ಮಂಡ್ಯ :- ಅರಣ್ಯ ಇಲಾಖೆ ವತಿಯಿಂದ ಕಾಡಂಚಿನ ಗ್ರಾಮಗಳ ಕುಟುಂಬಗಳಿಗೆ ನೀಡುತ್ತಿರುವ ಉಚಿತ ಗ್ಯಾಸ್ ಸಂಪರ್ಕವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಪರಿಸರಕ್ಕಾಗುವ ಹಾನಿಯನ್ನು ತಡೆಯಬೇಕೆಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.
ಮದ್ದೂರು ತಾಲೂಕಿನ ಸೋಮನಹಳ್ಳಿ ಬಳಿಯ ಅರಣ್ಯ ಇಲಾಖೆಯ ಆವರಣದಲ್ಲಿ ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಯಡಿ ಕಾಡಂಚಿನ ಗ್ರಾಮಗಳ ಫಲಾನುಭವಿಗಳಿಗೆ ರಿಫಿಲ್ಲಿಂಗ್ ಸಿಲಿಂಡರ್ ಗಳನ್ನು ವಿತರಿಸಿ ಮಾತನಾಡಿದರು.
ನಮ್ಮ ಪೂರ್ವಜರ ಕಾಲದಿಂದಲೂ ಅಡುಗೆಗೆ ಸೌದೆಯನ್ನೇ ಉಪಯೋಗಿಸಲಾಗುತ್ತಿತ್ತು. ನಮ್ಮ ತಾಯಂದಿರು ಅಡುಗೆ ಮನೆ ಸೇರಿ ಸೌದೆಯಿಂದ ಬರುವ ಹೊಗೆ ಸೇವಿಸಿ ನಾನಾ ರೋಗಗಳಿಂದ ಬಳಲುತ್ತಿದ್ದರು. ಕಾಲ ಬದಲಾದಂತೆ ನಾವೂ ಬದಲಾಗಬೇಕಿದ್ದು, ಅಡುಗೆಗೆ ಸೌದೆ ಬದಲು ಗ್ಯಾಸ್ ಬಳಸುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಕಟ್ಟಿಗೆಗೆ ಕಾಡನ್ನು ಕಡಿದು ನಾಶ ಮಾಡುವುದು ತಪ್ಪಿ. ಕಾಡನ್ನು ಉಳಿಸಿ ನಾಡನ್ನು ಉಳಿಸೋಣ ಎಂದು ಹೇಳಿದರು.
ಸೌದೆ ಬಳಸುವುದರಿಂದ ಪರಿಸರ ಕಲುಷಿತಗೊಳ್ಳುವುದರ ಜತೆಗೆ ಮರಗಿಡಗಳನ್ನು ಕಟ್ಟಿಗೆಗಾಗಿ ಕಡಿಯುವುದರಿಂದ ಕಾಡು ನಾಶವಾಗಿ ಕಾಲಕ್ಕೆ ತಕ್ಕಂತೆ ವಾಡಿಕೆ ಮಳೆೆ ಬೀಳದೆ, ಕೆಲವೊಮ್ಮೆ ಭೀಕರ ಬರಗಾಲ ಎದುರಿಸುವ ಅನಿವಾರ್ಯತೆ ಎದುರಾಗುತ್ತದೆ. ಅದನ್ನು ತಡೆಯಲು ಸರಕಾರ ಇಂತಹ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಇಲ್ಲಿಯವರೆಗೂ 40 ಮಂದಿಗೆ ಮಾತ್ರ ಈ ಸೌಲಭ್ಯ ಸಿಗುತ್ತಿತ್ತು. ಮುಂದಿನ ವರ್ಷದಿಂದ 80 ಮಂದಿ ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು ಎಂದರು.
ಕಾಡು ಇದ್ದರೆ ನಾಡು ಎನ್ನುವುದನ್ನು ಅರಿತು ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನರು ಮರಗಳನ್ನು ಕಡಿಯಬಾರದು. ಬದಲಾಗಿ ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರವನ್ನು ಉಳಿಸಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಗವಿಯಪ್ಪ, ಉಪ ವಲಯ ಅರಣ್ಯಾಧಿಕಾರಿಗಳಾದ ಮುರಳಿ ನಾಯಕ್, ಕಾಂತರಾಜ್, ಸವಿತಾ, ಚಿನ್ನಪ್ಪ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ರಾಜೇಂದ್ರ, ಮುಖಂಡರಾದ ಶಂಕರಲಿಂಗೇಗೌಡ, ಮಾದೇಶ್, ಸಿದ್ದರಾಜು, ಕುಮಾರ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ