ಶಿವಮೊಗ್ಗ: ಮಲೆನಾಡು ಭಾಗದ ರೈತರನ್ನು ಅರಣ್ಯ ಭೂಮಿ ಹಾಗೂ ಒತ್ತುವರಿ ತೆರವು ಹೆಸರಿನಲ್ಲಿ ಪದೇಪದೇ ಒಕ್ಕಲೆಬ್ಬಿಸುವ ಸರ್ಕಾರದ ನೀತಿಯ ವಿರುದ್ಧ ಮಲೆನಾಡು ರೈತ ಹೋರಾಟ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೂ ರೈತರನ್ನು ತೆರವು ಮಾಡಬಾರದು ಎಂದು ವೇದಿಕೆಯ ಜಿಲ್ಲಾ ಸಂಚಾಲಕ ತೀ.ನ. ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ನ್ಯಾಯಾಲಯದ ಆದೇಶಕ್ಕೂ ಬೆಲೆಯಿಲ್ಲವೇ?
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವದನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಜಮೀನು ಸಾಗುವಳಿ ಅಥವಾ ಮನೆಗಳ ಮೇಲೆ ಬಲವಂತದ ಕ್ರಮ ಜರುಗಿಸಬಾರದು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವಿದ್ದರೂ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ ಎಂದು ದೂರಿದರು. ಅರಣ್ಯ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ ರೈತರಿಗೆ ದಾಖಲೆಗಳನ್ನು ಹುಡುಕಲು ನೆರವಾಗಬೇಕಾದ ಅಧಿಕಾರಿಗಳು, ಅದರ ಬದಲಿಗೆ ನೋಟಿಸ್ ನೀಡಿ ಭಯ ಹುಟ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಣ್ಯರ ಜಮೀನಿಗೇ ನೋಟಿಸ್: ಬಡವರ ಪಾಡೇನು?
ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೋಣಂದೂರು ಲಿಂಗಪ್ಪ ಮತ್ತು ರುದ್ರಪ್ಪ ಲಮಾಣಿ ಅವರಂತಹ ಪ್ರಭಾವಿಗಳ ಜಮೀನಿಗೇ ಅರಣ್ಯ ಇಲಾಖೆ ನೋಟಿಸ್ ನೀಡಿದೆ ಎಂದರೆ, ಇನ್ನು ಸಾಮಾನ್ಯ ಬಡ ರೈತರ ಸ್ಥಿತಿ ಎಷ್ಟು ಕಠಿಣವಾಗಿರಬಹುದು ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.
ಪ್ರಮುಖ ಆರೋಪಗಳು ಮತ್ತು ಸಮಸ್ಯೆಗಳು:
-
ವಿಶೇಷ ತನಿಖಾ ತಂಡದ ವಿಳಂಬ: ರೈತರ ಭೂಸಮಸ್ಯೆ ಪರಿಶೀಲನೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡದ ಕಾರ್ಯವೈಖರಿ ಮಂದಗತಿಯಲ್ಲಿದೆ.
-
ವಿವಿಧ ಹೆಸರಿನಲ್ಲಿ ಕಿರುಕುಳ: ಗೋಮಾಳ, ಹುಲ್ಲುಬನಿ, ಜಾನುವಾರ ಮುಫತ್ತು ಹಾಗೂ ‘ಪರಿಭಾವಿತ ಅರಣ್ಯ’ ಎಂಬ ಹೆಸರಿನಲ್ಲಿ ಒತ್ತುವರಿ ತೆರವು ನಡೆಸಲಾಗುತ್ತಿದೆ.
-
ಮಂಜೂರಾದ ಭೂಮಿ ಹಂಚಿಕೆಯಾಗಿಲ್ಲ: 1996ರಲ್ಲಿಯೇ ರೈತರಿಗೆ ನೀಡಲು ಮಂಜೂರು ಮಾಡಲಾಗಿದ್ದ 43 ಸಾವಿರ ಎಕರೆ ಜಮೀನನ್ನು ಇದುವರೆಗೂ ಹಸ್ತಾಂತರಿಸದೆ ಸರ್ಕಾರ ರೈತರನ್ನು ಸತಾಯಿಸುತ್ತಿದೆ.
‘ರೈತರು ದಂಗೆ ಏಳುವ ದಿನ ದೂರವಿಲ್ಲ’
ಸ್ಥಳೀಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ರೈತರ ಪರವಾಗಿ ನಿಂತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಸರ್ಕಾರಗಳು ಕಾನೂನಿನ ನೆಪವೊಡ್ಡಿ ರೈತರ ಎದೆಗೆ ಚೂರಿ ಹಾಕುವ ಕೆಲಸ ಮಾಡುತ್ತಿವೆ ಎಂದು ಶ್ರೀನಿವಾಸ್ ಕಿಡಿಕಾರಿದರು. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ರೈತರು ಬೃಹತ್ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಕಣ್ಣೀರಿನಲ್ಲಿ ಮಲೆನಾಡು ರೈತರು
ಹೈಕೋರ್ಟ್ ನ್ಯಾಯವಾದಿ ಕುಮಾರಸ್ವಾಮಿ ಮಾತನಾಡಿ, “ಮಲೆನಾಡಿನಲ್ಲಿ ‘ಒಕ್ಕಲೆಬ್ಬಿಸು’ ಎನ್ನುವ ಪದ ರೈತರಿಗೆ ಶಾಪವಾಗಿ ಪರಿಣಮಿಸಿದೆ. ಅರಣ್ಯ ಇಲಾಖೆಯು ನ್ಯಾಯಾಲಯದ ತೀರ್ಮಾನಗಳನ್ನೂ ಗೌರವಿಸುತ್ತಿಲ್ಲ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸದಿದ್ದರೆ ರೈತರ ಸ್ಥಿತಿ ಮತ್ತಷ್ಟು ಹದಗೆಡಲಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಶುರಾಮಪ್ಪ ಬರೂರು, ಪರಶುರಾಮಪ್ಪ ಬಿಳಿಸಿರಿ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.
ಈ ಹೋರಾಟವು ಮಲೆನಾಡು ಭಾಗದ ಸಾವಿರಾರು ರೈತ ಕುಟುಂಬಗಳ ಅಸ್ತಿತ್ವದ ಪ್ರಶ್ನೆಯಾಗಿದ್ದು, ಸರ್ಕಾರದ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಶಿವಮೊಗ್ಗ: ಪದವಿ ಪೂರ್ವ ಕಾಲೇಜುಗಳ ಪ್ರಥಮ PUC ದಾಖಲಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ
ಶಿವಮೊಗ್ಗದಲ್ಲಿ ಹುಲಿಗಳ ಮೇಲೆ ಕಣ್ಣಿಡಲು ಇಟ್ಟಿದ್ದ ಕ್ಯಾಮೆರಾಗಳೇ ಕಳ್ಳತನ! ಅರಣ್ಯ ಇಲಾಖೆಗೆ ಶಾಕ್ ನೀಡಿದ ಕಿರಾತಕರು








