ಬೆಂಗಳೂರು : ನಾನು ಗ್ಯಾರಂಟಿ ಕೊಡುವುದನ್ನು ವಿರೋಧಿಸುತ್ತಿಲ್ಲ. ಗ್ಯಾರಂಟಿ ಕೊಡಿ, ಆದರೆ ಗ್ಯಾರಂಟಿ ಹೆಸರಲ್ಲಿ ಆರ್ಥಿಕ ಪರಿಸ್ಥಿತಿ ಹಾಳು ಮಾಡಬೇಡಿ. ಮುಂದಿನ ಅಧಿಕಾರ ನಡೆಸುವ ಪೀಳಿಗೆ ಭವಿಷ್ಯ ಹಾಳು ಮಾಡಬೇಡಿ ಎಂದು ಕೇಂದ್ರ ಸಚಿವ HD ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ತೆರಿಗೆಯವರಿಗೆ 10 ಸಾವಿರ ಕೋಟಿ ಹೆಚ್ಚಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಇದು ಯಾವ ಪುರುಷಾರ್ಥಕ್ಕೆ? ಗ್ಯಾರಂಟಿ ಹೆಸರು ಹೇಳಿಕೊಂಡು ಜನರಿಗೆ ಹೊರೆ ಮಾಡಿ, ಜನರ ಹಣ ಕಿತ್ತು ಕಾರ್ಯಕ್ರಮ ಮುಂದುವರಿಸುವುದರಲ್ಲಿ ಅರ್ಥ ಇಲ್ಲ. ಇದರಿಂದ ಕ್ಯಾಪಿಟಲ್ ಅಸೆಟ್ ಆಗುತ್ತಿಲ್ಲ, ಕೇವಲ ಖರ್ಚಾಗುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅನ್ನ ಭಾಗ್ಯ ಯೋಜನೆಗೂ ಷರತ್ತು, ಮಾರ್ಗಸೂಚಿ ಅಳವಡಿಸಿದ್ದಾರೆ. ಅಕ್ಕಿ ಕೊಡುವುದನ್ನು ಕಡಿತಗೊಳಿಸಿದ್ದಾರೆ. ಇದು ಮುಂದೆ ಯಾವ ಹಂತಕ್ಕೆ ಹೋಗುತ್ತದೆ ಎಂದು ಕಾದು ನೋಡಿ. ನಮಗೆ ಗ್ಯಾರಂಟಿ ಬಗ್ಗೆ ಯಾವುದೇ ಹೊಟ್ಟೆ ಉರಿ ಇಲ್ಲ. ಗ್ಯಾರಂಟಿ ಬೇಕಾದರೆ ಡಬಲ್ ಮಾಡಿಕೊಳ್ಳಿ, ಆದರೆ ರಾಜ್ಯವನ್ನು ದೀವಾಳಿ ಮಾಡಬೇಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇನ್ನು ಶಕ್ತಿ ಯೋಜನೆಯ ಮರುಪರಿಶೀಲನೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಡಿಕೆ ಶಿವಕುಮಾರ್ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದ್ದು, ಅವರಿಗೆ ಕನಸಿನಲ್ಲಿ ಬಂದು ಮಹಿಳೆಯರು ಹೇಳಿದ್ದಾರೋ? ಅಥವಾ ದೇವರು ಬಂದು ಜ್ಞಾನೋದಯ ಮಾಡಿದೆಯೋ? ಒಂದೊಂದೇ ಗ್ಯಾರಂಟಿ ಮರೆಯಾಗಲು ಇದೊಂದು ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.
ಟ್ವೀಟ್ ಮುಖಾಂತರ ಮಹಿಳೆಯರು ತಿಳಿಸಿದ್ದಾರೆ ಎಂದು ಹೇಳುತ್ತಾರೆ. ಇವರಿಗೆ ಈಗ ಜ್ಞಾನೋದಯ ಆಗಿದೆಯಾ ಎಂದು ವಾಗ್ದಾಳಿ ನಡೆಸಿದರು. ಈ ಕಾರ್ಯಕ್ರಮ ಲಾಂಗ್ ಟರ್ಮ್ ಮಾಡಲು ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸಲು ಇದೊಂದು ಪೀಠಿಕೆ. ನುಡಿದಂತೆ ನಡೆದಿದ್ದೇವೆ ಅಂತ ಬ್ರೈನ್ ವಾಶ್ ಮಾಡುತ್ತಿದ್ರು. ಇದರಿಂದ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಟೀಕಿಸಿದರು.