ಬೆಂಗಳೂರು : ಸುಮಾರು ಆರು ದಶಕಗಳ ಕಾಲ ಕನ್ನಡ ಚಿತ್ರರಂಗ ಸೇರಿದಂತೆ ತೆಲುಗು ತಮಿಳು ಹಿಂದಿ ಭಾಷೆಯಲ್ಲೂ ಕೂಡ ತಮ್ಮ ಅಭಿನಯದ ಮೂಲಕ ಛಾಪು ಮೂಡಿಸಿದ್ದ, ಬಹುಭಾಷಾ ನಟಿ ಬಿ.ಸರೋಜಾದೇವಿ ಇಂದು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಇಂದು ಸಾಯಂಕಾಲ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಒಕ್ಕಲಿಗರ ಸಂಪ್ರದಾಯದಂತೆ ನಾಳೆ ಬೆಳಿಗ್ಗೆ 11:30 ಕ್ಕೆ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಇದೀಗ ಬಿ.ಸರೋಜದೇವಿ ಅವರು ನಿಧನರಾಗೋದಕ್ಕು ಮುನ್ನ ಅಂತಿಮ ಕ್ಷಣ ಹೇಗಿತ್ತು ಅನ್ನೋದು, ಅವರ ಮ್ಯಾನೇಜರ್ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಇಂದು ಬೆಳಿಗ್ಗೆ ನಟಿ ಎಂದಿನಂತೆ ಪೂಜೆ ಸಲ್ಲಿಸಿ ಕುಳಿತುಕೊಂಡಾಗ ಅಸ್ವಸ್ಥಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ನಿಧನರಾಗಿರುವುದು ತಿಳಿಯಿತು ಎಂದಿದ್ದಾರೆ. ‘ಸರೋಜಾದೇವಿ ಅವರು ದಿನವೂ ಎದ್ದ ತಕ್ಷಣ ಪತ್ರಿಕೆ ಓದುತ್ತಿದ್ದರು. ಬಳಿಕ ಸ್ನಾನ ಮಾಡಿ ಪೂಜೆ ಮಾಡುತ್ತಿದ್ದರು.
ಅದಾದ ಮೇಲಷ್ಟೇ ಉಪಾಹಾರ ಸೇವಿಸುತ್ತಿದ್ದರು. ಇಂದು ಕೂಡ ಪೂಜೆ ಮಾಡಿ ಟಿವಿ ಆನ್ ಮಾಡಿದ್ದರಷ್ಟೇ. ಆಗಲೇ ತುಂಬಾ ಸುಸ್ತಾದಂತೆ ಕಂಡರು. ಅಲ್ಲಿಯೇ ಕುಸಿದರು. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. ನಟಿಯ ತಾಯಿಯನ್ನು ಎಲ್ಲಿ ಮಣ್ಣು ಮಾಡಲಾಗಿದೆಯೋ ಅಲ್ಲೇ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಚತುರ್ಭಾಷಾ ನಟಿ ಬಿ.ಸರೋಜಾದೇವಿ ಇಂದು ಬೆಳಿಗ್ಗೆ ಉಸಿರು ನಿಲ್ಲಿಸಿದ್ದಾರೆ. ತಮ್ಮ ಮಾತನಾಡುವ ಕಣ್ಣುಗಳಿಂದಲೇ ಕೋಟ್ಯಂತರ ಜನರ ಮನಗೆದ್ದ ನಟಿ ಏಳು ದಶಕಗಳವರೆಗೆ ಚಿತ್ರರಂಗವನ್ನು ಆಳಿದ ಕಲಾವಿದೆ. 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಅವರು, 2019ರಲ್ಲಿ ಬಿಡುಗಡೆಗೊಂಡ ಪುನೀತ್ ರಾಜ್ಕುಮಾರ್ ನಟನೆಯ ನಟ ‘ಸಾರ್ವಭೌಮ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ವಿದಾಯ ಹೇಳಿದ್ದರು. 7 ಜನವರಿ 1938ರಲ್ಲಿ ಹುಟ್ಟಿದ್ದ ನಟಿಗೆ ಈಗ 87 ವರ್ಷ ವಯಸ್ಸಾಗಿತ್ತು. ತುಂಬು ಜೀವನ ನಡೆಸಿದ ನಟಿಯನ್ನೀಗ ಸಿನಿಮಾ ಇಂಡಸ್ಟ್ರಿ ಕಳೆದುಕೊಂಡಿದೆ.