ಬೆಂಗಳೂರು : 2024-25 ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ನೀಡಿರುವ ಸುತ್ತೋಲೆಯಂತೆ ವಾರದ ಆರು ದಿನಗಳಂದು ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರವನ್ನು ಸಮರ್ಪಕವಾಗಿ ವಿತರಿಸದೇ, ತಮ್ಮದೇ ಆದ ವಿಧಾನವನ್ನು ಅನುಸರಿಸಿರುವ ಶಾಲಾ ಎಸ್.ಡಿ.ಎಂ.ಸಿ.ರವರಿಗೆ ಸೂಕ್ತ ತಿಳುವಳಿಕೆ ನೀಡುವ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಿತ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿರುವಂತೆ, 2024-25ನೇ ಸಾಲಿನಿಂದ ಸೆಪ್ಟೆಂಬರ್ 2024 ರಿಂದ ಉಲ್ಲೇಖಿತ (1)ರ ಶಾಲಾ ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಅನುಷ್ಠಾನಗೊಳಿಸಿರುವಂತೆ, ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1-10ನೇ ತರಗತಿ ವಿದ್ಯಾರ್ಥಿಗಳಿಗೆ ವಾರದ ಆರು ದಿನಗಳಂದು ಪೂರಕ ಪೌಷ್ಟಿಕ ಆಹಾರವಾಗಿ ಮೊಟ್ಟೆ, ಮೊಟ್ಟೆ ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ವಿತರಿಸಲಾಗುತ್ತಿದೆ.
ಆದರೆ, ರಾಜ್ಯದ ಕೆಲವು ಶಾಲೆಗಳಲ್ಲಿ ಎಸ್.ಡಿ.ಎಂ.ಸಿ. ರವರು ಸಭೆ ನಡೆಸಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನಗಳು ಮೊಟ್ಟೆ, ಉಳಿದ ಮೂರು ದಿನ ಬಾಳೆಹಣ್ಣು ವಿತರಣೆ ಮಾಡುವ ಬಗ್ಗೆ, ಇನ್ನೂ ಕೆಲವು ಶಾಲೆಗಳಲ್ಲಿ ಸೋಮವಾರ, ಶನಿವಾರದಂದು ಮೊಟ್ಟೆ ವಿತರಣೆ ಮಾಡದೇ ಬಾಳೆಹಣ್ಣು ವಿತರಣೆ ಮಾಡಲು ನಿರ್ಣಯಿಸಿರುವುದು, ಪೋಷಕರ ಒಪ್ಪಿಗೆ ಪತ್ರ ಪಡೆದಿದ್ದಾಗೂ ಸಹ ವಾರದ ಆರೂ ದಿನಗಳಂದು ಮೊಟ್ಟೆ ಸ್ವೀಕರಿಸುವ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸದೇ ಬಾಳೆಹಣ್ಣು ವಿತರಿಸುವ ಬಗ್ಗೆ ಏಕಪಕ್ಷೀಯವಾಗಿ ನಿರ್ಣಯಿಸಿರುವುದು, ಇಲಾಖೆಯ ಸೂಚನೆಗಳನ್ನು ಎಸ್.ಡಿ.ಎಂ.ಸಿ.ರವರು ಕೈಬಿಟ್ಟಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ.
ಮುಂದುವರೆದು, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ: 07.07.2025 ರಂದು ಈ ಕಛೇರಿಯಿಂದ ಜ್ಞಾಪನವನ್ನು (ಉಲ್ಲೇಖ-3) ಹೊರಡಿಸಿದ್ದು,ಸಂಬಂಧಿಸಿದ ಜಿಲ್ಲಾ ಮತ್ತು ತಾಲ್ಲೂಕು ಹಂತದ ಅನುಷ್ಠಾನಾಧಿಕಾರಿಗಳಿಗೆ ಇ-ಮೇಲ್ ಮೂಲಕ ದಿನಾಂಕ:07.07.2025 ರಂದು ಜ್ಞಾಪನವನ್ನು ಕಳುಹಿಸಲಾಗಿದೆ. ಸದರಿ ಜ್ಞಾಪನಕ್ಕೆ ತೆಗೆದುಕೊಂಡಿರುವ ಕ್ರಮದ ಕುರಿತು ಜಿಲ್ಲೆಗಳಿಂದ ದಿನಾಂಕ:15.07.2025 ರ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೂ ಇದುವರೆಗೂ ಯಾವುದೇ ಅಧಿಕಾರಿಗಳಿಂದ ಈ ಕುರಿತು ಕಛೇರಿಗೆ ವರಿದಿಗಳನ್ನು ಸಲ್ಲಿಸಿರುವುದಿಲ್ಲ. ದಿನಾಂಕ: 21.07.2025 ರ ಒಳಗಾಗಿ ಕಛೇರಿಗೆ ಈ ಕುರಿತು ವರದಿ ಸಲ್ಲಿಸದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತಿನ ಕ್ರಮ ಜರುಗಿಸಲಾಗುದು ಎಂದು ಈ ಮೂಲಕ ತಿಳಿಸಲಾಗಿದೆ.