ನವದೆಹಲಿ: ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ಭೂಮಿ ಪಡೆದ ಹಗರಣದ (Land-for-jobs case) ವಿಚಾರಣೆಗೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ರಿ ದೇವಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ವಜಾಗೊಳಿಸಿದೆ. ತನಿಖಾ ಸಂಸ್ಥೆಯು ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸದ ಸುಮಾರು 1,600 ಕ್ಕೂ ಹೆಚ್ಚು ದಾಖಲೆಗಳನ್ನು ತಮಗೆ ಒದಗಿಸಬೇಕು ಎಂದು ಲಾಲೂ ಮನವಿ ಮಾಡಿದ್ದರು. ಇದನ್ನು ತಿರಸ್ಕರಿಸಿದ ನ್ಯಾಯಾಧೀಶರು, “ಗಾಡಿ ಮುಂದೆ ಕುದುರೆ ಕಟ್ಟುವ ಪ್ರಯತ್ನ ಮಾಡಬೇಡಿ” (Don’t put the cart before the horse) ಎಂದು ಮಾರ್ಮಿಕವಾಗಿ ಟೀಕಿಸಿದ್ದಾರೆ.
ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಈ ಅರ್ಜಿಯು ಕೇವಲ ‘ವಿಚಾರಣೆಯನ್ನು ವಿಳಂಬ ಮಾಡುವ ತಂತ್ರ’ (Ruse to delay trial) ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಕ್ಷಿಗಳ ವಿಚಾರಣೆ ಆರಂಭವಾಗುವ ಮೊದಲೇ ಇಷ್ಟೊಂದು ಬೃಹತ್ ಪ್ರಮಾಣದ ದಾಖಲೆಗಳನ್ನು ಕೇಳುವುದು ಕಾನೂನು ಪ್ರಕ್ರಿಯೆಗೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.ಲಾಲೂ ಪ್ರಸಾದ್ ಪರ ವಕೀಲರು ಸುಮಾರು 1,675 ದಾಖಲೆಗಳನ್ನು ತಮಗೆ ನೀಡುವಂತೆ ಕೇಳಿದ್ದರು. ಇವುಗಳನ್ನು ಈಗಲೇ ಒದಗಿಸಿದರೆ ನ್ಯಾಯಾಂಗ ಪ್ರಕ್ರಿಯೆಯು ಸಂಪೂರ್ಣವಾಗಿ ದಿಕ್ಕು ತಪ್ಪುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಆರೋಪಗಳೇನು?: 2004 ರಿಂದ 2009 ರವರೆಗೆ ಲಾಲೂ ಪ್ರಸಾದ್ ಯಾದವ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ, ಜನರಿಗೆ ರೈಲ್ವೆ ಉದ್ಯೋಗ ನೀಡುವ ಬದಲಾಗಿ ಅವರಿಂದ ಅಥವಾ ಅವರ ಕುಟುಂಬದವರಿಂದ ಭೂಮಿಯನ್ನು ಲಂಚದ ರೂಪದಲ್ಲಿ ಪಡೆದಿದ್ದಾರೆ ಎಂಬುದು ಈ ಹಗರಣದ ಮುಖ್ಯ ಆರೋಪವಾಗಿದೆ.
ಲಾಲೂ ಪ್ರಸಾದ್ ಅವರ ಆಪ್ತ ಕಾರ್ಯದರ್ಶಿ ಆರ್.ಕೆ. ಮಹಾಜನ್ ಮತ್ತು ಮಾಜಿ ರೈಲ್ವೆ ಅಧಿಕಾರಿ ಮಹೀಪ್ ಕಪೂರ್ ಸಲ್ಲಿಸಿದ್ದ ಇದೇ ರೀತಿಯ ಅರ್ಜಿಗಳನ್ನು ಕೂಡ ನ್ಯಾಯಾಲಯ ವಜಾಗೊಳಿಸಿದೆ.
”ವಿಚಾರಣೆಯ ಈ ಹಂತದಲ್ಲಿ ಇಂತಹ ಅರ್ಜಿಗಳನ್ನು ಸಲ್ಲಿಸುವುದು ಸರಿಯಲ್ಲ. ನ್ಯಾಯೋಚಿತ ವಿಚಾರಣೆ ಎಂದರೆ ಅದು ವೇಗವಾಗಿ ನಡೆಯಬೇಕು ಎಂದೇ ಹೊರತು, ಅನಗತ್ಯ ಕಾರಣಗಳಿಂದ ವಿಳಂಬ ಮಾಡುವುದಲ್ಲ” ಎಂದು ನ್ಯಾಯಾಧೀಶರು ತಮ್ಮ 35 ಪುಟಗಳ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.








