ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಅಂಗವಾಗಿ ನಾಡಿನೆಲ್ಲೆಡೆ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ. ಇಂದು ಮೈಸೂರು ಅರಮನೆಯಲ್ಲಿ ಶರನ್ನವರಾತ್ರಿ ಅಂಗವಾಗಿ ಸಾಂಪ್ರದಾಯಿಕ ಆಯುಧ ಪೂಜೆ ನಡೆಯಲಿದೆ. ಈ ಒಂದು ಆಯುಧ ಪೂಜೆಯನ್ನು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಡೆಸಲಿದ್ದಾರೆ. ರಾಜ ಪರಂಪರೆಯಂತೆ ಶುಕ್ರವಾರ ಬೆಳಗ್ಗೆ ಯದುವೀರ್, ದುರ್ಗಾಷ್ಟಮಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ 6ಕ್ಕೆ ಚಾಮುಂಡಿ ತೊಟ್ಟಿಯಲ್ಲಿ ಚಂಡಿಕಾ ಹೋಮ ನಡೆಯಲಿದೆ. ಆ ವೇಳೆಗೆ ಆನೆ ಬಾಗಿಲಿಗೆ ಪಟ್ಟದ ಹಸು ಆಗಮನವಾಗುತ್ತದೆ. ಬೆಳಗ್ಗೆ 6.40ರಿಂದ 7.10ರ ಸಮಯದಲ್ಲಿ ಅರಮನೆ ಕಲ್ಯಾಣ ಮಂಟಪದಿಂದ ಆನೆ ಬಾಗಿಲಿನ ಮೂಲಕ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಅವುಗಳನ್ನು ಸ್ವಚ್ಛಗೊಳಿಸಿ 7.30ರಿಂದ 8 ಗಂಟೆಯವರೆಗೆ ಕಲ್ಯಾಣ ಮಂಟಪಕ್ಕೆ ತರಲಾಗುತ್ತದೆ.
ಬೆಳಗ್ಗೆ 9.05ಕ್ಕೆ ಚಂಡಿಕಾ ಹೋಮ, ಪೂರ್ಣಾಹುತಿ ಆದ ಬಳಿಕ ಮಧ್ಯಾಹ್ನ 12.20ರಿಂದ 12.45ರವರೆಗೆ ಕಲ್ಯಾಣ ಮಂಟಪದಲ್ಲಿ ಯದುವೀರ್ ಆಯುಧಗಳಿಗೆ ಪೂಜೆ ಸಲ್ಲಿಸುವರು. ಬಳಿಕ ಆನೆ ತೊಟ್ಟಿಯಲ್ಲಿ ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಆನೆ, ಪಲ್ಲಕ್ಕಿ ಹಾಗೂ ರಾಜರು ಬಳಸುವ ದುಬಾರಿ ಬೆಲೆಯ ಕಾರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಅಲ್ಲಿಗೆ ನವರಾತ್ರಿಯ ಒಂಭತ್ತನೇ ದಿನದ ಆಯುಧ ಪೂಜೆ ಕೊನೆಗೊಳ್ಳುತ್ತದೆ.