ಬೆಂಗಳೂರು: ಗೃಹ ಬಳಕೆಗೆ ಪಡೆದ ವಿದ್ಯುತ್ ಸಂಪರ್ಕವನ್ನು ವಾಣಿಜ್ಯ ಹಾಗೂ ಬೇರೆ ಉದ್ದೇಶಗಳಿಗೆ ಬಳಸಬಾರದು ಎಂದು ಬೆಸ್ಕಾಂ ತನ್ನ ಗ್ರಾಹಕರಿಗೆ ಮನವಿ ಮಾಡಿದೆ.
ಗೃಹ ಬಳಕೆಗೆ ಪಡೆದ (ಎಲ್‌ಟಿ 1) ವಿದ್ಯುತ್ ಸಂಪರ್ಕವನ್ನು ಕೆಲವು ಗ್ರಾಹಕರು ಅಂಗಡಿ-ಮುಂಗಟ್ಟು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು, ಅತಿಥಿ ಗೃಹಗಳು, ಮೆಸ್, ಸರ್ವೀಸ್ ಅಪಾರ್ಟ್ ಮೆಂಟ್, ಪೇಯಿಂಗ್ ಗೆಸ್ಟ್, ಕಚೇರಿ ಮುಂತಾದ ಉದ್ದೇಶಗಳಿಗೆ (ಎಲ್‌ಟಿ 1 ಸಂಪರ್ಕ) ಅನಧಿಕೃತವಾಗಿ ಬಳಸುತ್ತಿರುವುದು ಬೆಸ್ಕಾಂ ಗಮನಕ್ಕೆ ಬಂದ್ದಿದ್ದು, ಇಂತಹ ಸಂಪರ್ಕಗಳನ್ನು ತಕ್ಷಣವೇ ಕಡಿತಗೊಳಿಸಿ ಕಾನೂನು ಕ್ರಮ ಜರಗಿಸಲಾಗುವುದು ಎಂದು ಬೆಸ್ಕಾಂ ಎಚ್ಚರಿಸಿದೆ.
ಗೃಹ ಬಳಕೆಯ ಉದ್ದೇಶಕ್ಕೆ ಪಡೆದ ವಿದ್ಯುತ್ ಸಂಪರ್ಕವನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿರುವ ಗ್ರಾಹಕರು, ತಕ್ಷಣವೇ ಬೆಸ್ಕಾಂ ಉಪ ವಿಭಾಗ ಕಚೇರಿಗೆ ಭೇಟಿ ನೀಡಿ ಸಮರ್ಪಕ ವಿದ್ಯುತ್ ದರ ವರ್ಗದ (tariff category) ಬದಲಾವಣೆಗೆ ಅರ್ಜಿ ಸಲ್ಲಿಸಿ ಸಂಪರ್ಕವನ್ನು ನಿಯಮಾನುಸಾರ ಪಡೆಯುವಂತೆ ಬೆಸ್ಕಾಂ ವಿನಂತಿಸಿದೆ.
ಉತ್ಸವ, ಹಬ್ಬ, ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಕೂಡ ಗೃಹ ಬಳಕೆಯ ವಿದ್ಯುತ್ ಸಂಪರ್ಕವನ್ನು ಬಳಸಿಕೊಳ್ಳದೆ, ಸಂಬಂಧಿತ ಉಪ ವಿಭಾಗ ಕಚೇರಿಗೆ ಅರ್ಜಿ ಸಲ್ಲಿಸಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ಬೆಸ್ಕಾಂ ಗ್ರಾಹಕರಿಗೆ ಮನವಿ ಮಾಡಿದೆ.
ಗೃಹ ಬಳಕೆಯ ವಿದ್ಯುತ್ ಸಂಪರ್ಕವನ್ನು ಅನ್ಯ ಉದ್ದೇಶಗಳಿಗೆ ಬಳಸುವವರ ವಿರುದ್ಧ ವಿದ್ಯುತ್ ಅಧಿನಿಯಮ, 2003ರ ಕಲಂ 126 ಮತ್ತು 135 ಹಾಗೂ ವಿದ್ಯುತ್ ಸರಬರಾಜು ನಿಯಮಗಳ ಕಲಂ 42 ಮತ್ತು ಅದರ ಉಪಕಲಂಗಳ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಸ್ಕಾಂ ಎಚ್ಚರಿಸಿದೆ.








