ಶಿವಮೊಗ್ಗ: ರಕ್ತದಾನದ ಮೂಲಕ ಇನ್ನೊಬ್ಬರ ಜೀವ ಉಳಿಸಲು ಸಾಧ್ಯವಿದೆ. ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ರೋಟರಿ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರದ 7ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಂತ ಅವರು, ನಾನು ಆರಂಭದ ದಿನಗಳಲ್ಲಿ ನಮ್ಮ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿ ಅತಿಹೆಚ್ಚು ಯೂನಿಟ್ ರಕ್ತ ಸಂಗ್ರಹ ಮಾಡಿ ಕೊಟ್ಟಿದ್ದು ಇಂದಿಗೂ ನೆನಪಿದೆ ಎಂದು ನೆನಪು ಮಾಡಿಕೊಂಡರು.
ರಕ್ತದಾನ ಅತ್ಯಂತ ಶ್ರೇಷ್ಟವಾದ ಕೆಲಸ. ತುರ್ತು ಸಂದರ್ಭದಲ್ಲಿ ರಕ್ತ ಸಿಗದೆ ಸಾವುನೋವು ಸಂಭವಿಸಿದ ಅನೇಕ ಉದಾಹರಣೆ ಇದೆ. ಸಾಗರದಲ್ಲಿ ರೋಟರಿ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರ ಪ್ರಾರಂಭವಾಗಿದ್ದು ಹೆಚ್ಚು ಜನರಿಗೆ ಅನುಕೂಲವಾಗಿದೆ. ರಕ್ತದಾನದ ಬಗ್ಗೆ ಸಮಾಜ ಇನ್ನಷ್ಟು ಜಾಗೃತಿ ಹೊಂದುವ ಅಗತ್ಯವಿದೆ. ಗ್ರಾಮೀಣ ಭಾಗದ ಜನರಲ್ಲಿ ರಕ್ತದಾನದ ಬಗ್ಗೆ ಇರುವ ಭಯ ನಿವಾರಣೆ ಮಾಡಬೇಕು. ಏಳು ವರ್ಷಗಳಿಂದ ರೋಟರಿ ರಕ್ತನಿಧಿ ಕೇಂದ್ರ ಅನೇಕ ಜನರಿಗೆ ರಕ್ತದ ಅಗತ್ಯ ಪೂರೈಕೆ ಮಾಡಿ ಜೀವ ಉಳಿಸಿದ ಕೀರ್ತಿಗೆ ಭಾಜನವಾಗಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರದ ಅಧ್ಯಕ್ಷ ಡಾ. ಎಚ್.ಎಂ.ಶಿವಕುಮಾರ್, 2018ರಲ್ಲಿ ಪ್ರಾರಂಭವಾದ ನಮ್ಮ ಸಂಸ್ಥೆ ಈತನಕ 25ಸಾವಿರ ಯೂನಿಟ್ ರಕ್ತ ಸಂಗ್ರಹಿಸಿ, ವಿತರಣೆ ಮಾಡಿದೆ. ನಮ್ಮ ಕೇಂದ್ರಕ್ಕೆ ರಕ್ತದ ಅಗತ್ಯವಿದೆ ಎಂದು ಬಂದವರಿಗೆ ವಾಪಾಸ್ ಕಳಿಸಿದ ಉದಾಹರಣೆ ಇಲ್ಲ. ಸಂಸ್ಥೆಯ ಅಭಿವೃದ್ದಿಯಲ್ಲಿ ರಕ್ತದಾನಿಗಳ ಪಾತ್ರ ಪ್ರಮುಖವಾಗಿದೆ. ಇನ್ನಷ್ಟು ಜನರು ರಕ್ತದಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ವೆಂಕಟರಾವ್, ಡಾ. ನಿರಂಜನ ಹೆಗಡೆ, ಡಾ. ಬಿ.ಜಿ.ಸಂಗಮ್, ಡಾ. ನಾಗೇಂದ್ರಪ್ಪ, ಕೆ.ಸಿ.ಶಿವಪ್ಪ ನಾಯಕ್, ವಿಯಾನ್ ಕಾರ್ಣಿಕ್, ಗೌತಮ್ ಇನ್ನಿತರರು ಹಾಜರಿದ್ದರು.
ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ನ.19 ರಂದು `ಅಕ್ಕ ಪಡೆ’ಗೆ ಚಾಲನೆ.!








