ಕಲಬುರ್ಗಿ : ಡಿಸಿಎಂ ಡಿ.ಕೆ. ಶಿವಕುಮಾರ್ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನನಗಿಂತ ಮೊದಲೇ ಸುಪ್ರೀಂ ಕೋರ್ಟ್ ಗೆ ಹೋಗಬೇಕಿತ್ತು, ತಡ ಮಾಡಿದ್ದಾರೆ. ಮುಖ್ಯವಾಗಿ ನನಗೆ ಸುಪ್ರೀಂ ಕೋರ್ಟ್ ನಲ್ಲಿ ಟಾಪ್ ವಕೀಲರು ಸಿಗದಂತೆ ಮಾಡಿದ್ದು, ಟಾಪ್ 17 ವಕೀಲರನ್ನು ಡಿಕೆ ಶಿವಕುಮಾರ್ ಎಂಗೇಜ್ ಮಾಡಿ ಬಿಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ಇಂದು ಕಲಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಬಿಐ ತಡ ಮಾಡಿದರೂ ನಾನು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ಹೋರಾಡುತ್ತಿದ್ದು, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಪ್ರಕರಣ ಗೆದ್ದೇ ಗೆಲ್ಲುತ್ತೇನೆ ಎಂದು ಅವರು ತಿಳಿಸಿದರು.ಇನ್ನು ನೊಣವಿನಕೆರೆಯ ಸ್ವಾಮೀಜಿಗಳು ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುತ್ತೇನೆ ಎಂಬ ಹೇಳಿಕೆಗೆ ಸ್ವಾಮಿಗಳು ದಕ್ಷಿಣೆ ಹೆಚ್ಚು ಕೊಟ್ಟವರ ಪರ ಹೇಳಿಕೆ ನೀಡುತ್ತಾರೆ ಎಂದು ಟಾಂಗ್ ನೀಡಿದರು.
ಈ ಹಿಂದೆ ಕೆಲವು ಸಾಹಿತಿಗಳು ಪ್ರಶಸ್ತಿ ವಾಪಸ್ಸು ಕೊಡೋದು ಶುರುವಾಗಿತ್ತು. ಅದೇ ತೆರನಾಗಿ ಸಿಎಂ ಪತ್ನಿ ಹಾಗೂ ಎಐಸಿಸಿ ಅಧ್ಯಕ್ಷರ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಸೈಟು ಜಮೀನು ವಾಪಾಸ್ ಕೊಟ್ಟಿದ್ದಾರೆ. ಪ್ರಶಸ್ತಿ ವಾಪಸ್ಸು ಕೊಟ್ಟವರೆಲ್ಲರು ಕಳ್ಳರು. ವಾಪಾಸ್ ಕೊಟ್ಟವರು ಒಳ್ಳೆ ಮನುಷ್ಯರಲ್ಲ. ಅಕ್ರಮವಾಗಿ ತೆಗೆದುಕೊಂಡಿದ್ದಾರೆ. ಅಕ್ರಮವಾಗಿ ತೆಗೆದುಕೊಂಡಿಲ್ಲ ಎಂದಾದ ಮೇಲೆ ವಾಪಸ್ಸು ಯಾಕೆ ಕೊಟ್ಟರು. ಅವರು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಿತ್ತು? ಖರ್ಗೆ ಮಗನನ್ನು ಮತ್ತು ಸಿದ್ದರಾಮಯ್ಯನ ತೆಗೆಯೋ ಧೈರ್ಯ ಕಾಂಗ್ರೆಸ್ ನಲ್ಲಿ ಯಾರಿಗೂ ಇಲ್ಲ ಎಂದರು.