ದಕ್ಷಿಣಕನ್ನಡ : ರಾಜ್ಯದಲ್ಲಿ ಎದುರಾದ ದರ ಬಿಸಿ ಏರಿಕೆ ನಡುವೆ ಕೆಎಂಎಫ್ ಕೂಡ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಹಾಲಿನ ಪ್ರಮಾಣವನ್ನ ಹೆಚ್ಚಿಸೋದ್ರ ಜೊತೆಗೆ ದರವನ್ನೂ ಏರಿಸಿದೆ. ಒಂದು ಲೀಟರ್ ಬದಲಿಗೆ 1050 ಎಂಎಲ್ನ ಪ್ಯಾಕೆಟ್ ಹಾಲು ಸಿಗಲಿದೆ. 50 ಎಂಲ್ ಹಾಲಿನ ಪ್ಯಾಕೆಟ್ಗೆ 2 ರೂಪಾಯಿ ದರ ಏರಿಸಲಾಗಿದೆ. ನಾಳೆಯಿಂದಲೇ ಈ ಪರಿಷ್ಕೃತ ದರ ಜಾರಿಗೆ ಬರಲಿದೆ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಾಲಿನ ದರ ಏರಿಕೆ ಕುರಿತು ಸಮರ್ಥಿಸಿಕೊಂಡಿದ್ದು, ನೀರಿನ ಬೆಲೆಯು ಲೀಟರ್ಗೆ 25 ರೂಪಾಯಿ ಆಗಿದೆ. ಹಾಲಿನ ಬೆಲೆ ಜಾಸ್ತಿ ಮಾಡಬೇಕೆಂದು ರೈತರ ಒತ್ತಡವಿತ್ತು. ಹಾಗಾಗಿ ರೈತರ ಒತ್ತಾಯದ ಮೇಲೆ ಈ ಕ್ರಮ ಕೈಗೊಂಡಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಹಾಲಿನ ದರ ಏರಿಕೆ ಮಾಡುವುದು ಸರ್ಕಾರ ಅಲ್ಲ, ಕೆಎಂಎಫ್. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಇದೆ. ಹಾಲಿನ ದರ ಹೆಚ್ಚಳ ಬಗ್ಗೆ ಚರ್ಚೆ ಮಾಡ್ತೀನಿ.ಬೇರೆ ರಾಜ್ಯಗಳ ಪರಿಸ್ಥಿತಿ ನೋಡಿಕೊಂಡು ದರ ಹೆಚ್ಚಳ ಮಾಡ್ತಾರೆ. ಅಲ್ಲಿಗಿಂತ ಹಾಲಿನ ದರ ಕಡಿಮೆ ಇದ್ದರೆ ಜಾಸ್ತಿ ಮಾಡ್ತಾರೆ. ನನಗೆ ಗೊತ್ತಿರುವ ಪ್ರಕಾರ ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಇಲ್ಲಿ ಕಡಿಮೆ ಇದೆ ಎಂದು ತಿಳಿಸಿದರು.