಿ, ಬೆಂಗಳೂರು-560001, ಇವರಿಗೆ ದಿನಾಂಕ:15-10-2025 ರಂದು ಅಪರಾಹ್ನ 5.00 ಗಂಟೆಯ ಒಳಗಾಗಿ ಸಲ್ಲಿಸುವುದು.
ನಿಗದಿತ ಅವಧಿಯಲ್ಲಿ ಸ್ವೀಕೃತಗೊಂಡ ಆಕ್ಷೇಪಣೆ/ಸಲಹೆಗಳನ್ನು ಪರಿಶೀಲಿಸಿ, ವಾರ್ಡ್ ವಾರು ಕ್ಷೇತ್ರ ಪುನರ್‌ವಿಂಗಡಣೆಯನ್ನು ಅಂತಿಮಗೊಳಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದೆ.
ಶಿವಮೊಗ್ಗದ ಲಕ್ಕಿನಕೊಪ್ಪ ಅರಣ್ಯ ಪ್ರದೇಶದಲ್ಲಿ ಕಳ್ಳ ಬೇಟೆ, ಮರಗಳವು: ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ