ನವದೆಹಲಿ: ಅರಬ್ಬಿ ಸಮುದ್ರದಲ್ಲಿ 20 ಲಕ್ಷ ಬ್ಯಾರೆಲ್ ತೈಲ ಹೊತ್ತಿದ್ದ ಭಾರತೀಯ ಟ್ಯಾಂಕರ್ ಮೇಲೆ ಇರಾನ್ ನೌಕಾಪಡೆ ದಾಳಿ ನಡೆಸಿದ ಬೆನ್ನಲ್ಲೇ, ಭಾರತ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA), ಭಾರತದಲ್ಲಿರುವ ಇರಾನ್ ರಾಯಭಾರಿಗೆ ಸಮನ್ಸ್ ನೀಡಿ ವಿವರಣೆ ಕೇಳಿದೆ.
ಭಾರತೀಯ ಹಡಗಿನ ಮೇಲೆ ನಡೆಸಲಾದ ಗುಂಡಿನ ದಾಳಿಯು ಅಂತರಾಷ್ಟ್ರೀಯ ಸಮುದ್ರ ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಇರಾನ್ ರಾಯಭಾರಿಯನ್ನು ಕಚೇರಿಗೆ ಕರೆಸಿಕೊಂಡ ವಿದೇಶಾಂಗ ಇಲಾಖೆಯ ಉನ್ನತ ಅಧಿಕಾರಿಗಳು ದೇಶದ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
“ನಮ್ಮ ಹಡಗುಗಳು ಮತ್ತು ಸಿಬ್ಬಂದಿಗಳ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಇಂತಹ ಘಟನೆಗಳು ಎರಡೂ ದೇಶಗಳ ನಡುವಿನ ಸುದೀರ್ಘ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಬಹುದು” ಎಂದು ಭಾರತ ಎಚ್ಚರಿಸಿದೆ.
ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಇರಾನ್ ರಾಯಭಾರಿ, ಅದು ಕೇವಲ ತಪಾಸಣೆಯ ಪ್ರಯತ್ನವಾಗಿತ್ತು ಮತ್ತು ಉದ್ದೇಶಪೂರ್ವಕ ದಾಳಿಯಲ್ಲ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾರೆ ಎನ್ನಲಾಗಿದೆ.








