ಗದಗ : ಇತ್ತೀಚಿಗೆ ಕೋಡಿ ಮಠದ ಶ್ರೀಗಳು ರಾಜ್ಯ ರಾಜಕಾರಣದ ಬಗ್ಗೆ ಸ್ಪೋಟಕವಾದ ಭವಿಷ್ಯ ನುಡಿದಿದ್ದರು. ಮುಂದಿನ ಸಂಕ್ರಾಂತಿಯವರಿಗೆ ಸಿಎಂ ಸಿದ್ದರಾಮಯ್ಯ ಅವರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಇದೀಗ ನೊಣವಿನಕೆರೆ ಶ್ರೀಗಳು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಯೇ ಮಾಡುತ್ತೇವೆ ಎಂದು ಶಪಥ ಮಾಡಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಿ, ಅವರಿಂದಲೇ ಲಕ್ಷ್ಮೀಶ್ವರ ತಾಲ್ಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪಿಸುವೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಶಿವಾಚಾರ್ಯರ ಸ್ವಾಮೀಜಿ ಹೇಳಿದರು.
ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿಸುವುದು ಶತಸಿದ್ದ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹೇಳಿದ್ದನ್ನೇ ಮತ್ತೊಮ್ಮೆ ಹೇಳಿರುವೆ. ಲಿಂ. ವೀರಗಂಗಾಧರ ಜಗದ್ಗುರು ಮೇಲೆ ಅಪಾರ ಭಕ್ತಿ ನಂಬಿಕೆ ಹೊಂದಿರುವ ಶಿವಕುಮಾರ್ ಅವರು ನನೆಗುದಿಗೆ ಬಿದ್ದಿರುವ ತ್ರಿಕೋಟಿ ಲಿಂಗ ಸ್ಥಾಪನೆಗೆ ಬೇಕಾದ ಕೋಟ್ಯಂತರ ರೂಪಾಯಿ ಅನುದಾನ ಕಲ್ಪಿಸಿದ್ದಾರೆ. ಆದಷ್ಟು ಬೇಗ ಶಿವಕುಮಾರ ಮುಖ್ಯಮಂತ್ರಿ ಆಗುವರು ಎಂದು ಅವರು ಹೇಳಿದರು.
ಈ ಹಿಂದೆ ಯಾದಗಿರಿಯಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗಲು ಯೋಗ್ಯವಾದ ವ್ಯಕ್ತಿ. ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಸಂಕಲ್ಪವಿದೆ. ಡಿಕೆ ಸಿಎಂ ಆಗಬೇಕೆಂಬುದು ನಮ್ಮ ಮಠದ ಆಶೀರ್ವಾದವೂ ಇದೆ. ಒಂದು ದಿನ ಡಿಕೆಸಿಎಂ ಆಗುತ್ತಾರೆಂದು ನಾವು ಹರಸುತ್ತಾ ಇದ್ದೇವೆ. ಡಿಕೆಶಿ ಸಿಎಂ ಆಗುವುದು ದಿನಗಳಲ್ಲಿ ಹೇಳೋಕೆ ಆಗುವುದಿಲ್ಲ. ಡಿಕೆಶಿ ಸಿಎಂ ಆಗುವುದು ಎಲ್ಲರ ಸಂಕಲ್ಪವಾಗಿದೆ ಎಂದು ಯಾದಗಿರಿಯ ಅಬ್ಬೆತುಮಕೂರಲ್ಲಿ ನೊಣವಿನಕೆರೆಯ ಸ್ವಾಮೀಜಿ ಭವಿಷ್ಯ ನುಡಿದಿದ್ದರು.