ಬೆಂಗಳೂರು: ಪಿಎಸ್‌ಐ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ ಕೆಇಎ ಸೂಚಿಸಿದೆ. ಪ್ರವೇಶ ಪತ್ರಗಳು ಬುಧವಾರ 11 ಗಂಟೆಯಿಂದ ಕೆಇಎ ವೆಬ್‌ಸೈಟ್‌ನಲ್ಲಿ http://kea.kar.nic.inಗೆ ಅಭ್ಯರ್ಥಿಗಳು ಪ್ರಾಧಿಕಾರದ ಜಾಲತಾಣಕ್ಕೆ ಭೇಟಿ ನೀಡಿ, ನಿಗದಿತ ಲಿಂಕ್ ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ, ಈ ಪ್ರಕ್ರಿಯೆ ಪೂರೈಸಿಕೊಳ್ಳಬೇಕು ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.
ಈ ನಡುವೆ ಕರ್ನಾಟಕ ಪರೀಕ್ಷಾಪ್ರಾಧಿಕಾರ (ಕೆಇಎ) ಜ.23ರಂದು ನಡೆಸಲಿರುವ ಪಿಎಸ್‌ಐ ನೇಮಕಾತಿ ಪರೀಕ್ಷೆಗೆ ವಸ್ತ್ರ ಸಂಹಿತೆ ನಿಯಮಾವಳಿ ಪ್ರಕಟಿಸಿದ್ದು, ಸರಳ ಉಡುಪು ಧರಿಸಿ ಬರಲು ಸೂಚಿಸಿದೆ. ಮಂಗಳಸೂತ್ರ ಮತ್ತು ಕಾಲುಂಗುರ ಹೊರ ತುಪಡಿಸಿ ಇನ್ಯಾವುದೇ ಆಭರಣಗಳನ್ನು ಧರಿಸಿ ಬರುವಂತಿಲ್ಲ ಎಂದು ತಿಳಿಸಿದೆ. ಇತ್ತೀಚಿನ ನಿಗಮ ಮಂಡಳಿ ಪರೀಕ್ಷೆಗಳ ವೇಳೆ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶಿಸುವ ಮುನ್ನ ಮಂಗಳಸೂತ್ರ ಮತ್ತು ಕಾಲುಂಗುರವನ್ನು ತೆಗೆಸಿದ್ದು ಭಾರೀ ವಿವಾದಕ್ಕೀಡಾಗಿತ್ತು. ಇದು ಬಹುಸಂಖ್ಯಾತ ಹಿಂದೂ ಸಂಸ್ಕೃತಿಗೆ ಅಗೌರವ ತೋರಲಾಗಿದೆ ಎಂದು ಸಾರ್ವಜನಿಕರು ಹಾಗೂ ರಾಜಕೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೆ-ಸೆಟ್ ಪರೀಕ್ಷೆ ನಂತರ ಇದೀಗ ಪಿಎಸ್‌ಐ ಪರೀಕ್ಷೆಗೂ ಮಂಗಳ ಸೂತ್ರ ಮತ್ತು ಕಾಲುಂಗುರ ಧರಿಸಿ ಬರಲು ಅವಕಾಶ ನೀಡಲಾಗಿದೆ.