ಬೆಂಗಳೂರು : ರಾಜಾಜೀನಗರ ಬೈಕ್ ಶೋ ರೂಮ್ ನಲ್ಲಿ ಆಕಸ್ಮಿಕ ಬೆಂಕಿ ದುರಂತದಲ್ಲಿ ಮೃತಪಟ್ಟ ಪ್ರಿಯಾ ಅವರ ಮನೆಗೆ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ಪ್ರಿಯಾ ಅವರ ಕುಟುಂಬ ವರ್ಗ ಗಾಂಧಿನಗರದ ಓಕಳಿಪುರಂ ನಲ್ಲಿ ನೆಲೆಸಿದ್ದು, ಸಚಿವರ ಭೇಟಿ ವೇಳೆ, ಶೋ ರೂಮ್ ಮಾಲೀಕರ ವಿರುದ್ಧ ಕುಟುಂಬ ವರ್ಗದವರು ಅಸಮಾಧಾನ ವ್ಯಕ್ತಪಡಿಸಿದರು. ಶೋ ರೂಮ್ ಮಾಲೀಕರು ಯಾರು ಕೂ ಇಲ್ಲಿಯ ವರೆಗೆ ಏನು ಎಂದು ಕೇಳಲು ಬಂದಿಲ್ಲ. ಶಾಸಕರಾಗಿ ನೀವೇ ನಮಗೆ ನ್ಯಾಯ ಒದಗಿಸಬೇಕು ಎಂದು ಪ್ರಿಯಾ ಅವರ ತಂದೆ ಸಚಿವದಿನೇಶ್ ಗುಂಡೂರಾವ್ ಅವರ ಬಳಿ ಮನವಿ ಮಾಡಿದರು.
ಯುವತಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಸಚಿವ ದಿನೇಶ್ ಗುಂಡೂರಾವ್, ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಶೋ ರೂಮ್ ಮಾಲೀಕರನ್ನ ಕರೆದು ಚರ್ಚಿಸುವುದಾಗಿ ಪ್ರಿಯಾ ಅವರ ತಂದೆ ತಾಯಿ ಅವರಿಗೆ ಭರವಸೆ ನೀಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ದಿನೇಶ್ ಗುಂಡೂರಾವ್, ಪ್ರಿಯಾ ಅವರ ಭರ್ತ್ ಡೇ ಇರುವಾಗ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದು ಬೇಸರ ತರಿಸಿದೆ. ಅವರ ತಂದೆ ತಾಯಿ ಮಕ್ಕಳನ್ನ ಕಷ್ಟಪಟ್ಟು ಓದಿಸಿದ್ದಾರೆ.
ಅಚಾನಕ್ಕಾಗಿ ಈ ರೀತಿ ಸಾವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಬೇಸರ ವ್ಯಕ್ತ ಪಡಿಸಿದರು. ಕುಟುಂಬ ವರ್ಗಕ್ಕೆ ಪರಿಹಾರ ಒದಗಿಸಿಕೊಡವೇಕು. ಇನ್ಸೂರೆನ್ಸ್ ಇದೆಯಾ ಎಂಬುದನ್ನ ವಿಚಾರಿಸಬೇಕಿದೆ. ಶೋ ರೂಮ್ ಮಾಲೀಕರೊಂದಿಗೂ ಚರ್ಚಿಸಿದ ಬಳಿಕ ಪರಿಹಾರ ದೊರಕಿಸಿಕೊಡುವುದಾಗಿ ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.