ಬೆಂಗಳೂರು: ಸ್ಟಾಫ್ ನರ್ಸ್ ಒಬ್ಬರ ಗುತ್ತಿಗೆ ನವೀಕರಣಕ್ಕೆ ಲಂಚಕ್ಕೆ ಬೇಡಿಕೆಯನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಎಂ.ಜೆ ಕೃಷ್ಣ ಇಟ್ಟಿದ್ದರು. ಈ ಲಂಚಕ್ಕೆ ಬೇಡಿಕೆಯಿಟ್ಟಿದ್ದಂತ ಆಡಿಯೋ ಕೂಡ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ವೈದ್ಯ ಡಾ.ಎಂ.ಜೆ ಕೃಷ್ಣ ಅವರನ್ನು ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆದೇಶಿಸಿದೆ.
ಇಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಶಿಸ್ತು ಪ್ರಾಧಿಕಾರ ಹಾಗೂ ಆಯುಕ್ತರಾದಂತ ಶಿವಕುಮಾರ್ ಕೆ.ಬಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ
ಡಾ|| ಎಂ.ಜೆ. ಶ್ರೀ ಕೃಷ್ಣ ಇವರು ಈ ಹಿಂದೆ ಪ್ರಾ.ಆ.ಕೇಂದ್ರ, ಜೂಲಪಾಳ್ಯ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಎಸಗಿದ ಕರ್ತವ್ಯ ಲೋಪ ಮತ್ತು ದುರ್ನಡತೆ ಆರೋಪಕ್ಕೆ ಸಂಬಂಧಿಸಿದ ದೂರಿನ ಮೇರೆಗೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಪ್ರಾ.ಆ.ಕೇಂದ್ರ, ಜವನಗೊಂಡನಹಳ್ಳಿ, ಹಿರಿಯೂರು ತಾ|| ಚಿತ್ರದುರ್ಗ ಜಿಲ್ಲೆ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿ ಆಯುಕ್ತಾಲಯದಿಂದ ಆದೇಶಿಸಲಾಗಿರುತ್ತದೆ. ವೈದ್ಯರು ದಿನಾಂಕ: 21-09-2022 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಜವನಗೊಂಡನಹಳ್ಳಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇಲ್ಲಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ.
ಸದರಿ ವೈದ್ಯರು ಪ್ರಾ.ಆ.ಕೇಂದ್ರ, ಜವನಗೊಂಡನಹಳ್ಳಿ, ಇಲ್ಲಿಗೆ ದೈನಂದಿನ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗದೇ ಗೈರು ಹಾಜರಾಗುತ್ತಿದ್ದು, ವೈದ್ಯರು ಸಾರ್ವಜನಿಕ ಸೇವೆಯಲ್ಲಿದ್ದು, ಜನ ಪ್ರತಿನಿಧಿಗಳ ಜೊತೆಯಲ್ಲಿ ಗೌರವಯುತವಾಗಿ ವರ್ತಿಸದೇ ಇರುವುದು, ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಬಾರದೇ ಇರುವುದು, ಪದೇ ಪದೇ ಗೈರು ಹಾಜರಿಯಾಗುತ್ತಿರುವುದು ಹಾಗೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಬೇಜವಾಬ್ದಾರಿತನ ತೋರುತ್ತಿರುವುದು ಕಂಡು ಬಂದಿರುತ್ತದೆ, ಅಲ್ಲದೆ ವೈದ್ಯರ ವಿರುದ್ಧ ದಿನಾಂಕ 30-06-2025 ರಂದು ವಿಜಯ ಕರ್ನಾಟಕ ಕನ್ನಡ ದಿನ ಪತ್ರಿಕೆಯಲ್ಲಿ ವೈದ್ಯರ ಲಂಚ ಬೇಡಿಕೆ ಆಡಿಯೋ ವೈರಲ್ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟವಾಗಿದ್ದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು ಇವರು ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮ 1983 ಕಲಂ 12 ಅಡಿಯಲ್ಲಿ ಸ್ವಯಂ ಪ್ರೇರಿತವಾಗಿ ದೂರು ಅರ್ಜಿ ದಾಖಲಿಸಿಕೊಂಡಿರುವುದಾಗಿ ಇದರಿಂದ ಸಾರ್ವಜನಿಕರಲ್ಲಿ ಜಿಲ್ಲಾ ಆಡಳಿತದ ಹಾಗೂ ಆರೋಗ್ಯ ಇಲಾಖೆಯ ಕುರಿತು ಸಾರ್ವಜನಿಕರಲ್ಲಿ ಸದಾಭಿಪ್ರಾಯ ಇಲ್ಲದೇ ಇರುವುದು ಕಂಡು ಬಂದಿರುತ್ತದೆ ಎಂದು ಈ ಹಿನ್ನಲೆಯಲ್ಲಿ ವೈದ್ಯರ ಸೇವೆಯು ಈ ಜಿಲ್ಲೆಯಲ್ಲಿ ಅವಶ್ಯಕತೆ ಇಲ್ಲವೆಂದು ಭಾವಿಸಿ ಸದರಿ ವೈದ್ಯರನ್ನು ಪ್ರಾ.ಆ.ಕೇಂದ್ರ, ಜವನಗೊಂಡನಹಳ್ಳಿ, ಹಿರಿಯೂರು ತಾ|| ಚಿತ್ರದುರ್ಗ ಜಿಲ್ಲೆ ಇಲ್ಲಿಯ ಕರ್ತವ್ಯದಿಂದ ದಿನಾಂಕ: 15-07-2025 ರಂದು ಬಿಡುಗಡೆಗೊಳಿಸಲಾಗಿರುತ್ತದೆ ಎಂದು ಉಲ್ಲೇಖ(1)ರಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದು, ಆದರೆ ವೈದ್ಯರು ಇದುವರೆವಿಗೂ ಆಯುಕ್ತಾಲಯದಲ್ಲಿ ವರದಿ ಮಾಡಿಕೊಂಡಿರುವುದಿಲ್ಲ.
“ವೈದ್ಯರ ಲಂಚ ಬೇಡಿಕೆ ಆಡಿಯೋ ವೈರಲ್” ಎಂಬ ಶೀರ್ಷಿಕೆಯಡಿಯಲ್ಲಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವ ಪ್ರಕರಣಕ್ಕೆ ಪೂರಕವಾಗಿ, ಲೋಕಾಯುಕ್ತದಿಂದ ಉಲ್ಲೇಖ(2)ರಲ್ಲಿ ಸಲ್ಲಿಸಿರುವ ವರದಿಯಲ್ಲಿ, ವೈದ್ಯರು ಶ್ರೀಮತಿ ಲತಾ ಎಂ ಬಿನ್ ಮೋಹನ್ ಕೃಷ್ಣ, ಸ್ಯಾಫ್ ನರ್ಸ್ (ಗುತ್ತಿಗೆ ನೌಕರರು) ಇವರಿಗೆ Performance Apparaisal Form ಭರ್ತಿ ಮಾಡಿ, ಸಹಿ ಮಾಡಲು ಹಣಕ್ಕಾಗಿ ಬೇಡಿಕೆ ಇಟ್ಟಿರುವ ಆಡಿಯೋ ಸಂಭಾಷಣೆಯಲ್ಲಿನ ಧ್ವನಿಯು ಸದರಿ ವೈದ್ಯರದೇ ಎಂದು ಮೇಲಧಿಕಾರಿಗಳು ದೃಢಪಡಿಸಿರುತ್ತಾರೆ ಎಂದು, ಸದರಿಯವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತಿನಲ್ಲಿಡಲು ಹಾಗೂ ಅವರ ಲೀನ್ ಬದಲಾಯಿಸುವಂತೆ ಕೋರಿರುತ್ತಾರೆ.
ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆ ಮತ್ತು ಪೊಲೀಸ್ ಮಹಾನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರಿಂದ ಸಲ್ಲಿಕೆಯಾದ ಪ್ರಸ್ತಾವನೆಯನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 10 (3)ರಡಿ ಕೂಲಂಕುಷವಾಗಿ ಪರಿಶೀಲಿಸಲಾಗಿದೆ.
ವೈದ್ಯರ ವಿರುದ್ಧ ಈಗಾಗಲೇ ಪ್ರಾ.ಆ.ಕೇಂದ್ರ, ಜೂಲಪಾಳ್ಯ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಸಗಿದ ಕರ್ತವ್ಯ ಲೋಪ ಮತ್ತು ದುರ್ನಡತೆ ಆರೋಪವು ಮೇಲ್ನೋಟಕ್ಕೆ ಸಾಬೀತಾದುದರಿಂದ ವೈದ್ಯರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ ಚಿತ್ರದುರ್ಗ ಜಿಲ್ಲೆಗೆ ವರ್ಗಾಯಿಸಲಾಗಿದ್ದು, ಆದರೆ ವೈದ್ಯರು ಸದರಿ ಜಿಲ್ಲೆಯಲ್ಲಿಯೂ ಸಹ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳದೆ ಪದೇ-ಪದೇ ಕರ್ತವ್ಯ ಲೋಪಗಳನ್ನು ಎಸಗುತ್ತಿರುವುದಲ್ಲದೆ, ಹಣಕ್ಕಾಗಿ ಬೇಡಿಕೆ ಇಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಸದರಿ ಈ ಆರೋಪಗಳ ಕುರಿತಾದ ಪಕರಣಗಳಿಗೆ ಸಂಬಂಧಿಸಿದ ಇಲಾಖಾ ವಿಚಾರಣೆ ಹಾಗೂ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಗೆ ಅಡ್ಡಿ ಉಂಟುಮಾಡುವ ಅಥವಾ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಹಾಗೂ ಸಾಕ್ಷಿ ಪುರಾವೆಗಳನ್ನು ನಾಶಗೊಳಿಸುವ ಸಾಧ್ಯತೆಗಳಿರುವುದರಿಂದ ಪ್ರಕರಣದ ನಿಷ್ಪಕ್ಷಪಾತವಾದ ತನಿಖೆಗೆ ಸದರಿಯವರನ್ನು ಸೇವೆಯಿಂದ ಅಮಾನತ್ತುಗೊಳಿಸುವುದು ಸೂಕ್ತವಾಗಿರುತ್ತದೆ ಎಂದು ನಿರ್ಣಯಿಸಲಾಗಿದೆ. ಆದುದರಿಂದ ಈ ಕೆಳಕಂಡಂತೆ ಆದೇಶಿಸಿದ್ದಾರೆ.
ಪ್ರಸ್ತಾವನೆಯಲ್ಲಿ ವಿವರಿಸಲಾದ ಕಾರಣಗಳಿಗಾಗಿ ಶಿವಕುಮಾರ್ ಕೆ.ಬಿ., ಭಾ.ಆ.ಸೇ., ಆಯುಕ್ತರು, ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಆದ ನಾನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957 ರ ನಿಯಮಗಳ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಡಾ|| ಎಂ.ಜೆ. ಶ್ರೀ ಕೃಷ್ಣ, ಪ್ರಾ.ಆ.ಕೇಂದ್ರ, ಜವನಗೊಂಡನಹಳ್ಳಿ, ಹಿರಿಯೂರು ತಾ|| ಚಿತ್ರದುರ್ಗ ಜಿಲ್ಲೆ ಇವರನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 10 (1) (ಡಿ)ರಡಿ ಈ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿರುತ್ತೇನೆ. ಸದರಿ ವೈದ್ಯರು ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದ ಕೇಂದ್ರ ಸ್ಥಾನವನ್ನು ಬಿಡತಕ್ಕದಲ್ಲ ಎಂದು ತಿಳಿಸಿದೆ ಹಾಗೂ ಜೀವನಾಂಶ ಭತ್ಯೆಯನ್ನು ಸೆಳೆಯುವ ಸಲುವಾಗಿ ಸದರಿಯವರ ಲೀನ್ ಅನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಇಂಗಳಗಿ, ಕುಂದಗೋಳ, ಧಾರವಾಡ ಜಿಲ್ಲೆ ಇಲ್ಲಿಗೆ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಸೆ.22ರಿಂದ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭ: ಈ ದಾಖಲೆ ರೆಡಿ ಇಟ್ಟುಕೊಟ್ಟಿ
ಸಾಗರ ತಾಲ್ಲೂಕನ್ನು ನೂತನ ಜಿಲ್ಲೆಯಾಗಿ ಮಾಡಿ: ಸಿಎಂ ಸಿದ್ಧರಾಮಯ್ಯಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ